ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಈ ಬಾರಿಯ ಲೋಕಸಭಾ ಕಣದಿಂದ ಹಿಂದೆ ಸರಿದು ಎನ್‌ಡಿಎ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟರು.
ಇದಾದ ಬಳಿಕ ಅವರಿಗೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ಬಿಜೆಪಿ ಹೇಳಿತ್ತು. ಅದರಂತೆ ಈಗ ಸುಮಲತಾ ಅವರಿಗೆ ಹೈಕಮಾಂಡ್ ಕೊಟ್ಟ ಮಾತಿನಂತೆ ಸ್ಥಾನಮಾನ ನೀಡಲು ಮುಂದಾಗಿದೆ ಎನ್ನಲಾಗಿದೆ. ಬಹುತೇಕ ಸುಮಲತಾ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದೇ ಜೂನ್.13 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಸುಮಲತಾ ಅವರಿಗೆ ಮೂರು ಸ್ಥಾನಗಳಲ್ಲಿ ಒಂದು ಅಭ್ಯರ್ಥಿ ಸ್ಥಾನವನ್ನು ನೀಡಲಿದೆ ಎಂದು ವರದಿಯಾಗಿದೆ.
ಒಟ್ಟು 66 ಶಾಸಕರನ್ನು ಹೊಂಡದಿರುವ ಬಿಜೆಪಿ ತನ್ನ ಪಕ್ಷದಿಂದ ಮೂವರನ್ನು ಆಯ್ಕೆ ಮಾಡಲಿದ್ದು, ಈ ಮೂವರ ಪೈಕಿ ಸುಮಲತಾ ಅವರಿಗೆ ಸ್ಥಾನಮಾನ ಸಿಗಲಿದೆ. ಇವರ ಜತೆಗೆ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ಪ್ರೊ. ಎಂ. ನಾಗರಾಜ್ ಹೆಸರನ್ನು ಸಹಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಕಾರ್ಯದರ್ಶಿ ಜಿ.ವಿ ರಾಜೇಶ್ ಒಟ್ಟು 9 ಜನರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಇದರಲ್ಲಿ ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಜೆಸಿ ಮಾಧುಸ್ವಾಮಿ, ಸಿಟಿ ರವಿ, ಮಾಳವಿಕಾ ಅವಿನಾಶ್, ಗೀತಾ ವಿವೇಕಾನಂದ, ಸಿ ಮಂಜುಳ ಹೆಸರನ್ನು ಸೂಚಿಸಲಾಗಿದೆ.