ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೋಟೆ ಬೆಟ್ಟಕ್ಕೆ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದವರ ಮೇಲೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಗಲಾಟೆ ಮಾಡಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ರಸ್ತೆಯಲ್ಲಿ ಹೋಗುವ ವಿಚಾರಕ್ಕೆ ಗಲಾಟೆ ಶುರು ಮಾಡಿದ್ದು, ನಂತರ ಹೆಲ್ಮೆಟ್‌ನಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಕ್ಕಳು ಹಾಗೂ ಮಹಿಳೆಯರು ಭಯದಿಂದ ಚೀರಾಡುತ್ತಿರುವುದು ಮೊಬೈಲ್‌ನಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಕಾಣಿಸುತ್ತಿದೆ.
ಪುತ್ತೂರಿನಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತ ಪ್ರವಾಸಕ್ಕೆಂದು ಸೋಮವಾರಪೇಟೆಯ ಕೋಟೆಬೆಟ್ಟಕ್ಕೆ ಆಗಮಿಸಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಪುಂಡರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿರುವ ಆರೋಪಿಗಳಿಬ್ಬರು ಮಾದಾಪುರ ಸಮೀಪದ ನಿವಾಸಿಗಳೆಂಬ ಶಂಕೆ ವ್ಯಕ್ತವಾಗಿದೆ.
ಆರೋಪಿಗಳು ಹಲ್ಲೆ ಮಾಡಿದ್ದ ಸ್ಥಳದಲ್ಲೇ ಪ್ರವಾಸಿಗರ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದವರು ಮಾದಾಪುರ ಉಪ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





