ನವದೆಹಲಿ: ಒಂದೆಡೆ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಯುಜಿಸಿ ನೆಟ್ ಪರೀಕ್ಷೆಯನ್ನು ಪರೀಕ್ಷೆ ನಡೆದ ಮರುದಿನವೇ ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಇದರ ವಿರುದ್ಧ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎನ್‌ಟಿಎ ಸಂಸ್ಥೆಯನ್ನು ರದ್ದುಗೊಳಿಸಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಈ ನಡುವೆ ಎನ್‌ಟಿಎ ಸಂಸ್ಥೆಯು ಜಂಟಿ ಸಿಎಸ್‌ಐಆರ್ ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಿದೆ.
ಸಿಎಸ್‌ಐಆರ್ ಯುಜಿಸಿ-ನೆಟ್ ಪರೀಕ್ಷೆಯನ್ನು ಅನಿವಾರ್ಯ ಕಾರಣಗಳು ಹಾಗೂ ಲಾಜಿಸ್ಟಿಕ್ ಸಮಸ್ಯೆಗಳಿಂದ ಮುಂದೂಡಲಾಗಿದೆ ಎಂದು ಎನ್‌ಟಿಎ(ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ) ಸಂಸ್ಥೆ ಶುಕ್ರವಾರ(ಜೂ.21) ಪ್ರಕಟಿಸಿದೆ.
ಜೂನ್ 25 ರಿಂದ 27 ರ ನಡುವೆ ನಡೆಯಬೇಕಿದ್ದ ಈ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಎನ್‌ಟಿಎ ಹೇಳಿದೆ.
ವಿಜ್ಞಾನ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್, ಉಪನ್ಯಾಸಕ, ರಾಷ್ಟ್ರೀಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಅಧ್ಯಯನ ಹಾಗೂ ಕೆಲಸ ಮಾಡಲು ಅರ್ಹತೆ ಪಡೆಯಬೇಕಾದರೆ ಸಿಎಸ್‌ಐಆರ್ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು.