ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ʼಇಂಡಿಯಾʼ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಕೇವಲ 48 ಗಂಟೆಗಳಲ್ಲಿ ನೂತನ ಪ್ರಧಾನಿಯನ್ನು ನೇಮಕ ಮಾಡಲಾಗುವುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
ಅವರು ಪಿಟಿಐಗೆ ನೀಡಿದ ಸಂದರ್ಶನದ ವೇಳೆ ಪ್ರಧಾನಿ ಅಭ್ಯರ್ಥಿ ಬಗ್ಗೆ ಮಾತನಾಡಿದ್ದಾರೆ. ಈ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲುವ ಮೂಲಕ ಪಕ್ಷ ಸ್ವಾಭಾವಿಕವಾಗಿ ನಾಯಕತ್ವ ಉಳಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ʼಇಂಡಿಯಾʼ ಕೂಟವು 272 ಸ್ಥಾನಗಳ ಸರಳ ಬಹುಮತಕ್ಕಿಂತ ಹೆಚ್ಚಿನ ಸೀಟ್‌ಗಳನ್ನು ಗೆಲ್ಲಲಿದೆ. ಈ ಬಾರಿ ಇಂಡಿಯಾಗೆ ಜನರ ಬೆಂಬಲವಿದ್ದು, ಎನ್‌ಡಿಎ ಮೈತ್ರಿಕೂಟದಿಂದ ಕೆಲವೊಂದು ಪಕ್ಷಗಳು ನಮ್ಮ ಮೈತ್ರಿಗೆ ಸೇರಲಿವೆ. ಈ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.
2004ರಲ್ಲಿ ನಡೆದ ರೀತಿಯಲ್ಲಿಯೇ ಈ ಬಾರಿಯೂ ಚುನಾವಣೆ ನಡೆಯುತ್ತದೆ. 2024ರಲ್ಲೂ ಕಾಂಗ್ರೆಸ್ ಮತ್ರಿಕೂಟ ಸರ್ಕಾರ ರಚನೆ ಮಾಡುತ್ತದೆ. ರಾಜಸ್ಥಾನ್, ಕರ್ನಾಟಕ, ತೆಲಂಗಾಣದಲ್ಲಿ ಈ ಬಾರಿ ಹೆಚ್ಚಿನ ಸೀಟ್‌ಗಳು ಬರಲಿವೆ. ಉಳಿದಂತೆ ಬೇರೆ ಕಡೆಗಳಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳಿಗೆ ತೃಪ್ತಿ ಪಡೆದುಕೊಳ್ಳಲಿದೆ ಎಂದೂ ನುಡಿದರು.