ಮೈಸೂರು: ನಟ ದರ್ಶನ್ ಮೇಲೆ ಅಂಧಾಭಿಮಾನ ಎಷ್ಟು ದಿನ ಇರುತ್ತೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್ ಅವರು ದರ್ಶನ್ ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪರ ಅಗ್ರಹಾರದಲ್ಲಿರುವ ನಟ ದರ್ಶನ್ ಅವರು, ರಾತ್ರಿಯೆಲ್ಲಾ ನಿದ್ದೆ ಮಾಡದೇ ಕಂಗಾಲಾಗಿದ್ದಾರೆ. ಒಂದೆಡೆ ನೆಚ್ಚಿನ ನಟ ಜೈಲಿನಲ್ಲಿರುವುದನ್ನು ಸಹಿಸಲಾಗದೇ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ದರ್ಶನ್ ಅವರ ಖೈದಿ ಸಂಖ್ಯೆ 6106ನ್ನು ಬೈಕ್ ನೋಂದಣಿ ಮಾಡಿಸಿಕೊಳ್ಳಲು ಅನೇಕ ಅಭಿಮಾನಿಗಳು ಕಾಯುತ್ತಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂಎಲ್‌ಸಿ ಹೆಚ್.ವಿಶ್ವನಾಥ್ ಅವರು, ದರ್ಶನ್ ಮೇಲೆ ಜನತೆಗೆ ಅಂಧಾಭಿಮಾನ ಎಷ್ಟು ದಿನ ಇರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಜನರಿಗೆ ನೆನಪಿನ ಶಕ್ತಿ ಬೇಗ ಹೊರಟು ಹೋಗುತ್ತೆ. ಹೆಣ್ಣಿಗಾಗಿ ನಟ ದರ್ಶನ್ ಜೈಲಿಗೆ ಹೋಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಅಭಿಮಾನ ಇರಬೇಕು. ಆದರೆ ಅಂಧಾಭಿಮಾನ ಇರಬಾರದು. ಯಾರೇ ತಪ್ಪು ಮಾಡಿದ್ರೂ ಅದು ತಪ್ಪೇ. ನಟ ದರ್ಶನ್‌ಗೆ ಕಾನೂನಿನಡಿ ಶಿಕ್ಷೆ ಆಗುತ್ತದೆ. ಒಂದು ಹೆಣ್ಣಿಗಾಗಿ ಅಮಾಯಕನ ಜೀವ ಹೋಗಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.





