ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆ ಯಲ್ಲಿ ಇಂಡಿಯಾ ಮೈತ್ರಿಕೂಟದ ಹೋರಾಟಕ್ಕೆ ಜನಮನ್ನಣೆ ಸಿಕ್ಕಿದೆ. ಇದು ಅಧಿಕಾರ ಶಾಹಿತ್ವದ ವಿರುದ್ಧದ ಹೋರಾಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಜನರು ದೇಶದ ರಾಜಕೀಯ ಮತ್ತು ಸಂವಿಧಾನದ ಅಪಾಯವನ್ನು ಅರ್ಥಮಾಡಿಕೊಂಡಿದ್ದು, ಸಂವಿಧಾನವನ್ನು ರಕ್ಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇಂಡಿಯಾ ಮೈತ್ರಿ ಕೂಟದ ಹೋರಾಟಕ್ಕೆ ಮನ್ನಣೆ ನೀಡಿದ ದೇಶದ ಜನತೆಗೆ ಧನ್ಯವಾದ ಎಂದು ತಿಳಿಸಿದರು.
ಇಂಡಿಯಾ ಮೈತ್ರಿಕೂಟದಿಂದ ಸರ್ಕಾರ ರಚನೆಯ ಸಾಧ್ಯತೆಗಳ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಪಾಲುದಾರರೊಂದಿಗೆ ಇಂದು ಸಭೆ ನಡೆಸುತ್ತೇವೆ. ಮೈತ್ರಿ ಪಾಲುದಾರರನ್ನು ಗೌರವಿಸುತ್ತೇವೆ. ಅವರನ್ನು ಕೇಳದೆ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದರು.
ದೇಶದಲ್ಲಿ ಸಂವಿಧಾನ ಉಳಿಸಲು ಹೋರಾಟ ಮಾಡಬೇಕಿತ್ತು. ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಜನರು ಮೊದಲ ಹೆಜ್ಜೆ ಇಟ್ಟಿದ್ದಾರೆ. ಬಿಜೆಪಿಯವರು ಟಿಡಿಪಿ ಮತ್ತು ಜೆಡಿಯು ಆಸರೆಯಲ್ಲಿ ನಿಂತಿದ್ದಾರೆ. ನಾವು ಈಗಲೇ ಯಾವುದನ್ನೂ ನಿರ್ಧಾರ ಮಾಡುವುದಿಲ್ಲ ಎಂದಿದ್ದಾರೆ.
ಬುಧವಾರ ಇಂಡಿಯಾ ಕೂಟದ ಮಿತ್ರ ಪಕ್ಷಗಳ ಸಭೆ ಇದ್ದು, ಅವರ ಜತೆ ಚರ್ಚಿಸಿದ ನಂತರ ವಷ್ಟೇ ನಾವು ಸರ್ಕಾರ ರಚನೆ ಮಾಡುತ್ತೇವೋ, ಇಲ್ಲವೋ ಎಂಬುದನ್ನು ಹೇಳುತ್ತೇವೆ. ಇಂಡಿಯಾ ಮೈತ್ರಿ ಕೂಟದ ಮಿತ್ರ ಪಕ್ಷಗಳ ಹೋರಾಟಕ್ಕೆ ಜನಮನ್ನಣೆ ಸಿಕ್ಕಿದೆ. ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎಗೆ ಹಿನ್ನಡೆಯಾಗುವ ಮೂಲಕ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.