Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಾಂಚನಗಂಗಾ ಯೋಗಾಸನಕ್ಕೂ ಸೈ – ಬೈಕಿಂಗಿಗೂ ಸೈ

ಕೀರ್ತಿ ಎಸ್. ಬೈಂದೂರು

ನಗುಮೊಗದ ಕಾಂಚನ ಗಂಗಾ ಅವರಿಗೆ ಯೋಗವೇ ಬದುಕು. ಯಾವುದೋ ನಿರ್ದಿಷ್ಟ ಉದ್ದೇಶದಿಂದ ಯೋಗ ಕಲಿಯಬೇಕೆಂದು ಬಂದವರು ಯೋಗವನ್ನು ಪ್ರೀತಿಸುವಂತೆ ಮಾಡುತ್ತಾರೆ. ಇವರ ಜ್ಞಾನ, ಆಧ್ಯಾತ್ಮದ ಬಿಂದು ಯೋಗ ಮತ್ತು ಧ್ಯಾನವೇ ಆಗಿದೆ. ಕಾಂಚನಾ ಅವರ ತಾಯಿ ಯೋಗಶಿಕ್ಷಕಿಯಾಗಿದ್ದರೆ, ಅತ್ತೆಯವರು ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಮನೆ ಜನರು ಕರಗತ ಮಾಡಿಕೊಂಡ ಯೋಗ ಸಹಜವಾಗಿ ಇವರನ್ನು ಆವರಿಸತೊಡಗಿತು. ನಾಲ್ಕನೇ ವಯಸ್ಸಿನಲ್ಲಿರುವಾಗ ಅಮ್ಮ ಯೋಗ ಮಾಡುವುದನ್ನು ಬೆರಗುಗಣ್ಣಿನಿಂದ ನೋಡುತ್ತಾ, ಅದನ್ನು ಅನುಸರಿಸುತ್ತಿದ್ದರು. ಮನೆಯೇ ಇವರ ಮೊದಲ ಯೋಗಶಾಲೆ. ನಂತರ ೫-೬ರ ವಯಸ್ಸಿನಲ್ಲಿರುವಾಗ ಶಾಲೆಯಲ್ಲಿ ಇವರ ಯೋಗ ಶೈಲಿಯನ್ನು ಕಂಡ ಶಿಕ್ಷಕರು ತಡಮಾಡದೇ, ತಮ್ಮ ತರಗತಿಗೆ ಕಳಿಸುವಂತೆ ಇವರ ತಂದೆ ತಾಯಿಯವರಲ್ಲಿ ಕೇಳಿದರು. ಮನೆಯವರು ಸಮ್ಮತಿಸಿದ್ದೂ ಆಯಿತು. ಮನೆಯನ್ನು ಹೊರತುಪಡಿಸಿದರೆ, ಯೋಗವನ್ನು ಶಿಸ್ತುಬದ್ಧವಾಗಿ ಅಧ್ಯಯನ ಮಾಡಲು ಆರಂಭಿಸಿದ್ದು ಇಲ್ಲಿಂದಲೇ.

ಇರುವ ಐವತ್ತು ಅರವತ್ತು ವಿದ್ಯಾರ್ಥಿಗಳಲ್ಲಿ ಇವರ ಯೋಗವನ್ನು ಕಂಡು, ಖುಷಿಯಾಗಿ ಸ್ಪರ್ಧೆಗಾಗಿ ತಯಾರು ಮಾಡಬೇಕೆಂದಾಗ ಕಾಂಚನಾ ಅವರಿಗೆ ಒಂಬತ್ತು ವರ್ಷ. ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಯೋಗ ಕಲೆಯನ್ನು ಪ್ರದರ್ಶಿಸಿ, ಅರ್ಹತೆ ಪಡೆದುಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. ಪೋರ್ಚುಗಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಇವರಿಗೆ ಕಂಚಿನ ಪದಕ ದೊರೆಯಿತು. ಬದುಕಿನ ಮೈಲಿಗಲ್ಲೊಂದನ್ನು ಸಾಽಸಿದ ಸಂಭ್ರಮದ ಜೊತೆಗೆ, ತಮ್ಮ ಹತ್ತನೇ ವರ್ಷದ ಜನ್ಮ ದಿನವನ್ನು ನೆನಪಲ್ಲಿ ಉಳಿವಂತೆ ಹಬ್ಬವಾಗಿಸಿ ಆಚರಿಸಿದರು. ಮತ್ತೆ ಇಟಲಿಯಲ್ಲಿ ನಡೆಯಬೇಕಿದ್ದ ಸ್ಪರ್ಧೆಗೂ ಆಯ್ಕೆಯಾದರು. ನಂತರ ಶೈಕ್ಷಣಿಕವಾಗಿ ತಮ್ಮನ್ನು ತೊಡಗಿಸಿಕೊಂಡರು. ಹೀಗೆ ಓದಿನಲ್ಲಿ ನಿರತರಾಗುತ್ತಾ, ಯೋಗದೆಡೆಗೆ ಆಸಕ್ತಿ ಕಡಿಮೆಯಾಯಿತು ಎನ್ನುವಾಗ ತಾಯಿಯವರಿಂದ ಮತ್ತೆ ಯೋಗಕ್ಕೆ ಮರಳಿದರು. ಯೋಗಶಿಕ್ಷಕರಾಗಿದ್ದ ಕಾಂಚನಾ ಅವರ ತಾಯಿ ಗರ್ಭಿಣಿಯರಿಗಾಗಿ ವಿಶೇಷ ಯೋಗ ತರಗತಿಗಳನ್ನು ನಡೆಸುತ್ತಿದ್ದರು. ‘ಅವರಿಗೆಲ್ಲ ನೀನೇ ಕ್ಲಾಸ್ ಮಾಡು’ ಎಂದ ತತ್‌ಕ್ಷಣದ ತಾಯಿಯ ಮಾತಿಗೆ ಕಂಗಾಲಾದರು. ಆಗುವುದಿಲ್ಲವೆಂದು ಎಷ್ಟು ಗೋಗರೆದರೂ ಮನೆ ಜನರೆಲ್ಲ ಧೈರ್ಯ ತುಂಬಿದರು. ಹತ್ತನೇ ತರಗತಿ ಮುಗಿಸಿ, ಪಿಯುಸಿಗೆ ಕಾಲಿಟ್ಟ ಘಳಿಗೆಯದು. ಅಮ್ಮನ ಬಳಿ ಏನು, ಹೇಗೆ ಯೋಗ ಹೇಳಿಕೊಡಬೇಕೆಂದು ಸಲಹೆ ಪಡೆದರು.

ಆರು ತಿಂಗಳಿಂದ ಯೋಗವನ್ನು ಅಭ್ಯಾಸ ಮಾಡುತ್ತಿದ್ದ ಕಾರಣಕ್ಕಾಗಿ, ಅಷ್ಟೇನೂ ಕಷ್ಟವಾಗಲಿಲ್ಲ. ಕಾಂಚನಾ ಅವರ ಬದುಕಿನಲ್ಲಿ ಯೋಗ ಹೇಳಿಕೊಡುವ ಅಧ್ಯಾಯ ಆರಂಭವಾಗಿದ್ದು ಹೀಗೆ. ಮನೋಶಾಸ್ತ್ರಜ್ಞರಾಗಬೇಕೆಂದು ಕನಸು ಕಂಡು, ಅದರತ್ತವೇ, ಅಧ್ಯಯನಶೀಲರಾಗಿದ್ದರು. ಆದರೆ ಬದುಕು ಕನಸು ಕಟ್ಟಿದ ರೀತಿಯೇ ಬೇರೆ.

ಮನಃಶಾಸ್ತ್ರದಲ್ಲೇ ಪದವಿಯನ್ನು ಪಡೆದು, ಶಿಕ್ಷಕರಾಗ ಬೇಕೆಂದು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದ ವೇಳೆಯಲ್ಲೇ ವಿದೇಶಕ್ಕೂ ಹೋಗುವ ಅವಕಾಶ ಒದಗಿ ಬಂತು. ವಿದ್ಯಾರ್ಥಿ ಜೀವನವನ್ನು ಅನುಭವಿಸುವ ಎಂದು ತಂದೆ ಅಂದು ಎಚ್ಚರಿಸಿದ್ದನ್ನು ಇವತ್ತಿಗೂ ನೆನಪು ಮಾಡಿಕೊಳ್ಳುತ್ತಾರೆ. ಇದರೊಂದಿಗೆ ಮುಕ್ತವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಇನ್ನೇನು ದಾಖಲಾಗಬೇಕು ಎನ್ನುವಾಗಲೇ ಒಂದಷ್ಟು ಜನ ಯೋಗ ಕಲಿಸಿಕೊಡಬೇಕೆಂದು ಒತ್ತಾಯಿಸಿದರು. ಅಂದು ಕಲಿಕೆಗೆ ತೊಡಗಿದವರು ಇಂದಿಗೂ ತಮ್ಮ ವಿದ್ಯಾರ್ಥಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಯೋಗಶಿಕ್ಷಕರೆಂದು ಹೇಳಿಕೊಳ್ಳಬೇಕಾದರೆ ಸರ್ಟಿಫಿಕೇಟ್ ಕೋರ್ಸುಗಳು ಮಾಡಿಕೊಳ್ಳಬೇಕೆಂದು ಅನೇಕರು ಹೇಳಿದ್ದಕ್ಕಾಗಿ, ಗಂಗೆಯ ತಟದಲ್ಲಿರುವ ಹೃಷಿಕೇಶಕ್ಕೆ ತೆರಳಿ, ಯೋಗವನ್ನು ಅಭ್ಯಸಿಸಿದರು. ಅಂಗರಚನಾಶಾಸ್ತ್ರ, ಶರೀರಶಾಸ್ತ್ರಕ್ಕೆ ಸಂಬಂಽಸಿದಂತೆ ಅನೇಕ ತರಗತಿಗಳು ಇರುತ್ತಿದ್ದು, ಬಹುಶಿಸ್ತೀಯ ಅಧ್ಯಯನ ವಿಷಯವಾಗಿ ಯೋಗ ಬೆಳೆದಿರುವುದನ್ನು ಗಮನಿಸಿದರು.

ಇತ್ತೀಚೆಗೆ ಒಂದು ತಿಂಗಳಲ್ಲಿ ಕಲಿತ ಯೋಗ ವನ್ನು ಕೆಲವರು ವೃತ್ತಿಯಾಗಿ ಸ್ವೀಕರಿಸಿದ್ದರೂ ಸಮರ್ಪಕವಾದ ಯೋಗಕ್ಕೆ ಪ್ರಾಶಸ್ತ್ಯ ನೀಡಬೇಕೆನ್ನುತ್ತಾರೆ. ಕಾಂಚನಾ ಅವರಿಗೆ ಬೈಕ್ ಸವಾರಿ ಯೆಂದರೆ ತೀರದ ಆಸಕ್ತಿ. ಮೈಸೂರಿನಲ್ಲಿ ಬೈಕ್ ಸವಾರಿ ಮಾಡುವ ಕೆಲವೇ ಕೆಲ ತರುಣಿಯರ ಪಟ್ಟಿಯಲ್ಲಿ ಇವರ ಹೆಸರೂ ಇದೆ. ಇವರೊಂದಿಗೆ ಈಗಾಗಲೇ ಬೈಕ್‌ನಲ್ಲಿ ಹಲವು ಕಡೆಗಳಿಗೆ ಹೋಗಿಬಂದಿರುವ ತಾಯಿಯವರಿಗೆ ಅಯೋಧ್ಯೆಗೂ ಮಗ ಳೊಂದಿಗೆ ಹೋಗಬೇಕೆಂಬ ಆಸೆಯಿದೆ. ಮಹಿಳೆಯರು ಯೋಗ ಕಲಿಯಲೇಬೇಕೆಂಬ ಕಾಂಚನಾ ಅವರು ಈಗಲೂ ಯೋಗ ಶಿಕ್ಷಕಿಯಾಗಿ ಮುಂದುವರಿದಿದ್ದಾರೆ.

Tags: