Mysore
19
overcast clouds
Light
Dark

ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಹಾಲಿನ ದರ 2 ರೂ ಹೆಚ್ಚಳ ಮಾಡಿರುವುದನ್ನು ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಮರ್ಥಿಸಿಕೊಂಡಿದ್ದು, ಅಲ್ಲದೇ ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಹಾಲಿನ ದರ ಏರಿಕೆಗೆ ಬಿಜೆಪಿ ಮತ್ತು ರಾಜ್ಯದ ಜನತೆ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರು ರೈತ ವಿರೋಧಿಗಳು. ಜಾಸ್ತಿಯಾಗಿರುವ 2ರೂ ರೈತರಿಗೆ ತಲುಪುತ್ತೆ. ರೈತರಿಗೆ ಹಣ ತಲುಪೋಲ್ಲ ಅನ್ನೋದನ್ನು ಯಾರು ಹೇಳಿದ್ರು ಎಂದು ಪ್ರಶ್ನೆ ಮಾಡಿದ ಅವರು, ಕೆಎಂಎಫ್‌ ಉಳಿದರೆ ರೈತರು ಉಳಿದಂತೆ ಎಂದಿದ್ದಾರೆ.

ರೈತರು ಸಾಲದಿಂದ ಎಲ್ಲಾ ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಿಜೆಪಿಯವರ ರೈತ ವಿರೋಧಿ ಧೋರಣೆ ಎದ್ದು ಕಾಣುತ್ತಿದೆ. ಬೇರೆ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನೋಡಲಿ. ಆ ಮೇಲೆ ದರ ಏರಿಕೆ ಬಗ್ಗೆ ಮಾತನಾಡಲಿ ಎಂದು ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ.

ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು. ಕೆಎಂಎಫ್‌ ಎಂದರೆ ರೈತರ ಒಕ್ಕೂಟ. ನನ್ನ ಪ್ರಕಾರ ಇನ್ನೂ ಹಾಲಿನ ದರ ಜಾಸ್ತಿ ಮಾಡಬೇಕು. ಯಾರೂ ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ ಎಂದು ಬಿಜೆಪಿ ನಾಯಕರಿಗೆ ಟಾಂಗ್‌ ಕೊಟ್ಟರು.