ಹೊಸದಿಲ್ಲಿ: ಮೊನ್ನೆಯಷ್ಟೇ (ಜೂನ್ 4) ಹೊರಬಿದ್ದ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಜಯಭೇರಿ ಬಾರಿಸಿ ಸಂಸದೆಯಾಗಿ ಆಯ್ಕೆಯಾದ ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿರುವ ಕಂಗನಾ ಜಯದ ಖುಷಿಯಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಚಂಡೀಗಢ ವಿಮಾನ ನಿಲ್ದಾಣದ ನಿರ್ಬಂಧಿತ ಸ್ಥಳದಲ್ಲಿ ತಾನು ನಿಂತಿದ್ದಾಗ ಸಿಐಎಸ್‌ಎಫ್ ಮಹಿಳಾ ಕಾನ್ಸ್ಟೇಬಲ್ ಕಪಾಳಮೋಕ್ಷ ಮಾಡಿದ್ದಾಗಿ ಸ್ವತಃ ನಟಿ ಕಂಗನಾ ಆರೋಪಿಸಿದ್ದಾರೆ. ದೆಹಲಿ ತಲುಪಿದ ಕೂಡಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಾ ನಿರ್ದೇಶಕರಾದ ನೀನಾ ಸಿಂಗ್ ಅವರಿಗೆ ಘಟನೆಯ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ.
ಇನ್ನು ಕಂಗನಾಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.