Mysore
20
clear sky

Social Media

ಬುಧವಾರ, 28 ಜನವರಿ 2026
Light
Dark

ಪೊಲೀಸ್‌ ಸಹಾಯವಾಣಿ ಅನಗತ್ಯ ಕರೆ ಮಾಡಿದ್ದಲ್ಲಿ ಕಠಿಣ ಕ್ರಮ

ಬೆಂಗಳೂರು: ಸಕಾರಣವಿಲ್ಲದೆ ಪೊಲೀಸ್‌ ಸಹಾಯವಾಣಿ 112 ಕ್ಕೆ ಅನಗತ್ಯ ಕರೆಗಳು ಬರುತ್ತಿರುವುದು ಹೆಚ್ಚಾಗಿದೆ. ಅನಗತ್ಯ ಹಾಗೂ ತಮಾಷೆಗಾಗಿ ಕರೆ ಮಾಡಿ ತೊಂದರೆ ಕೊಟ್ಟಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ.

ಸಕಾರಣವಿಲ್ಲದೇ ಕರೆ ಮಾಡಿ ಸಣ್ಣ-ಪುಟ್ಟ ವಿಚಾರಕ್ಕೆ ಹೊಯ್ಸಳ ಸಿಬ್ಬಂದಿಯನ್ನು ಕರೆಸಿಕೊಂಡು ಕಮಾಂಡ್‌ ಸೆಂಟರ್‌ ಮತ್ತು ಹೊಯ್ಸಳ ಸಿಬ್ಬಂದಿಯ ಕಾಲಹರಣ ಮಾಡುವಾಗ ನಿಜವಾಗಿಯೂ ಸಮಸ್ಯೆಯಲ್ಲಿ ಇರುವವರಿಗೆ ನೆರವು ಸಿಗದೇ ಅವರು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ ಎಂದು ಇಲಾಖೆ ಕಳವಳ ವ್ಯಕ್ತಪಡಿಸಿದೆ.

ನೀವು ಟೈಂಪಾಸ್‌ ಮಾಡುವ ಸಮಯದಲ್ಲಿ ಒಂದು ಜೀವ ಹೋಗಬಹುದಾದ ಸಂಭವ ಇರುತ್ತದೆ. ಯಾರೋ ಆತ್ಮಹತ್ಯೆಗೆ ಯತ್ನಿಸಿರಬಹುದು, ಅಮಾಯಕರ ಮೇಲೆ ರೌಡಿಗಳು ಹಲ್ಲೆಗೆ ಮುಂದಾಗಿರಬಹುದು. ಸಕಾಲದಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋದರೆ ಅವರ ಜೀವ ಉಳಿಸಬಹುದಾಗಿದೆ. ಹೀಗಾಗಿ ಹುಡುಗಾಟಿಕೆಗೆ 112ಕ್ಕೆ ಕರೆ ಮಾಡುವುದನ್ನು ನಿಲ್ಲಿಸಿ. ಇನ್ನು ಮುಂದೆ ಈ ರೀತಿಯ ಅನಗತ್ಯ ಕರೆಗಳು ಬಂದಲ್ಲಿ ಅಂತಹ ನಂಬರ್‌ ಅನ್ನು ತಾತ್ಕಾಲಿಕವಾಗಿ 24 ಗಂಟೆ ಬ್ಲಾಕ್‌ ಮಾಡಲಾಗುತ್ತದೆ. ಪದೇ ಪದೇ ಫ್ರಾಡ್‌ ಕಾಲ್‌ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

Tags:
error: Content is protected !!