ಡಾ.ಎಲ್.ಜಿ.ಮೀರಾ
ಮೈಸೂರಿನ ಕುಕ್ಕರಹಳ್ಳಿ ಕೆರೆ. ಬೆಳಗಿನ ಶಾಂತ ವಾತಾವರಣದಲ್ಲಿ ಕೆರೆಯನ್ನು ಕಣ್ಣುಂಬಿಕೊಳ್ಳೋಣ ಎಂದು ಬಂದವಳು ನಾನು. ಇನ್ನೂ ಆರು ಗಂಟೆಯಷ್ಟೆ ಹೀಗಾಗಿ ಜನಸಂಚಾರ ಅಷ್ಟಿಲ್ಲ. ವಾಯುವಿಹಾರ ಮಾಡುವ ಕೆಲವರು ಆಗೀಗ ಹಾದುಹೋಗುತ್ತಿದ್ದಾರೆ… ಅಲ್ಲಿ ಆ ಬೆಂಚಿನ ಮೇಲೆ ಕುಳಿತಿರುವವರು.
ಯಾರು? ಓಹ್, ಅಸ್ಮಿತಾ! ಬಹುಶಃ ಅಸ್ಮಿತಾ ಕೂಡ ನನ್ನಂತೆ, ಮುಂಜಾನೆಯ ಶಾಂತ ವಾತಾವರಣವನ್ನು ಸವಿಯಲೆಂದೇ ಬಂದಿರಬೇಕು.
ನಾನು ಕುಳಿತ ಬೆಂಚಿನಿಂದ ನೋಡಿದರೆ ಅಸ್ಮಿತಾ ಸ್ಪಷ್ಟವಾಗಿ ನನಗೆ ಕಾಣುತ್ತಾಳೆ. ತನ್ನ ಎದುರಿಗಿರುವ ನೀರಿನ ಮೇಲೆ ಅವಳ ದೃಷ್ಟಿ ನೆಟ್ಟಿದೆ. ನಾನು ಅವಳನ್ನು ಗಮನಿಸುತ್ತಿದ್ದೇನೆ ಎಂದು ಅವಳಿಗೆ ಗೊತ್ತಾದಂತಿಲ್ಲ. ಏನು ಯೋಚಿಸುತ್ತಿರಬಹುದು ಅಸ್ಮಿತಾ? “ತನ್ನ ಹೆಸರು ಅಸ್ಮಿತಾ, ಆದರೆ ತನ್ನ ಅಸ್ಮಿತೆ ಯಾವುದು?” ಎಂದು ಅವಳು ಕೇಳಿಕೊಳ್ಳುತ್ತಿರಬಹುದೇ?” ಅಥವಾ ಈ ಹುಡುಕಾಟದಲ್ಲಿದ್ದಾಳೆ ಎಂಬುದು ನನ್ನ ಭ್ರಮೆಯೋ…….. ಅಪರ್ಣಾ, ಹಾಗೆ ನೋಡಿದರೆ ಎಲ್ಲರೂ ತಮ್ಮ ಅಸ್ಥಿತೆಯ ಹುಡುಕಾಟದಲ್ಲಿರುವವರೇ ಅಲ್ಲವೇ? ನಿನ್ನನ್ನೂ ಸೇರಿಸಿದಂತೆ. ಅದಕ್ಕೆ ಅಸ್ಮಿತಾ ಎಂಬ ಹೆಸರನ್ನೇನು ವ್ಯಕ್ತಿ ಹೊಂದಿರಬೇಕಿಲ್ಲ … ಯಾರು ಹೀಗೆ ಗುದ್ದಿದ್ದು ನನ್ನ? ಗಾಳಿ ಬೀಸಿ ಕೆರೆಯಲ್ಲಿ ಎದ್ದ ಅಲೆಗಳೇ? ನೇರ ಮತ್ತು ಕಹಿ ಸತ್ಯಗಳು. ತಡಬಡಾಯಿಸುವಂತಾಯಿತು ನನಗೆ.
ಅಸ್ಮಿತಾಗೆ ನಲವತ್ತು ನಲವತ್ತೆರಡು ವರ್ಷ ಅನ್ನಿಸುತ್ತೆ. ನನಗಿಂತ 4-5 ವರ್ಷ ಚಿಕ್ಕವಳಿರಬೇಕು. ಅವಳದು ತುಸು ಸ್ಕೂಲ ಕಾಯ ಚಿಕ್ಕ ಜಡೆ, ಕೂದಲು ನೆರೆತು, ತುಸು ಉದುರಿ ಕೆಲವು ಕಡೆ ಬೋಳುತಲೆ ಕಾಣುತ್ತಿದೆ. ಅವಳು ತೊಟ್ಟಿರುವ ಪೈಜಾಮಾ ಮತ್ತು ಕುರ್ತಾ, ಚಳಿಗೆಂದು ಹೊದ್ದಿರುವ ಶಾಲು ಅವಳ ವಯಸ್ಸನ್ನು ತುಸು ಜಾಸ್ತಿ ಎಂಬಂತೆ ತೋರಿಸುತ್ತಿವೆಯೇ ಹೊರತು ಕಡಿಮೆಯಂತೂ ಅಲ್ಲ. ತುಸು ಕಂದು ಬಣ್ಣದ ಚರ್ಮ ಹೊಂದಿರುವ ಅವಳು ತನ್ನ ಯೌವನ ಕಾಲದಲ್ಲಿ ತುಂಬ ಸುಂದರವಾಗಿದ್ದಿರಬೇಕು. ಈಗಲೂ ಚಂದ ಅನ್ನಿಸುವ ನಗು ಮತ್ತು ಹೊಳೆಯುವ ಅವಳ ಕಣ್ಣುಗಳು ಇದಕ್ಕೆ ಸಾಕ್ಷಿ. ಅಪ್ರಮೇಯನನ್ನು ಈ ನಗು ಮತ್ತು ಕಣ್ಣುಗಳೇ ಸೆಳೆದಿರಬೇಕು. ಒಟ್ಟಿನಲ್ಲಿ ಇಷ್ಟಂತೂ ನಿಜ. ಸೌಂದರ್ಯವು ತನ್ನ ಕುರುಹುಗಳನ್ನು ಉಳಿಸಿ ಮಧ್ಯವಯಸ್ಸಿನವರಲ್ಲಿ ಮತ್ತು ವೃದ್ಧರಲ್ಲಿ ಹಳಹಳಿಕೆ ಉಂಟು ಮಾಡುವ ಅಭ್ಯಾಸ ಹೊಂದಿದೆ, ಅಯ್ಯೋ ..
ಕುಳಿತು ಸಾಕಾಯಿತೆಂಬಂತೆ ಅಸ್ಮಿತಾ ಏಳುತ್ತಾಳೆ. ಓಹ್, ನನ್ನ ಕಡೆಯೇ ಬರುತ್ತಿದ್ದಾಳೆ? “ಹಲೋ… ಅಪರ್ಣ, ಆರಾಮಾ?” ಎನ್ನುತ್ತಾಳೆ ನಗುತ್ತಾ. ನಾನು ಕೂಡ ಮುಗುಳು ಆರಾಮು. ಬೇಗ ಬಂದ್ರಾ ನೀವು?” ಎನ್ನುತ್ತೇನೆ. “ಹೂಂ… ಬೆಳಗಿನ ಜಾವ ಕೆರೆ ನೋಡೋಣ ಅಂತ ಬಂದೆ. ಅಲ್ಲಿ ಕೂತ್ರೆ ಬರೀ ಸೊಳ್ಳೆ ಕಾಟ. ಎದ್ದು ಬಂದೆ. ನೀವು ಸಿಕ್ಕಿದ್ದು ಒಳ್ಳೇದಾಯಿತು” ಎನ್ನುತ್ತಾಳೆ. ಇಬ್ಬರೂ ಕೆರೆಯ ಅಂಚಿನ ಗುಂಟ ನಡೆಯಲಾರಂಭಿಸುತ್ತೇವೆ. ಮೈಸೂರಿಗೆ ಬಂದು ತಲುಪಿದ ರೀತಿ, ಮಕ್ಕಳ ಸಾಹಿತ್ಯ ಕಮ್ಮಟದ ಆಯೋಜಕರು ಮಾಡುವ ಕಿರಿಕಿರಿಗಳು, ರಾತ್ರಿ ತನಗೆ ಫ್ಯಾನಿನ ತೊಂದರೆಯಿಂದ ನಿದ್ದೆ ಬರದೆ ಹೋಗಿದ್ದು ಇತ್ಯಾದಿ ಅದೂ ಇದೂ ಮಾತಾಡುತ್ತಾಳೆ. ಅಸ್ಮಿತಾ, ದಯವಿಟ್ಟು ನಿನ್ನ ಒಳಗನ್ನಿಷ್ಟು ತೆರೆಯೇ ಸಾಕು ಈ ಅರ್ಥಹೀನ ಬಡಬಡಿಕೆಗಳು. ಅಹಹಹಾ ಅಮ್ಮಣ್ಣಿಯರಾ, ನಿಮ್ಮ ಮಾತುಗಳ ಬಹುಭಾಗ ಇಂತಹ ದೈನಿಕಗಳ ಬಗ್ಗೆಯೇ ಇರುತ್ತದಲ್ಲ. ನಿಜಕ್ಕೂ ಮುಖ್ಯವಾದ ವಿಷಯಗಳ ಬಗ್ಗೆ ಬೇರೆಯವರ ಜೊತೆ ಇರಲಿ, ಸ್ವತಃ ನಿಮ್ಮೊಂದಿಗೂ ಮಾತಾಡಿಕೊಳ್ಳಲು ಹಿಂಜರಿಯುತ್ತೀರಾ, ಥ ಆಷಾಢಭೂತಿಗಳು ಕಣೇ ನೀವು!’ ನಮ್ಮ ಸುತ್ತಲಿನ ಗಾಳಿ ಅಣಕಿಸಿತು.
ಅಸ್ಮಿತಾ ಮತ್ತು ನಾನು ಒಂದೇ ಬ್ಯಾಂಕಿನಲ್ಲಿ ಕೆಲಸ ಮಾಡುವುದು. ಭಾವನೆಗಳ ಸುಳಿವೂ ಇರಬಾರದಂಥ ದೈನಿಕ ದಂದುಗ ನಮ್ಮ ಪಾಲಿನದು. ಅಂಕಿಗಳ ಮತ್ತು ನೋಟುಗಳ ಜೊತೆ ಗುದ್ದಾಡಿಕೊಂಡಿರಬೇಕಾದ ಕೆಲಸ. ನಾನು ಮತ್ತು ಅವಳು ಸಾಹಿತ್ಯ ಕ್ಷೇತ್ರದಲ್ಲಿ ಅಷ್ಟಿಷ್ಟು ಗುರುತಿಸಿಕೊಂಡಿರೋದರಿಂದ ಸಾಹಿತ್ಯದ ಕಾರ್ಯಕ್ರಮಗಳಿಗೆ ಆಗಾಗ ಬರುತ್ತಿರುತ್ತೇವೆ. ಈಗಲೂ ಅಷ್ಟೆ, ಪಿಯುಸಿ ಮಕ್ಕಳಿಗಾಗಿ ಮೈಸೂರಿನಲ್ಲಿ ನಡೆಯುತ್ತಿರೋ ಮೂರು ದಿನಗಳ ಸಾಹಿತ್ಯ ಕಮ್ಮಟಕ್ಕಾಗಿ ನಾವು ಬಂದಿದ್ದು. ಆ ಮಕ್ಕಳಿಗೆ ಕಥೆ, ಕವಿತೆ, ನಾಟಕಗಳ ಬಗ್ಗೆ ಒಂದಿಷ್ಟು ಹೇಳೋದಕ್ಕೆ. ಅನಿತಾಳಿಗೆ ಇಂತಹ ಕಾರ್ಯಕ್ರಮಗಳೆಂದರೆ ತುಂಬ ಉತ್ಸಾಹ. ಮಕ್ಕಳಂತೆ ಖುಷಿಯಾಗಿ ಪೋಟೋಗೆ ನಿಲ್ಲುವುದು, ಅದನ್ನು ವಾಟ್ಸಾಪಿಗೋ, ಫೇಸ್‌ಬುಕ್ಕಿಗೋ ಹಾಕುವುದೆಂದರೆ ಅವಳಿಗೆ ತುಂಬ ಖುಷಿ
ಅಸಿತಾ ನಂಗೆ ಮೊದಲು ಪರಿಚಯವಾದ ರೀತಿ ನೆನಪಿನಲ್ಲಿ ದೀರ್ಘಕಾಲ ಉಳಿಯುವಂಥದ್ದು. ಮೊದ್ಲು ಒಂದು ಕವಿಗೋಷ್ಠಿಯಲ್ಲಿ ಭೇಟಿ ಮಾಡಿದಾಗ ನಾನು ಅಸ್ಮಿತಾ, ಅಪ್ರಮೇಯನ ಹೆಂಡತಿ” ಅಂತ ಗುರುತು ಹೇಳಿಕೊಂಡ್ಲು, ಒಹ್. ಅಪ್ರಮೇಯ! ಸಾಕಷ್ಟು ಹೆಸರಿರೋ ಕವಿ. ಆಕರ್ಷಕ ಮಾತುಗಾರ. ಒಬ್ಬ ಕವಿಯ ಹೆಂಡತಿಯನ್ನು ಭೇಟಿಯಾದೆನಲ್ಲ ಅಂತ ನಂಗೆ ನಿಜಕ್ಕೂ ಖುಷಿಯಾಯ್ತು.
ಆದರೆ ನನ್ನ ಈ ಸರಳ ಖುಷಿ ತುಂಬ ದಿನ ಉಳಿಯಲಿಲ್ಲ. ಇದಕ್ಕೆ ಕಾರಣ ಮುಂದೆ ನಡೆದ ಒಂದು ವಿದ್ಯಮಾನ. ಇದೇ ಅಸ್ಮಿತಾ ಕೆಲವು ತಿಂಗಳ ನಂತರ ನಮ್ಮ ಬ್ರಾಂಚ್‌ಗೆ ವರ್ಗವಾಗಿ ಬಂದ್ಲು. ನಾನು ಅವಳನ್ನು ನಮ್ಮ ಮ್ಯಾನೇಜರ್‌ಗೆ ಪರಿಚಯ ಮಾಡಿಕೊಡುವಾಗ ಸಹಜ ಸಂಭ್ರಮದಿಂದ ಹೇಳೆ ಇವು ಕವಿತೆ ಬರೀತಾರೆ ಸರ್. ಮತ್ತೆ ಇವು, ಅಪಮೇಯ ಅನ್ನೋ ಕವಿಗಳ ಹೆಂಡತಿ” ಅಂತ. ಮ್ಯಾನೇಜರರ ಕೊಠಡಿಯಿಂದ ಹೊರಬಂದ ತಕ್ಷಣ ಮೆಲ್ಲಗೆ ಅಸ್ಥಿತಾ ಅಂದ್ಲು ನಾನು ಅಪ್ರಮೇಯ ಅವರ ಹೆಂಡತಿ ಅಂತ ಬ್ಯಾಂಕಲ್ಲಿ ಪರಿಚಯ ಮಾಡಿಕೊಡಬೇಡಿ ಅಪರ್ಣಾ”. ನಂಗೆ ಇದೇನಪ್ಪಾ ಅನ್ನಿಸ್ತು. ಗಂಡನ ಜೊತೆ ಏನಾದ್ರೂ ಜಗಳ ಮಾಡ್ಕೊಂಡಿದಾಳಾ? ಅಥವಾ ಇವಳು “ಉಗ್ರ ಸ್ತ್ರೀವಾದಿ’ ಯೋ ಹೇಗೆ? ಗಂಡನ ಹೆಸರಿನ ಮೂಲಕ ತನ್ನನ್ನು ಗುರುತಿಸಿಕೊಳ್ಳಲು ಇಷ್ಟ ಪಡೋದಿಲ್ಲವೋ? ಏನೋ.. ಯಾವೂದೂ ಬಗೆಹರಿಯಲಿಲ್ಲ ಆಗ,
ನಂತರ ಗೊತ್ತಾದ ವಿಷಯ ನನ್ನ ಮನ ನೋಯಿಸ್ತು. ಅಸಿತಾ ಅಪ್ರಮೇಯನ ‘ಕಾನೂನಾತಕ’ ಹೆಂಡತಿ ಅಲ್ಲ. ಅವನಿಗೆ ಬಹಳ ವರ್ಷಗಳ ಹಿಂದೆಯೇ ಯಶೋದಾ ಎಂಬ ಹೆಣ್ಣಿನೊಂದಿಗೆ ಶಾಸ್ರೋಕ್ತವಾಗಿ ಮದುವೆಯಾಗಿದೆ. ಆ ಮದುವೆಯ ಫಲವಾಗಿ ಅವನಿಗೆ ಕಾಲೇಜು ಓದುವ ವಯಸ್ಸಿನ ಒಬ್ಬ ಮಗಳಿದ್ದಾಳೆ! ಮತ್ತೆ ಅಸ್ಮಿತಾ? ‘ಅಯ್ಯೋ……..ಅಸ್ಮಿತೆಯ ಅಸ್ಮಿತೆ ಏನು?’ ಹೇನು ಕಚ್ಚಿದಾಗ ಆಗುವಂತೆ ನನ್ನ ತಲೆಯಲ್ಲಿ ಗದ್ದಲವಾಯಿತು.
“ಉಪಪತ್ನಿ, ಎರಡನೆ ಸಂಬಂಧ, ಪ್ರೇಮಿಕೆ, ಇಟ್ಟುಕೊಂಡವಳು, ಗೆಳತಿ, ಆತ್ಮಸಂಗಾತಿ, ಸಖಿ, ಕಳ್ಳಸಂಬಂಧ. ಅಬ್ಬ……….. ಎಲ್ಲಿಂದ ಬಂದವು ಈ ಎಲ್ಲ ಶಬ್ದಗಳು! ಏನೆಲ್ಲ ಹೆಸರುಗಳು! ಯಾರು ಇಟ್ಟದ್ದು ಇವನು!? ಅವರವರ ಹಿನ್ನೆಲೆ, ಮನೋಭಾವನೆ, ಸಹಾನುಭೂತಿಯ ಮಟ್ಟ ಇವುಗಳನ್ನು ಆಧರಿಸಿ ಅಸ್ಮಿತೆಯಂಥವರನ್ನು ಜನ ಬೇಕಾದಂತೆ ಕರೆಯುತ್ತಾರೆ’…. ಗೋಡೆಯ ಮೇಲಿದ್ದ ಚಿತ್ರವೊಂದರಲ್ಲಿ ಮಂಡಿಯ ನಡುವೆ ಮುಖ ಹುದುಗಿಸಿ ಅಳುತ್ತಿದ್ದ ಹುಡುಗಿ ಅಂದಳೇ? ‘ಹೆಂಗಸಿಗೆ ಈ ವಿಷಯದಲ್ಲಿ ಗಂಡಸಿಗಿಂತ ಮೂದಲಿಕೆ ಹೆಚ್ಚು. ದೇವರೇ, ಯಾಕೆ ನಿನ್ನ ಲೋಕ ನಿನ್ನದು ಅಪ್ಪಟ ಪುರುಷನಿರ್ಮಿತ!? ನೀನು ಪುರುಷನೋ, ಸ್ತ್ರೀಯೋ ಹೇಳು ಮತ್ತೆ ಕೇಳುತ್ತಿದ್ದಾಳೆ.
ಅಂದ ಹಾಗೆ ಅಸ್ಮಿತಾಳ ಈ ವೈವಾಹಿಕ ವಾಸ್ತವ ಸಾಹಿತ್ಯ ಕ್ಷೇತ್ರದ ಕೆಲವರಿಗಷ್ಟೇ ಗೊತ್ತಿತ್ತು. ನಮ್ಮ ಬ್ಯಾಂಕಿನಲ್ಲಿ ಹಲವರಿಗೆ ಇದರ ಮಾಹಿತಿ ಇರಲಿಲ್ಲ. ಅವರವರ ದೈನಂದಿನ ರಗಳೆಯಲ್ಲಿ ಇದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ? ಗೊತ್ತಾದರೆ ನಾಲ್ಕು ದಿನ ರೋಚಕ ಸುದ್ದಿ ಸಿಕ್ಕಿದ ಖುಷಿಯಲ್ಲಿ ಗುಸುಗುಸು ಪಿಸಪಿಸ ಮಾತಾಡಿಕೊಂಡು ಅಸ್ತಿತಾಳ ಮೋರೆ ಸಣ್ಣಗಾಗುವಂತೆ ಮಾಡುತ್ತಾರೆ ಅಷ್ಟೆ ‘ಹೆಣ್ಣಿನ ಮನದಾಳದಲ್ಲಿರುವ ಪ್ರೀತಿಯ ಅಗತ್ಯವನ್ನು ಲೋಕ ಗುರುತಿಸದಿದ್ದರೂ ಅವಳ ಶೀಲ, ಚಾರಿತ್ರ್ಯಗಳ ಬಗ್ಗೆ ಕಥೆ ಕಟ್ಟುವುದರಲ್ಲಿ ಅದು ತುಂಬ ಆಸಕ್ತವಾಗಿರುತ್ತದೆ, ಅಲ್ವಾ ಅಪ್ಪಿ? ಯಾರು ಹೀಗೆ ಉಸುರಿದ್ದು? ನಾನು ಅಡಿಗೆ ಮಾಡಿದ ನಂತರ ದಿನಾ ಕೈ ಒರೆಸಲು ಬಳಸುವ ಬಟ್ಟೆಯೇ?
ಬ್ಯಾಂಕ್‌ನಲ್ಲಿ ಅಸ್ಮಿತಾ ಎಲ್ಲರಂತೆ ಇರುತ್ತಿದ್ದಳು. ಊಟದ ಬಿಡುವಿನಲ್ಲಿ ಮನೆಯ ಬಗ್ಗೆ, ತನ್ನ ಅಮ್ಮನ ಬಗ್ಗೆ, ತಾನು ಸಾಕುತ್ತಿರುವ ನೆಂಟರ ಮಕ್ಕಳ ಬಗ್ಗೆ, ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರೂ ಯಾವತ್ತೂ ತನ್ನ ಗಂಡನ ಬಗ್ಗೆ, ತನ್ನ ವೈವಾಹಿಕ ಅವಸ್ಥೆಯ ಬಗ್ಗೆ ಮಾತಾಡುತ್ತಿರಲಿಲ್ಲ. ‘ಅಹಾ, ನೀವು ಹೆಂಗಸರು ಪಕ್ಕಾ ಆತ್ಮ ವಂಚಕಿಯರು ಕಣೇ. ನಿಮ್ಮನ್ನು ತುಂಬ ಕಾಡುವ ವಿಷಯಗಳ ಬಗ್ಗೆಯೇ ಅತಿ ಕಡಿಮೆ ಮಾತಾಡ್ತೀರ!! ಹೀಗೇ ಸಾಯ್ತಾ ಇರಿ. ಗಾಳಿ ಹೇಳಿದ್ದು ಕೇಳಿಸಿದರೂ ಕೇಳಿಸದಂತೆ ಸುಮ್ಮನಿದ್ದೆ ನಾನು.
ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಅಪ್ರಮೇಯ, ಅಸ್ಮಿತಾ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಸ್ಮಿತಾಳ ದೇಹಭಾಷೆಯಲ್ಲಿ, ವರ್ತನೆಯಲ್ಲಿ ತನ್ನವನ ಕುರಿತು ಕೊಂಚ ಆಪ್ತತೆ ಕಂಡರೂ ಅಪ್ರಮೇಯ ಎಂದೂ ಏನೂ ತೋರಿಸಿಕೊಳ್ಳುತ್ತಿರಲಿಲ್ಲ. ಅವಳು ತನಗೆ ಗೊತ್ತೇ ಇಲ್ಲವೇನೋ ಎಂಬಂತೆ ಇದ್ದುಬಿಡುತ್ತಿದ್ದ. ನನಗೆ ಅಸ್ಥಿತಾಳ ಸ್ಥಿತಿಯನ್ನು ನೆನೆದಾಗ ನೋವಾಗುತ್ತಿತ್ತು. ಇದೇನು ಅನ್ಯಾಯ? ಆಟಕ್ಕುಂಟು, ಲೆಕ್ಕಕ್ಕಿಲ್ಲದ ಸಂಬಂಧ……. ಕಿಟಕಿಯಿಂದ ಬರುತ್ತಿದ್ದ ಬಿಸಿಲಕೋಲು ನುಡಿಯಿತು, ‘ಅಪರ್ಣಾ, ಆ ಸಂಬಂಧದ ಬಗ್ಗೆ ನೀನು ಹೇಗೆ ತೀರ್ಮಾನಿಸುತ್ತೀಯ? … ನಿನಗೇನು ಗೊತ್ತು?’ ‘ಹೌದು ಬಿಸಿಲಕೋಲೇ, ನನಗೆ ಗೊತ್ತಿಲ್ಲ. ಆದರೂ ನನಗೆ ಒಮ್ಮೊಮ್ಮೆ ಗಂಡಸರಿಗೆ ಮಣೆ ಹಾಕುವ ಈ ವ್ಯವಸ್ಥೆಯ ಬಗ್ಗೆಯೇ ಕೋಪ ಬರುತ್ತೆ.
ತಲೆ ಚಿಟ್ಟು ಹಿಡಿದಂತಾಯಿತು ನನಗೆ. ಅಸ್ಮಿತಾ ಅಪ್ರಮೇಯನ ಹೆಂಡತಿ ಅನ್ನಿಸಿಕೊಂಡರೂ ಹೆಂಡತಿಯಲ್ಲ. ಆಪ್ತ ಅನಿಸಿಕೊಂಡರೂ ಆಪ್ತ ಅಲ್ಲ. ನಾಲ್ಕು ಜನರ ಮುಂದೆ ಯಾರೋ ಎಂಬಂತೆ ಇರುವ ಕರ್ಮ. ಅನಿತಾಳಿಗೆ ಬೇಸರ ಅನ್ನಿಸುವುದಿಲ್ವಾ? ಯಾಕೆ ಹೀಗೆ ಮಾಡಿಕೊಂಡಳು? ಯೌವನದಲ್ಲಿ ಮದುವೆಯಾಗದೆ ತುಸು ವಯಸ್ಸಾದ ನಂತರ ಮಾಡಿಕೊಂಡ ಒಪ್ಪಂದವಾ ಇದು? ಏನಿದರ ಕಥೆ? ಅಸ್ಮಿತಾಳೊಂದಿಗೆ ಕೆಲವು ಸಲ ಈ ಬಗ್ಗೆ ಮಾತಾಡೋಣ ಅನ್ನಿಸಿದರೂ ವೈಯಕ್ತಿಕ ವಿಚಾರವನ್ನು ಕೆದಕಲಾಗದ ಮುಜುಗರದಲ್ಲಿ ಸುಮ್ಮನಾಗುತ್ತಿದ್ದೆ.
“ನೋಡೇ ಅಪ್ಪಿ, ಸಾಹಿತ್ಯದ ಆಧಾರದಿಂದ ಉಂಟಾದ ಪ್ರೇಮದ ತಾದಾತ್ಯದ ಕ್ಷಣಗಳಲ್ಲಿ ಎರಡು ಜೀವಗಳು ಪರಸ್ಪರ ಒಲಿದಾಗ ಅದೇ ಅಂತಿಮ ಸತ್ಯ ಅನ್ನಿಸಬಹುದು. ಬದುಕಿನ ಸಾರ್ಥಕತೆ ದಕ್ಕಿದ ಕ್ಷಣ ಕಣೇ ಅದು. ಆ ಭಾವ ಆ ಎರಡು ಜೀವಗಳಿಗೆ ಮಾತ್ರ ಅರ್ಥವಾಗುವ, ಅವರ ಅನುಭವಕ್ಕೆ ಮತ್ತು ಪರಸ್ಪರ ತಲ್ಲೀನತೆಗೆ ನಿಲುಕುವ ವಿಷಯ ಕಣೇ. ಇದನ್ನು ಈ ದರಿದ್ರ ಲೋಕ ಯಾವತ್ತೂ ಅರ್ಥ ಮಾಡಿಕೊಳ್ಳಲ್ಲ, ನಿನ್ನಂಥ ಟೆಕ್ಸ್ ಬುಕ್ ಜೀವಿಗೂ ಅರ್ಥ ಆಗಲ್ಲ”. ನನ್ನನ್ನು ಅತಿ ಸೀರಿಯಸ್ ಎಂದು ಸದಾ ಆಡಿಕೊಳ್ಳುವ ಜುಲೈಕ ಹೇಳಿದ.
ಕೋಪ ಬಂತು ನನಗೆ…..ಆದರೆ ಜು… ಬದುಕು ಎಂದರೆ ಈ ಕೆಲವು ಸಾರ್ಥಕ ಕ್ಷಣಗಳಷ್ಟೇ ಅಲ್ಲವಲ್ಲ; ದಿನದಿನದ ರಗಳೆಗಳ ಸರಮಾಲೆಯಲ್ಲವೇ ಅದು. ವಾಸ್ತವಿಕ ಜೀವನದ ಸಮಸ್ಯೆಗಳು ಯಾರಿಗೆ ತಾನೇ ತಪ್ಪುತ್ತವೆ? ಅಸ್ಥಿತಾಳಂತಹವರನ್ನು ಒಂಟಿತನ ಕಾಡುವಾಗ ಅವರು ಏನು ಮಾಡಬೇಕು? ಮುಂದೆ ಅಪ್ರಮೇಯನಿಗೆ ಅಸ್ಥಿತಾಳ ಮೇಲೆ ಆಕರ್ಷಣೆ ಕಡಿಮೆಯಾದಾಗ ಏನಾಗಬಹುದು? ವಯಸ್ಸಾದಾಗ ಅಸ್ಮಿತಾಳ ಕಥೆ ಏನು?”
ನನ್ನೆಲ್ಲ ಒಳಹೊರಗುಗಳನ್ನು ಬಲ್ಲ ಹಾಗೂ ಅಸ್ಮಿತಾಳ ಪರಿಚಯವೂ ಇದ್ದ, ನೇರನುಡಿಯ ಕವಿಮಿತ್ರ ಜುಲೈ, ಕಾಫಿಡೇಯಲ್ಲಿ ತಾನು ಕುಡಿಯುತ್ತಿದ್ದ ಕಪ್ಪನ್ನು ಮೇಜಿನ ಮೇಲಿಟ್ಟು ಹೇಳಿದ. ಅಪರ್ಣಾ, ವಯಸ್ಸಾದಾಗ ನಿನ್ನ ಕಥೆ ಏನು? ನಿನ್ನ ಬಗ್ಗೆ ನಿನ್ನ ಗಂಡನಿಗೆ ಎಷ್ಟರ ಮಟ್ಟಿಗೆ ಆಕರ್ಷಣೆ ಇದೆ? ನಿನ್ನ ಆರೋಗ್ಯ, ನಿನ್ನ ಗಂಡನ ಆರೋಗ್ಯ ಹೀಗೇ ಇರುತ್ತದೆ, ಯಾವುದೂ ಕೊನೆಯವರೆಗೂ ಏನೂ ಬದಲಾಗಲ್ಲ ಎಂದು ನಿಶ್ಚಿತವಾಗಿ ಹೇಗೆ ಹೇಳುತ್ತೀಯ? ಸಾಫ್ಟ್‌ರಿಗರ ಸಾಮ್ರಾಜ್ಯವಾದ ಇಂದಿನ ಉದ್ಯೋಗ ಲೋಕದಲ್ಲಿ, ನಿನ್ನ ಮಕ್ಕಳು ಪ್ರಪಂಚದ ಯಾವ ಮೂಲೆಗೆ ಹೋಗುತ್ತಾರೋ ಯಾರಿಗೆ ಗೊತ್ತು? ನನಗಾಗಲೀ, ನಿನಗಾಗಲೀ, ಅಸ್ಮಿತಾ ಯಶೋಧಾರಿಗಾಗಲೀ, ಇಳಿವಯಸ್ಸಿನ ಜೀವನ ಹೀಗೆ ಇರುತ್ತೆ ಎಂದು ಯಾರು ಖಚಿತವಾಗಿ ಹೇಳಕ್ಕಾಗುತ್ತೆ?”
“ಯಾಕೆ ಜುಲ್ಫಿ, ಇಷ್ಟು ಕಹಿಯಾದ ಸತ್ಯ ಹೇಳುತ್ತೀಯ” ಕನಲಿದೆ ನಾನು, “ಅಯ್ಯೋ, ಕಹಿ ಏನು ಬಂತೇ ಅಪ್ಪಿ? ನಾಳೆ ಎಂದರೆ ಏನು ಎಂಬುದನ್ನು ಅರಿಯದ ಮನುಷ್ಯನ ದುರವಸ್ಥೆಯೇ? ಸಾಯುವವರೆಗೂ ಯಾರನ್ನೂ ಸುಖಿ ಎನ್ನದಿರು” ಎಂದು ಸಫೋಕ್ಲಿಸನೇ ಹೇಳಿಲ್ವಾ” ಅಂದ. ಸುಮ್ಮನಿದ್ದ ನನ್ನನ್ನು ನೋಡಿ ಸ್ವಲ್ಪ ಮೃದುಗೊಂಡು ಅಂದ.
“ಒಂಟಿತನ! ಅದು ಯಾರಿಗಿಲ್ಲ ಅಪ್ಪಿ? ಎಲ್ಲರಂತೆ ಮದುವೆಯಾಗಿ ಗಂಡನೊಡನೆ ಬದುಕುವ, ಎರಡು ಮಕ್ಕಳಿರುವ ನಿನಗಾಗಲೀ, ಅಪ್ರೇಮಯನ ‘ಕಾನೂನಾತ್ಮಕ’ ಹೆಂಡತಿಯಾದ ಯಶೋಧೆಗಾಗಲೀ ಒಂಟಿತನ ಇಲ್ವಾ? ಅಸ್ಮಿತಾ ಮಾತ್ರ ಒಂಟಿಯಾಗ್ತಾಳೆ ಅಂತ ಯಾಕೆ ಅಂದ್ಯೋತೀಯ?”
“ಜು … ಮಾಹಿತಿಕ್ರಾಂತಿಯ ಈ ಯುಗದಲ್ಲಿ ಮದುವೆ ಎಂಬ ಸಂಸ್ಥೆಯೇ ಶಿಥಿಲಗೊಳಿದೆ ಅಂತಾರಲ್ಲ, ಅದು ಯಾವಾಗ ತಾನೇ ಗಟ್ಟಿಯಾಗಿತ್ತು!?” “ಅಪ್ಪಿ, ಮದುವೆ ಎಂಬ ಈ ಮಾನವನಿರ್ಮಿತ ಸಂಸ್ಥೆ ಹುಟ್ಟಿದ್ದೇ ಸಂಭಾವ್ಯ ‘ಸುರಕ್ಷೆ’ಯ ಅಂತಿಮಫಲಕೋಸ್ಕರ ಕಣೇ. ಆದರೆ ಬದುಕಿನ ಸಮೀಕರಣದಲ್ಲಿ ಸುರಕ್ಷೆ ಒಂದು ಅಂಶವೇ ಅಲ್ಲ. ಬದಲಾವಣೆ ತಾನೇ ಬದುಕಿನ ನಿತ್ಯಸತ್ಯ!?”
ಜುಲ್ಫಿ ಇವತ್ತು ಯಾಕೋ ತುಂಬ ಮಾತಾಡುವ ಉಮೇದಿನಲ್ಲಿದ್ದ. “ಅಪ್ಪಿ, ‘ಉಪಪತ್ನಿ ತೃಪ್ತಿ ಅಲ್ಲ ಸರಿ. ಹಾಗಾದ್ರೆ ಧರ್ಮಪತ್ನಿ ಅನ್ನಿಸಿಕೊಂಡೋಳು ಸಂಪೂರ್ಣ ತೃಪ್ತಿಯೋ? ‘ಗಂಡನ ಸಂಪೂರ್ಣ ಪ್ರೀತಿ, ತಾದಾತ್ಯ ಅವಳಿಗೆ ಸಿಗುತ್ತಾ? ಮಂಟಪದಲ್ಲಿ ತಾಳಿ ಬಿಗಿದ ತಕ್ಷಣ ಅಲ್ಲೊಂದು ಅದ್ಭುತ ಪ್ರೇಮಕಥೆ ಮೂಡಿಬಿಡುತ್ತಾ? ಇಷ್ಟಾಗಿ ಪ್ರೇಮ, ತಲ್ಲೀನತೆ, ತಾದಾತ್ಯ, ಆತ್ಮಸಂಗಾತ…… ಇವೆಲ್ಲ ನಿನ್ನ ಬ್ಯಾಂಕಿನಲ್ಲಿ ಇಡುವ ಇಡುಗಂಟುಗಳೇನು? ಹಕ್ಕಿನಿಂದ ಯಾವಾಗೆಂದರೆ ಆವಾಗ ಅವುಗಳನ್ನು ಡ್ರಾ ಮಾಡಲು ಆಗುತ್ತೇನು?’ ಇವು ನನಗಾಗಿ ಮತ್ತು ಯಶೋಧೆಗಾಗಿ ಉದ್ಭವಿಸಿದ ಕಿರಿಕಿರಿ ಪ್ರಶ್ನೆಗಳು, ಯಾವಾಗಲೂ ಜೀವಂತವಾಗಿರುವ ಪ್ರಶ್ನೆಗಳಿವು. ಜುಲೈ ಅವನ್ನು ಈಗ ಮುಕ್ತವಾಗಿ ಕೇಳಿದ ಅಷ್ಟೆ, ಏನೆಂದು ಉತ್ತರಿಸುವುದು?
“ಅಪ್ಪಿ, ನೋಡೇ, ಮೊದಲ ಹೆಂಡತಿ, ಎರಡನೆಯ ಹೆಂಡತಿ……..ಈ ಎಲ್ಲ ಹಣೆಪಟ್ಟಿಗಳು ನಾವು ಹಚ್ಚುವಂಥವು ಅನ್ನಿಸುತ್ತೆ. ಬದುಕು ಇವೆಲ್ಲವನ್ನೂ ಮೀರಿ ಹರಿಯುವ ಜೀವನದಿ. ನಾ ಗಂಡಸು ಅಂತ ಹಂಗಂದೆ ಅಂಗ್ಲೋಬೇಡ ಮತ್ತೆ”.
ಜುಲ್ಫಿಯ ಮಾತು ನಿಜ ಅನ್ನಿಸ್ತು ನಂಗೆ
ಸಾಹಿತ್ಯ ಕಮ್ಮಟದ ಕೊನೆಯ ದಿನ ಮತ್ತೆ ಕೆರೆಯಂಚಿನ ದಾರಿ. ಮತ್ತೊಂದು ಶುಭ್ರವಾದ ಬೆಳಗು. ನಗುತ್ತ ಬರುತ್ತಿರುವ ಅಸ್ಮಿತಾ, ಅಪ್ರಮೇಯ, ಇನ್ನೊಂದಿಬ್ಬರು. ಏನೋ ತಮಾಷೆ ಮಾಡಿಕೊಂಡು, ಒಬ್ಬರನ್ನೊಬ್ಬರು ರೇಗಿಸುತ್ತಾ ಬರುತ್ತಿರುವ ಖುಷಿಯ ಗುಚ್ಚದಂತೆ ನನಗವರು ಕಾಣಿಸಿದರು.
ಜುಲ್ಫಿಯಷ್ಟೇ ನನಗೆ ಪ್ರಿಯವಾದ ಗಾಳಿ ಹೇಳಿತು “ಅಪರ್ಣ, ಈ ಕ್ಷಣ ನಿಜವಾದದ್ದು. ಹಿಂದಿನ ಕ್ಷಣ ಮತ್ತು ಮುಂದಿನ ಕ್ಷಣಗಳ ಭಾರದಿಂದ ಮುಕ್ತಗೊಂಡದ್ದು. ವರ್ತಮಾನದಲ್ಲಿ ಸಂಭವಿಸುತ್ತಿರುವ ಕ್ಷಣ ಇದು?….. ಅದರ ನಿಜ ಅದಕ್ಕಿದೆ. ಈ ಕ್ಷಣದ ನಿಜ ಮುಂದಿನ ಕ್ಷಣಕ್ಕೆ ಉಳಿಯಬಹುದು, ಉಳಿಯದಿರಬಹುದು. ಯಾರಿಗೆ ಗೊತ್ತು? ಇಂತಹ ಕೆಲವು ಗರಿಹಗುರ, ಸಾರ್ಥಕ ಕ್ಷಣಗಳಿಗೋಸ್ಕರವೇ ಅಸ್ಮಿತಾ ಮತ್ತು ಅವಳಂತಹ ಭಾವುಕರು ಬದುಕುತ್ತಿರಬಹುದು. ಕೊನೆಗೂ ಬದುಕು ಅನ್ನುವುದು ವರ್ತಮಾನದಲ್ಲಿ ಸಂಭವಿಸುವುದೇ ತಾನೆ?”
ಯೋಚನೆಗಳು ಬಿಡಲಿಲ್ಲ ನನ್ನ, ಅಪ್ರಮೇಯ ಕಟ್ಟಿದ ತಾಳಿಯನ್ನು ಕೊರಳಲ್ಲಿ ಧರಿಸಿ, ಅವನ ದಿನನಿತ್ಯದ ಅಗತ್ಯಗಳನ್ನು ಪೂರೈಸುತ್ತ ತನ್ನ ಮಗನಿಗೆ ಅವನ ವಾರಸು ಎಂಬ ಸಾಮಾಜಿಕ ಮನ್ನಣೆ ಪಡೆದು ಎಲ್ಲರಂತೆ ಬದುಕುವ ಅವನ ಹೆಂಡತಿ ಸುಖಿಯೋ, ಅಥವಾ ಅವನ ಬದುಕಿನ ಕೆಲವು ಅರ್ಥಪೂರ್ಣ ಕ್ಷಣಗಳನ್ನು ತನ್ನದೂ ಆಗಿಸಿಕೊಂಡು ಸಂಭ್ರಮಿಸಿದ, ಆದರೆ ಅನೇಕ ವಾರ, ಅನೇಕ ತಿಂಗಳು, ಅನೇಕ ವರ್ಷಗಳ ಕಾಲ, ಸಾಕಷ್ಟು ಒಂಟಿತನ ಮತ್ತು ಅನಾಮಿಕತೆಯನ್ನು ಅನುಭವಿಸುವ ಅಸ್ಮಿತಾ ಸುಖಿಯೋ?
ಮೈಯನ್ನು ನಲ್ಲನ ತೋಳುಗಳಂತೆ ಬಳಸಿದ ಸೀರೆ ಆಗ ಪಿಸುಗುಟ್ಟಿತು. ಇಷ್ಟಕ್ಕೂ, ಸುಖವಾಗಿರುವುದು ಅಂದರೆ ಏನೇ ಅಪ್ಪಿ? ವರ್ತಮಾನದ ಕ್ಷಣಗಳ ತೀವ್ರ ಅನುಭವವೋ ಅಥವಾ ಸಾಮಾಜಿಕ ಸುರಕ್ಷೆ ಎಂಬ ಇಡುಗಂಟು ತನಗಿದೆ ಎಂದು ಇರುವುದರಲ್ಲಿ ಸಮಾಧಾನ ಪಟ್ಟುಕೊಳ್ಳುವುದೋ?’. ಉತ್ತರ ಕೊಡಲಾಗಲಿಲ್ಲ ನನಗೆ, ಸುಮ್ಮನೆ ಸೀರೆಯ ಸೆರಗನ್ನೊಮ್ಮೆ ನೇವರಿಸಿದೆ.
Igmeera72@gmail.com