ಚಿಕ್ಕಮಗಳೂರು: ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿಗೆ ತೆರಳುವ ಪ್ರವಾಸಿಗರು ಇನ್ನು ಮುಂದೆ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ ತೆರಳಬೇಕಿದೆ.
ಈ ಬಗ್ಗೆ ಈಗಾಗಲೇ ಚಿಕ್ಕಮಗಳೂರು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಮುಂದಿನ ವಾರದಿಂದಲೇ ಈ ನಿಯಮ ಜಾರಿಗೆ ಬರಲಿದೆ. ದಿನಕ್ಕೆ 600 ವಾಹನಗಳಿಗೆ ಮಾತ್ರ ಗಿರಿಭಾಗಕ್ಕೆ ತೆರಳಲು ಅವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬರುವ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ, ಬಾಬಾ ಬುಡನ್ ಗಿರಿ, ದರ್ಗಾ ಸೇರಿದಂತೆ ಇಲ್ಲಿನ ಪ್ರವಾಸಿ ತಾಣಗಳಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಗಿರಿಭಾಗಕ್ಕೆ ಬರುತ್ತಾರೆ. ಇದರಿಂದ ಗಿರಿಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಬಗ್ಗೆ ಪರಿಸರ ಪ್ರೇಮಿಗಳು ಅಸಮಾಧಾನ ಹೊರಹಾಕುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆನ್‌ಲೈನ್ ಮೂಲಕ ನೋಂದಣಿ ಮಾಡಿ ದಿನಕ್ಕೆ ನಿರ್ದಿಷ್ಟ ವಾಹನಗಳನ್ನು ಮಾತ್ರ ಬಿಡಲು ಚಿಂತನೆ ನಡೆಸಿದೆ.
ಇನ್ನೂ ಅಲ್ಲಿ ವಾಹನ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ದಿನಕ್ಕೆ ಎರಡು ಸಮಯದಲ್ಲಿ 600 ವಾಹನಗಳಿಗೆ ಮಾತ್ರ ಗಿರಿಭಾಗಕ್ಕೆ ತೆರಳಲು ಅವಕಾಶ ಕಲ್ಪಿಸಲಿದೆ. ಬೆಳಿಗ್ಗೆ 9 ಗಂಟೆಗೆ 300 ವಾಹನ, ಮಧ್ಯಾಹ್ನ 2 ಗಂಟೆಗೆ 300 ವಾಹನಗಳಿಗೆ ಮಾತ್ರ ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ.
ಇನ್ನೂ ಮಳೆಗಾಲದ ಆರಂಭದಲ್ಲೇ ಚಾರಣಕ್ಕೆ ನಿಷೇಧ ಹಾಕಿರುವುದು ಟ್ರಕ್ಕಿಂಗ್ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಇಲ್ಲಿಗೆ ಸಾವಿರಾರು ಪ್ರವಾಸಿಗರು ಅರಣ್ಯ ಇಲಾಖೆ ನಿಯಮಗಳನ್ನು ಪಾಲಿಸಿಕೊಂಡು ಚಾರಣ ಮಾಡುತ್ತಿದ್ದರು. ಈಗ ಚಾರಣಕ್ಕೆ ನಿಷೇಧ ಹೇರಲಾಗಿದ್ದು, ನಿಬಂಧನೆಗಳೊಂದಿಗೆ ಚಾರಣಕ್ಕೆ ಅವಕಾಶ ನೀಡಿ ಎಂಬ ಒತ್ತಾಯ ಕೇಳಿ ಬರುತ್ತಿದೆ.