Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬೆಳೆ ವಿಮೆಯ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸಿ: ಎನ್ ಚಲುವರಾಯಸ್ವಾಮಿ

ಮಂಡ್ಯ: ಆರೋಗ್ಯ ಹಾಗೂ ವಾಹನಗಳಿಗೆ ವಿಮೆ ಮಾಡಿಸುವ ರೀತಿ, ಬೆಳೆ ವಿಮೆ ಮಾಡಿಸುವುದನ್ನು ಸಹ ಪ್ರತಿ ವರ್ಷ ರೈತರು ನಿರಂತರವಾಗಿ ರೂಡಿಸಿಕೊಳ್ಳಬೇಕು. ಬೆಳೆ ವಿಮೆಯಲ್ಲಿ ಶೇ 98 ರಷ್ಟು ಹಣ ಸರ್ಕಾರ ಹಾಗೂ ಶೇ 2 ಮಾತ್ರ ರೈತರು ಪಾವತಿಸುತ್ತಾರೆ. ಇದರ ಉಪಯುಕ್ತತೆಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಅವರು ಇಂದು(ಜೂ.19) ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮುಂಗಾರು ಹಂಗಾಮು ಪೂರ್ವಸಿದ್ಧತಾ ಸಭೆ ನಡೆಸಿ ಮಾತನಾಡಿದರು.

ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಸಮಸ್ಯೆಗಳೊಂದಿಗೆ ಆಗಮಿಸಿದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹೆಸರು, ದೂರವಾಣಿ ಸಂಖ್ಯೆಯನ್ನು ಪಟ್ಟಿ ಮಾಡಿಕೊಳ್ಳಿ. ಕೆಲಸವಾದ ನಂತರ ಅವರಿಗೆ ಕರೆ ಮಾಡಿ ತಿಳಿಸಿ, ಕಾನೂನು ತೊಡಕಿದ್ದಾರೆ ಮನವರಿಕೆ ಮಾಡಿ ಕೊಡಿ. ಇದರ ಜೊತೆಗೆ ಕೈ ಗೊಂಡಿರುವ ಕ್ರಮದ ವರದಿಯನ್ನು ಪ್ರತಿ ಮಾಹೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿ. ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಶಾಸಕರು, ಸಚಿವರ ಕಚೇರಿ ಅಲೆದಾಡುವುದು ತಪ್ಪುತ್ತದೆ ಎಂದರು.

ಜಿಲ್ಲೆಯಲ್ಲಿ 97 ಖಾಸಗಿ ಬೋರ್ ವೆಲ್ ಗಳಿಂದ ಒಪ್ಪಂದ ಮಾಡಿಕೊಂಡು ಬರದ ಹಿನ್ನಲೆ ಕುಡಿಯುವ ನೀರು ಪಡೆಯಲಾಗುತ್ತಿದೆ. ಜೂನ್ ಮಾಹೆಯಲ್ಲಿ ಉತ್ತಮ ಮಳೆಯಾಗಿದ್ದು, ಬೋರ್ ವೆಲ್ ಗಳಲ್ಲಿ ನೀರು ಮರು ಪೂರ್ಣವಾಗಿರುತ್ತದೆ. ಪರಿಶೀಲನೆ ನಡೆಸಿ ಖಾಸಗಿ ಬೋರ್ ವೆಲ್ ಗಳಿಂದ ನೀರು ಪಡೆಯುತ್ತಿರುವುದನ್ನು ಕೈ ಬಿಡಿ. ಅವಶ್ಯಕತೆ ಇದ್ದ ಕಡೆ ಹೊಸ ಬೋರ್ ವೆಲ್ ಕೊರೆಯಿಸಿ ಎಂದು ಹೇಳಿದರು.

ಈ ಹಿಂದೆ ಖಾಸಗಿ ಬೋರ್ ವೆಲ್ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ಬಿಲ್ ಪಾವತಿಯಾಗಿಲ್ಲ ಎಂದು ದೂರುಗಳು ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಗಳು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಮಹಜಾರ್ ಮಾಡಿ ಬಿಲ್ ಪಾವತಿಸಿ ಎಂದರು.

ಡಿಸೆಂಬರ್ ಅಂತ್ಯದೊಳಗೆ ಇಲಾಖೆಗಳು ಶೇ100 ರಷ್ಟು ಗುರಿ ಸಾಧಿಸಿ: ಏಪ್ರಿಲೆ, ಮೇ ಮಾಹೆಯಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಇಲಾಖಾ ಕಾರ್ಯಕ್ರಮಗಳು ಪ್ರಾರಂಭವಾಗಿಲ್ಲ. ಡಿಸೆಂಬರ್ ಅಂತ್ಯದೊಳಗೆ ಶೇ 100 ರಷ್ಟು ಗುರಿ ಸಾಧನೆಯಾಗುವಂತೆ ಯೋಜನೆ ರೂಪಿಸಿ. ಜುಲೈ 10 ರೊಳಗಾಗಿ ಕಾರ್ಯಕ್ರಮಗಳಿಗೆ ಅವಶ್ಯಕವಿರುವ ಟೆಂಡರ್ ಪ್ರಕ್ರಿಯೆಗಳನ್ನು ಪ್ರಾರಂಭಿಸಿ ಎಂದರು.

ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆಯ ಕೇಂದ್ರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದರು.

ಮಣ್ಣು ಪರೀಕ್ಷೆ ಆಂದೋಲನ: ರೈತರು ಬೆಳೆಯುವ ಬೆಳೆ ಹಾಗೂ ಮಣ್ಣಿಗೆ ನೀಡಬೇಕಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಮಣ್ಣು ಪರೀಕ್ಷೆ ಆಂದೋಲನ ನಡೆಸುವಂತೆ ಶಾಸಕ ರಾಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದರು.

ಒಂದು ತಾಲ್ಲೂಕನ್ನು ನೋಡಲ್ ತಾಲೂಕಾಗಿ ಆಯ್ಕೆ ಮಾಡಿ ಮಣ್ಣನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿ ಪರೀಕ್ಷೆಯ ನಂತರ ವರದಿ ಹಾಗೂ ಸಲಹೆಗಳನ್ನು ರೈತರ ಮೊಬೈಲ್ ಸಂಖ್ಯೆಗೆ ಒದಗಿಸುವ ರೀತಿ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು‌.

ಜಿಲ್ಲಾಧಿಕಾರಿ ಡಾ ಕುಮಾರ ಅವರು,  ಸಭೆಗೆ ಪ್ರಸಕ್ತ ಸಾಲಿನ ಮಳೆ ವಿವರ, 2024-25 ನೇ ಸಾಲಿನ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನ ಕೃಷಿ ಬೆಳೆಗಳ ವಿಸ್ತೀರ್ಣದ ಗುರಿ, ಬಿತ್ತನೆ ಪ್ರಗತಿ ಪ್ರಸಕ್ತ ಸಾಲಿನ ಪ್ರಮುಖ ಕೃಷಿ ಬೆಳೆಗಳ ಬಿತ್ತನೆ ಪರಿಸ್ಥಿತಿ, ತಾಲ್ಲೂಕು ವಾರು ಬಿತ್ತನೆ ಬೀಜ ಪರಿಸ್ಥಿತಿ, 2024 ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆವಾರು ಬಿತ್ತನೆ ಬೀಜದ ವಿವರ, ಭತ್ತ ಮತ್ತು ರಾಗಿ ಬಿತ್ತನೆ ಬೀಜಗಳ ಬೇಡಿಕೆ ಮತ್ತು ದಾಸ್ತಾನು ವಿವರ, ರಸಗೊಬ್ಬರ ಬೇಡಿಕೆ ಹಾಗೂ ವಿತರಣೆ ವಿವರ, ಪಿ.ಎಂ ಕಿಸಾನ್ ಯೋಜನೆಯ ಪ್ರಗತಿ ವರದಿ, 2024-25 ನೇ ಪೂರ್ವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ವಿವರ, 2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಪ್ರಗತಿ, ವಿಪತ್ತು ನಿರ್ವಹಣೆ, ಮನೆ ಹಾನಿ ಮತ್ತು ಪಾವತಿ ವಿವರಗಳು, ಬೆಳೆ ನಷ್ಟದ ವಿವರಗಳು, , ಪರಿಹಾರ ವಿತರಣೆ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಸಭೆಯಲ್ಲಿ ವಿಧಾನಸಭಾ ಶಾಸಕರಾದ ಗಣಿಗ ರವಿಕುಮಾರ್, ಉದಯ್, ದರ್ಶನ್ ಪುಟ್ಟಣ್ಣಯ್ಯ, ಹೆಚ್.ಟಿ ಮಂಜು, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ವಿವೇಕಾನಂದ, ಮೈ ಶುಗರ್ ಅಧ್ಯಕ್ಷರಾದ ಸಿ.ಡಿ ಗಂಗಾಧರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ:ಪಿ.ಸಿ ಜಾಫರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಪರ ಜಿಲ್ಲಾಧಿಕಾರಿ ಡಾ ಎಚ್ ಎಲ್ ನಾಗರಾಜ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: