ಮೈಸೂರು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆ ಶಿಥಿಲಾವಸ್ಥೆಯಲ್ಲಿದ್ದು, ಅದರ ನವೀಕರಣ ಹಾಗೂ ಅಲ್ಲಿರುವ ಜಾನಪದ ವಸ್ತು ಸಂಗ್ರಹಾಲಯದ ಕಲಾಕೃತಿಗಳ ಸಂರಕ್ಷಣೆ ಕಾರ್ಯ ನಡೆಯುತ್ತಿದೆ.
ಕಳೆದ ಜನವರಿ 4ರಂದು ಅಮೆರಿಕದ ರಾಯಭಾರ ಕಚೇರಿ ಹಾಗೂ ಡೆಕನ್ ಹೆರಿಟೇಜ್ ಫೌಂಡೇಶನ್ ಸಂಸ್ಥೆಯೊಂದಿಗೆ ಜಯಲಕ್ಷ್ಮಿ ವಿಲಾಸ ಅರಮನೆಯ ಕಟ್ಟಡ ದುರಸ್ತಿ ಹಾಗೂ ಸಂಗ್ರಹಾಲಯದಲ್ಲಿರುವ ನೂರಾರು ವರ್ಷಗಳಷ್ಟು ಹಳೆಯದಾದ ಅಮೂಲ್ಯ ಕಲಾಕೃತಿಗಳ ಸಂರಕ್ಷಣೆ, ಅವುಗಳ ಡಿಜಿಟಲೀಕರಣ ಮಾಡಲು ಮೈಸೂರು ವಿಶ್ವವಿದ್ಯಾನಿಲಯ ಒಡಂಬಡಿಕೆ ಮಾಡಿಕೊಂಡಿತ್ತು. ಡೆಕನ್ ಹೆರಿಟೇಜ್ ಫೌಂಡೇಶನ್ ಸಂಸ್ಥೆಗೆ ಹರೀಶ್ ಮತ್ತು ಬೀನಾ ಶಾ ಫೌಂಡೇಶನ್ ಅವರು 30 ಕೋಟಿರೂ ಅನುದಾನ ನೀಡಿದ್ದಾರೆ.
ಈಗ ಡೆಕನ್ ಹೆರಿಟೇಜ್ ಸಂಸ್ಥೆ ಕಾಮಗಾರಿಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಯ ಕೆಲಸ ಆರಂಭಿಸಿದೆ. ಈ ನಡುವೆ ಏಪ್ರಿಲ್ ತಿಂಗಳ ಅಂತ್ಯದವರೆಗೂ ಪ್ರವಾಸಿಗರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಜಾನಪದ ವಸ್ತು ಸಂಗ್ರಹಾಲಯ ತೆರೆದಿದ್ದು, ಮೇ ತಿಂಗಳಿಂದ ಸಂಪೂರ್ಣ ಬಂದ್ ಮಾಡಲಾಯಿತು.
ನಿರ್ವಹಣೆಯಲ್ಲಿ ಮೈಸೂರು ವಿವಿ ನಿರ್ಲಕ್ಷ್ಯ: ಸುಮಾರು 120 ವರ್ಷಗಳಷ್ಟು ಹಳೆಯದಾದ ಜಯಲಕ್ಷ್ಮಿ ವಿಲಾಸ ಅರಮನೆಯ ಪಶ್ಚಿಮ ಭಾಗದ ಮೇಲ್ಟಾವಣಿ (ತಾರಸಿ) ಕುಸಿದಿದೆ. 20 ವರ್ಷಗಳ ಹಿಂದೆ ಈ ತಾರಸಿ ಹಾಗೂ
ಕಟ್ಟಡದ ದುರಸ್ತಿಯನ್ನು ಇನ್ಫೋಸಿಸ್ ಫೌಂಡೇಶನ್ ಮಾಡಿತ್ತು. ಆದರೆ ಮೈಸೂರು ವಿವಿಯ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ಮೇಲ್ಟಾವಣಿ ಮತ್ತೆ ಕುಸಿದಿದೆ. ಅಲ್ಲದೆ ಕಟ್ಟಡದ ಇತರ ಭಾಗಗಳೂ ಶಿಥಿಲಗೊಂಡಿವೆ.
ಹೊಸ ತಾರಸಿ ನಿರ್ಮಾಣ: ಶಿಥಿಲಗೊಂಡಿರುವ ತಾರಸಿ ಭಾಗವನ್ನು ಹಾಗೂ ಅಲ್ಲಿ ಬಳಸಿರುವ ಟೀಕ್ ಮರದ ತೊಲೆಗಳನ್ನು ಹೊಸದಾಗಿ ಅಳವಡಿಸಿ ಹೊಸ ತಾರಸಿ ಹಾಕಲಾಗುತ್ತಿದೆ. ಕಟ್ಟಡದ ಗೋಡೆಗಳು ಶಿಥಿಲ ಗೊಂಡಿದ್ದರೆ, ಆ ಭಾಗದಲ್ಲಿ ಗಾರೆಯನ್ನು ಹಾಕಲಾಗುತ್ತಿದೆ.
ಲಿಫ್ಟ್ ದುರಸ್ತಿ: ಅರಮನೆ ಒಳಗೆ ಕೃಷ್ಣ ತೊಟ್ಟಿಗೆ ಸೇರಿದಂತೆ ಮೇಲಂತಸ್ತಿಗೆ ಹೋಗಲು ಬಳಸುತ್ತಿದ್ದ 100 ವರ್ಷಕ್ಕೂ ಹೆಚ್ಚು ಹಳೆಯದಾದ ವಿದ್ಯುತ್ ಚಾಲಿತ ಲಿಫ್ಟ್ ಕೂಡ ಇದೆ. ಇರುವ ಸ್ಥಿತಿಯಲ್ಲೇ ಅದನ್ನು ರಿಪೇರಿ ಮಾಡಿ ಬಳಕೆಗೆ ಯೋಗ್ಯವಾಗಿ ಮಾಡಲಾಗುತ್ತಿದೆ. ಅಂದಾಜು 3,000 ಚದರ ಅಡಿ ವಿಸ್ತೀರ್ಣವಿರುವ ಜಯಲಕ್ಷ್ಮಿ ವಿಲಾಸ ಅರಮನೆಯ ಉತ್ತರ, ಪಶ್ಚಿಮ ಪೂರ್ವ ಮತ್ತು ದಕ್ಷಿಣ ಭಾಗದ ಕಟ್ಟಡಗಳಲ್ಲಿ ಎಲ್ಲೆಲ್ಲಿ ಶಿಥಿಲಗೊಂಡಿದೆಯೋ ಅದನ್ನೆಲ್ಲ ತೆರವು ಮಾಡಿ ದುರಸ್ತಿ ಮಾಡಲಾಗುತ್ತಿದೆ.
ವಸ್ತುಸಂಗ್ರಹಾಲಯಗಳ ಸಂರಕ್ಷಣೆ: ಪ್ರಸ್ತುತ ಜಯಲಕ್ಷ್ಮಿ ವಿಲಾಸ ಅರಮನೆಯಲ್ಲಿ ಜಾನಪದವಸ್ತು ಸಂಗ್ರಹಾಲಯ, ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಸಾಮಾನ್ಯ (ಜನರಲ್) ವಸ್ತು ಸಂಗ್ರಹಾಲಯವಿದೆ. ಇದನ್ನು ಏಷ್ಯಾದ ಅತಿ ದೊಡ್ಡ ಜಾನಪದ ಕಲಾ ಸಂಗ್ರಹವೆಂದು ಪರಿಗಣಿಸಲಾಗಿದೆ.
ಜಾನಪದ ವಸ್ತುಸಂಗ್ರಹಾಲಯದಲ್ಲಿ ಹಳ್ಳಿಯ ಜೀವನ, ಸಾಂಪ್ರದಾಯಿಕ ಕರಕುಶಲತೆ ಮತ್ತು ಮೈಸೂರು ಸುತ್ತಮುತ್ತಲಿನ ಜನರ ಜೀವನದ ವಾಸ್ತವ ಚಿತ್ರಣವನ್ನು ಕಾಣಬಹುದು. ಸಾಮಾನ್ಯ ವಸ್ತು ಸಂಗ್ರಹಾಲಯದಲ್ಲಿ ರಾಜ ಮನೆತನ ಬಳಸಿದ ವಿವಿಧ ವಸ್ತುಗಳು ಹಾಗೂ ಕಲಾಕೃತಿಗಳನ್ನು ನೋಡಬಹುದು.
ಪುರಾತತ್ವ ಶಾಸ್ತ್ರ ವಸ್ತು ಸಂಗ್ರಹಾಲಯದಲ್ಲಿ ಕಲ್ಲಿನ ಶಿಲ್ಪಗಳು, ವರ್ಣಚಿತ್ರಗಳು, ಹುಲಿಯ ಜೀವನ ಹಾಗೂ ಅದರ ಗಾತ್ರದ ಪ್ರತಿಕೃತಿ ಮತ್ತು ಆನೆಯ ದಂತ ಹಾಗೂ ಇತರ ಆಕರ್ಷಕ, ಆಸಕ್ತಿದಾಯಕ ವಸ್ತುಗಳನ್ನೂ ಪ್ರದರ್ಶನಕ್ಕಿಡಲಾಗಿದೆ.
ಜಾನಪದ ವಿದ್ವಾಂಸರು, ತಜ್ಞರು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ್ದ ಕಲಾಕೃತಿಗಳು, ಚಿತ್ರಕಲೆಗಳು, ಚರ್ಮದ ಹಾಗೂ ಮರದ ಕಲಾಕೃತಿಗಳು, ಟೆರಕೋಟ ಹಾಗೂ ಮಣ್ಣಿನ ವಸ್ತುಗಳನ್ನು ಇಲ್ಲಿ ಕಾಣಬಹುದಾಗಿದೆ.
ಅರಮನೆ ಆಧುನೀಕರಣ: ವಸ್ತು ಸಂಗ್ರಹಾಲಯದ ಅಗತ್ಯಗಳಾದ ಫೈರ್ ಎಗ್ಸ್‌ಹಾಸ್ಟ್, ಸಿಸಿ ಕ್ಯಾಮೆರಾಗಳು, ಕನ್ಸರ್ವೇಷನ್ ಲ್ಯಾಬ್, ಸ್ಟುಡಿಯೋ ಸೆಟಪ್, ನೂತನ ವಿದ್ಯುತ್ ವೈರಿಂಗ್ ಸೇರಿ 6,500 ಕಲಾಕೃತಿಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ.
ಕಲಾಕೃತಿ ಸಂರಕ್ಷಣೆ ಕಾರ್ಯದಲ್ಲಿ ಕಾರ್ಪೆಂಟರ್, ಆರ್ಕಿಟೆಕ್ಟರ್‌ಗಳು, ತಂತ್ರಜ್ಞರು ಸೇರಿದಂತೆ 30 ಮಂದಿ ಅರಮನೆಗೆ ಹಾಗೂ ವಸ್ತು ಸಂಗ್ರಹಾಲಯಕ್ಕೆ ಆಧುನಿಕ ಸ್ಪರ್ಶ ನೀಡುತ್ತಿದ್ದಾರೆ. ಅಂದಾಜು 32.4 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯ, 2027ಕ್ಕೆ ಪೂರ್ಣಗೊಳ್ಳಲಿದೆ.
ಜಯಲಕ್ಷ್ಮಿ ವಿಲಾಸ ಇತಿಹಾಸ: ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ 1905ರಲ್ಲಿ ರಾಜಕುಮಾರಿ ಜಯಲಕ್ಷ್ಮಿ ಅಮ್ಮಣ್ಣಿ ಅವರ ನಿವಾಸಕ್ಕಾಗಿ ನಿರ್ಮಾಣ ಮಾಡಿದ ಅರಮನೆ ಇದಾಗಿದೆ. ರಾಜಕುಮಾರಿ ಜಯಲಕ್ಷ್ಮಿ 1897ರಲ್ಲಿ ಕಾಂತರಾಜ ಅರಸು ಅವರನ್ನು ವಿವಾಹವಾಗಿದ್ದರು. ನಂತರ ಕಾಂತರಾಜ ಅರಸು ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಂಡರು. ಜಯಲಕ್ಷ್ಮಿ ನಿವಾಸ ಅರಮನೆಯನ್ನು ಜಯಲಕ್ಷ್ಮಿ ದಂಪತಿಗೆ ಉಡುಗೊರೆಯಾಗಿ ನೀಡಲಾಗಿತ್ತು.
ಅರಮನೆ ನಿರ್ಮಾಣದ ಸಂದರ್ಭದಲ್ಲಿ ಬಳಸಿರುವ ವಸ್ತುಗಳನ್ನು ಅದೇ ಪ್ರಪೋಷನೆಲ್‌ನಲ್ಲಿ ಮಿಕ್ಸಿಂಗ್ ಮಾಡಿ ಬಳಸಲಾಗುತ್ತಿದೆ. ತಾರಸಿಯಲ್ಲಿ ಎಲ್ಲಿಯೂ ತೇಪೆ ಕಾಣದಂತೆ ತಂತ್ರಗಾರಿಕೆ ಬಳಕೆ ಮಾಡಿಕೊಳ್ಳಲಾಗಿದೆ. ಇಡೀ ವಿಶ್ವ ಗಮನ ಸೆಳೆಯುವ ಆಧುನಿಕ ವಸ್ತು ಸಂಗ್ರಹಾಲಯ ಇದಾಗಿರುತ್ತದೆ.
• ಶರತ್, ಕನ್‌ಕನ್ ಆರ್ಕಿಟೆಕ್ಟ್, ಡೆಕನ್ ಹೆರಿಟೇಜ್ ಫೌಂಡೇಶನ್
ಇದು ಮೂರು ವರ್ಷಗಳ ಪ್ರಾಜೆಕ್ಟ್. ಒಡಂಬಡಿಕೆ ಮಾಡಿದ ಮರು ದಿನವೇ ಕೆಲಸ ಆರಂಭಿಸಿದ್ದಾರೆ. ಈ ಪ್ರಾಜೆಕ್ಟ್‌ಗೆ ಹರೀಶ್ ಮತ್ತು ಬೀನಾ ಶಾ ಫೌಂಡೇಶನ್ ಅವರು ಅನುದಾನ ನೀಡುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವು ಈ ಹಣ ಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ. ಎಲ್ಲವನ್ನೂ ಫೌಂಡೇಶನ್ ಅವರೇ ನೋಡಿಕೊಂಡು, ಸುಸಜ್ಜಿತ ವಸ್ತು ಸಂಗ್ರಹಾಲಯವನ್ನು ವಿಶ್ವವಿದ್ಯಾನಿಲಯಕ್ಕೆ ವಹಿಸಲಿದ್ದಾರೆ.
ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ, ಮೈಸೂರು ವಿವಿ