ಶ್ರೀರಂಗಪಟ್ಟಣ: ತಾಲೂಕಿನ ಕೂಡಲಕುಪ್ಪೆ ಗ್ರಾಮದ ಆಲೆಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಲೆಕ್ಟ್ರಾನಿಕ್ ಉಪಕರಣ ಹಾಗೂ ಅಪಾರ ಪ್ರಮಾಣದ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ.
ಶನಿವಾರ(ಮೇ.25) ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ಯುವಕರು ಬೆಂಕಿಯ ಜ್ವಾಲೆ ನೋಡಿದ ತಕ್ಷಣ ಮಾಲೀಕರಿಗೆ ಕರೆ ಮಾಡಿದ್ದಾರೆ. ಆಲೆಮನೆ ಮಾಲೀಕ ಸ್ಥಳಕ್ಕೆ ಬರುವಷ್ಟರಲ್ಲಿ ೩ ಮೋಟರ್, ಬೈಲರ್, ವಿದ್ಯತ್ ಸಂಪರ್ಕ ಕಲ್ಪಿಸುವ ಉಪಕರಣ, ಆಲೆಮನೆಯ ಮೇಲ್ಚಾವಣೆ ಸುಟ್ಟು ಭಸ್ಮವಾಗಿವೆ.
ಸು.೪ ಲಕ್ಷ ಬೆಲೆಬಾಳುವ ವಸ್ತುಗಳು ಬೆಂಕಿಗೆ ಸುಟ್ಟು ಹೋಗಿವೆ. ಸಾಲ ಮಾಡಿ ಬದುಕು ರೂಪಿಸಿಕೊಂಡಿದ್ದ ನನಗೆ ದಿಕ್ಕು ತೋಚದಂತಾಗಿದೆ ಎಂದು ಆಲೆಮನೆ ಮಾಲೀಕ ಕೆ.ಟಿ ರವೀಂದ್ರ ಅಳಲು ತೋಡಿಕೊಂಡಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿರುವುದಾಗಿ ಹೇಳಲಾಗುತ್ತಿದೆ. ಸುದ್ದಿ ತಿಳಿದ ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.