Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಇಂತಹ ಪುರುಷರನ್ನು ಬೇಕಾದರೆ ನಂಬಬಹುದು

  • ಪೂರ್ಣಿಮಾ ಮಾಳಗಿಮನಿ

ನನ್ನ ಹುಡುಗ ಸಮಸ್ಯೆಯನ್ನು ಕೇಳಿಸಿಕೊಂಡ ಕೂಡಲೇ ಪರಿಹಾರ ಕೊಡದಿದ್ದರೂ, ಈ ಸಮಸ್ಯೆಗೆ ಪರಿಹಾರ ಇಲ್ಲವೆಂದೇ ನಂಬಿದ್ದರೂ, ‘ಹೌದು ನೀನು ಹೇಳುತ್ತಿರುವುದು ನಿಜಕ್ಕೂ ಒಂದು ಸಮಸ್ಯೆ’ ಎಂದು ಮೊದಲು ಒಪ್ಪಿಕೊಂಡಂತೆ ಮಾಡಿ, ‘ಆದರೆ ಟೆನ್ಶನ್ ತಗೋಬೇಡ, ನಾನಿದೀನಲ್ಲ’ ಅಂತ ಧೈರ್ಯ ತುಂಬಬೇಕು. ಎಂಥದ್ದೇ ಸಂದರ್ಭದಲ್ಲೂ ಕೂಲ್ ಆಗಿರಬೇಕು ಃಐಖಃ

 ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ, ಆರ್ಥಿಕವಾಗಿ, ಬೌದ್ಧಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಗಂಡಿನ ಸರಿಸಮನಾಗಿ ನಿಲ್ಲಬಲ್ಲ ಹೆಣ್ಣು ಕೂಡ ಒಬ್ಬ ಹೆಂಡತಿಯಾಗಿ, ಪ್ರೇಯಸಿಯಾಗಿ, ಉದ್ಯೋಗಿಯಾಗಿ, ಪಕ್ಕದ ಮನೆಯವಳಾಗಿ, ಎಂದೂ ಭೇಟಿಯೇ ಆಗಿರದ ಫೇಸ್ಬುಕ್ ಫ್ರೆಂಡ್ ಆಗಿ, ಹಲವಾರು ಸಂದರ್ಭಗಳಲ್ಲಿ ಗಂಡಿನಿಂದ ಶೋಷಣೆಗೊಳಗಾಗುತ್ತಿದ್ದಾಳೆ. ಒಂದು ಸ್ನೇಹ, ಸಂಬಂಧ, ಬಾಂಧವ್ಯ ಕುದುರಬೇಕು ಎಂದರೆ, ಪರಸ್ಪರ ನಂಬಿಕೆ, ವಿಶ್ವಾಸ ಮೂಡುವುದು ಮುಖ್ಯ. ಅದರಲ್ಲೂ ಒಂದು ಹೆಣ್ಣು ಒಂದು ಗಂಡಿನ ಜೊತೆ ಯಾವುದೇ ರೀತಿಯ ಒಡನಾಟ ಬೆಳೆಸಬೇಕಾದರೆ, ಅವನನ್ನು ಎಷ್ಟು ನಂಬಬಹುದು ಎನ್ನುವುದನ್ನು ಪರಾಮರ್ಶಿಸಿ, ಪರೀಕ್ಷಿಸಿ ಮುಂದುವರಿಯಬೇಕಾಗುತ್ತದೆ. ಮನುಷ್ಯರು ಬೇಟೆಯಾಡಿ ಬದುಕುತ್ತಿದ್ದ ಕಾಲದಲ್ಲಿ, ರಾಜರುಗಳ ಕಾಲದಲ್ಲಿ, ಗಂಡಿಗಿಂತ ಹಲವು ವಿಚಾರಗಳಲ್ಲಿ ದುರ್ಬಲಳಾಗಿದ್ದ ಹೆಣ್ಣಿಗೆ ಆಯ್ಕೆ ಇರಲಿಲ್ಲ. ಆಯ್ಕೆ ಇದ್ದ ಕೆಲವರೂ ಗಂಡನ್ನು ಮೆಚ್ಚಲು ಅವನ ದೈಹಿಕ ಸಾಮರ್ಥ್ಯ, ಅಧಿಕಾರ, ಅಂತಸ್ತು, ಅವನಿಗಿರುವ ಸಾಮಾಜಿಕ ಬೆಂಬಲ ಇವುಗಳನ್ನೇ ಪ್ರಮುಖವಾದ ಮಾನದಂಡಗಳನ್ನಾಗಿಸಿಕೊಂಡಿದ್ದರು. ಆದರೆ ಇಂದಿನ ಬದಲಾಗುತ್ತಿರುವ ಕಾಲಘಟ್ಟದ ಮಹಿಳೆ, ಪುರುಷನ ರೂಪ, ಗುಣ, ಆರ್ಥಿಕ ಮಟ್ಟ, ಹಾಸ್ಯ ಪ್ರಜ್ಞೆ, ಬದ್ಧತೆ, ಪ್ರಾಮಾಣಿಕತೆ, ಆತ್ಮವಿಶ್ವಾಸ, ಪ್ರತಿಭೆ ಮುಂತಾದವುಗಳನ್ನು ಗಮನಿಸುತ್ತಾಳೆ. ಒಬ್ಬ ಪುರುಷನಲ್ಲಿ ನನಗೆ ಕುತೂಹಲ, ಆಸಕ್ತಿ ಹುಟ್ಟಿಸುವ, ಅವನು ನಂಬಲರ್ಹನೋ, ಅಲ್ಲವೋ ಎಂದು ಗುರುತಿಸಲು ಸಾಧ್ಯವಾಗಿಸುವ ಕೆಲವು ಅಂಶಗಳನ್ನು ಕರಾರುವಕ್ಕಾಗಿ ಪಟ್ಟಿಮಾಡಲಾರೆನಾದರೂ, ಪ್ರಯತ್ನಿಸುವೆ. (ಈಗಾಗಲೇ ಮದುವೆಯಾಗಿರುವ ನನಗೆ ಇದೊಂದು ವಿಂಡೋ ಶಾಪಿಂಗ್ ಅನುಭವವಷ್ಟೇ!)

ಹೂ ಬಿರಿಯುವುದನ್ನು, ನದಿ ಹರಿಯುವುದನ್ನು, ಬೆಳದಿಂಗಳು ಸುರಿಯುವುದನ್ನು, ವಿಸ್ಮಯದಿಂದ ನೋಡಿ, ಕಣ್ಣರಳಿಸುವುದು ಮನುಷ್ಯರಿಗಷ್ಟೇ ಸಾಧ್ಯ. ದಟ್ಟೈಸುತ್ತಿರುವ ಕಾರ್ಮೋಡಗಳನ್ನು ನೋಡಿ, ಮಳೆ ಬರುವ ಮುನ್ನ ಬೇಗ ಗೂಡು ಸೇರಿಕೊಳ್ಳಬೇಕು ಎಂದಷ್ಟೇ ಗ್ರಹಿಸುವ ಪ್ರಾಣಿ ಪಕ್ಷಿಗಳಂತೆಯೇ ಧಾವಂತದ ನಡುವೆಯೂ, ಗಾಡಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಒಂದೇ ಒಂದು ಫೋಟೋ ತೆಗೆದುಕೊಳ್ಳೋಣ ಎಂದು ಆಸೆ ಪಡುವುದು ಮನುಷ್ಯ ಮಾತ್ರ. ಹಾಗಾಗಿ ಎಷ್ಟೇ ಒತ್ತಡದ ಜೀವನವನ್ನು ನಡೆಸುತ್ತಿದ್ದರೂ, ಸಂಗೀತ, ಸಾಹಿತ್ಯ, ಸಿನಿಮಾ, ಕ್ರೀಡೆ, ಚಾರಣ ಇತರೆ ಯಾವುದಾದರೊಂದು ಕಲೆಯನ್ನು ಆಸ್ವಾದಿಸಲು ಸಮಯ ಮೀಸಲಿಡುವ ಹುಡುಗನನ್ನು ನಾನು ನಂಬುತ್ತೇನೆ.

ಮನೆಯಿಂದ ಹೊರಡುವಾಗ, ಈಗಾಗಲೇ ತಡವಾಗಿಬಿಟ್ಟಿದೆಯೆಂದು ನಾನು ಹೊರಗೆ ನಿಂತುಕೊಂಡು ನನ್ನ ಚಪ್ಪಲಿಯ ಬೆಲ್ಟ್ ಹಾಕಿಕೊಳ್ಳುತ್ತಿರುವಾಗ, ಬೀಗ ಹಾಕುವ ಮೊದಲು ‘ಗ್ಯಾಸ್ ಸಿಲಿಂಡರ್ ಆಫ್ ಮಾಡಿದೀಯ?’ ಎಂದು ಅವನು ನನ್ನನ್ನು ಕೇಳುವುದು ಬೇಡ; ನಾನು ಅಷ್ಟು ಎಚ್ಚರವಹಿಸುವ ಹುಡುಗಿ ಎನ್ನುವ ವಿಶ್ವಾಸವಿಟ್ಟು, ನನ್ನನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ‘ನಿನ್ನ ಕಾಡಿಗೆ ಸ್ವಲ್ಪ ಕದಡಿದೆ, ಮತ್ತೊಮ್ಮೆ ಸರಿಯಾಗಿ ಹಚ್ಚಿಕೊಂಡು ಬರ್ತೀಯಾ ನೋಡು’ ಎಂದು ಹೇಳುವ ಹುಡುಗನನ್ನು ನಾನು ನಂಬುತ್ತೇನೆ.

ನಾನು ಕಾದ ಕಾವಲಿ ಮುಂದೆ ನಿಂತು, ಮೊದಲು ಹಾಕಿದ ದೋಸೆಯನ್ನು ಇವನು ತಿಂದು ಮುಗಿಸುವ ತನಕ ಕಾದು, ಮತ್ತೊಂದು ದೋಸೆ ಹಾಕುತ್ತಿರುವಾಗ, ನನ್ನ ಮಾತು ಕೇಳಿಸಿಕೊಳ್ಳದೆ, ಫೋನ್ ನೋಡುತ್ತಾ ಕೂತಿದ್ದಾನೆ ಎಂದು ಉರಿದುಕೊಂಡರೂ, ಕೊನೆಯ ದೋಸೆ ಹಾಕಿ ನಾನು ಎದುರಿಗೆ ಕುಳಿತಾಗ, ಫೋನ್ ತಲೆಕೆಳಗಾಗಿಟ್ಟು, ‘‘ಕಾವೇರಿ ಥಿಯೇಟರ್ ಮುಚ್ಚಿಬಿಡ್ತಂತೆ ಕಣೇ, ದುಬೈನವರು ಕ್ಲೌಡ್ ಸೀಡಿಂಗ್ ಮಾಡಿ ಮಳೆ ಬರಿಸಿಕೊಂಡಿದ್ದಾರೆ, ಈ ಸಲ ಬಾಂಬೆಗೆ ಹೋದಾಗ ಬೆಂಗಳೂರಿಗಿಂತ ತಣ್ಣಗಿದೆ ಅನಿಸಿತು. ಎಲೆಕ್ಷನ್ ರಿಸಲ್ಟ್ ಬರೋ ತನಕ ಕಾದು, ಆಮೇಲೆ ಇನ್ವೆಸ್ಟ್‌ಮೆಂಟ್ ಮಾಡ್ತೀನಿ, ಐಶ್ವರ್ಯ ರೈ ಮನೇಲೂ ಅತ್ತೆ ಸೊಸೆ ಜಗಳ ಅಂತೆ’’ ಎಂದೆಲ್ಲಾ ಒಂದಕ್ಕೊಂದು ಸಂಬಂಧವಿಲ್ಲದಿರೋ ವಿಚಾರಗಳನ್ನು ಹೇಳುತ್ತಿರಬೇಕು.

ಕೇಳಿಸಿಕೊಳ್ಳುತ್ತಿರುವವಳಂತೆ ನಟಿಸುತ್ತಾ ಕೂತವಳಿಗೆ, ಚಿಕ್ಕ ಮಕ್ಕಳಂತೆ ಚೆಲ್ಲಿಕೊಂಡು ತಿನ್ನುವ ಅವನ ಮೀಸೆಗಂಟಿದ ಆಲೂಗೆಡ್ಡೆ ಪಲ್ಯದ ಕಡಲೇಬೇಳೆಯನ್ನು ಗಮನಿಸಿದಾಗ ಮುದ್ದು ಬರಬೇಕು. ‘ಥಿ ಟಿ ಜಟಿ’ಣ ಟಣಟಿ ಚಿಟಿಜ ತಿಟಿ ಛಿಚಿಟಿ’ಣ ಡಿಚಿಜ ಚಿಠಿ’ ಪುಸ್ತಕ ಓದಿದ ಮೇಲೆ, ಅವನಿಗೆ ನನ್ನ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಇಲ್ಲವೆಂದು ದೂರಲಾರೆ. ಆದರೆ ಗುಮ್ಮನಂತೆ ಕೂತಿರದೆ, ತಾನಾದರೂ ವಟ ವಟ ಮಾತನಾಡಬೇಕು.

‘ನನ್ನ ಹುಡುಗಿಯ ಬರ್ತ್ ಡೇ ಯನ್ನು ಅದುಹೇಗೆ ನಾನು ಮರೆಯಲು ಸಾಧ್ಯ?’ ಎನ್ನುವ ಅತಿಯಾದ ಆತ್ಮ ವಿಶ್ವಾಸದವನಿಗಿಂತ, ತನ್ನ ನೆನಪಿನ ಶಕ್ತಿಯನ್ನು ಅವಲಂಬಿಸದೆ, ಫೇಸ್ಬುಕ್‌ನಲ್ಲೋ, ಇನ್ಸ್ಟಾಗ್ರಾಮ್‌ನಲ್ಲೋ ಗಮನಿಸಿ, ಅಥವಾ ಫೋನ್‌ನಲ್ಲಿ ರಿಮೈಂಡರ್ ಹಾಕಿಕೊಂಡು ವಿಶ್ ಮಾಡಿದರೂ ಸಾಕು. ಉಡುಗೊರೆಯಾಗಿ ಡೈಮಂಡ್ ಓಲೆ ಕೊಡಿಸದಿದ್ದರೂ, ದುಬಾರಿ ರೆಸ್ಟುರೆಂಟಿನಲ್ಲಿ ಕೇಕ್ ಕತ್ತರಿಸುವ ವಿಡಿಯೋ ತೆಗೆದು, ರೀಲ್ಸ್ ಮಾಡದಿದ್ದರೂ, ರಸ್ತೆ ಬದಿ ಪಾನಿಪುರಿ ಕೊಡಿಸಿ, ಸಿಗ್ನಲ್‌ನಲ್ಲಿ ಹೂ ಮಾರುವ ಹುಡುಗಿಯಿಂದ ಮೊಳ ಮಲ್ಲಿಗೆ ಕೊಡಿಸಿದರೆ ಬೇಕಾದಷ್ಟಾಯಿತು. ತಡರಾತ್ರಿ ಮರಳುವಾಗ ದಾರಿಯಲ್ಲಿ ನಂಗೆ ಪಾನ್ -ಬೀಡಾ ಬೇಕು ಕೊಡಿಸೋ ಎಂದು ಕಾಡಿದರೆ, ‘ನನಗೆ ಪಾನ್- ಬೀಡಾ ವಾಸನೆ ಆಗುವುದಿಲ್ಲ, ನೀನೇ ಇಳಿದು ಹೋಗಿ ತೆಗೊಂಡು ಬಾ’ ಎಂದು ಹೇಳಿದವನು, ಅಂಗಡಿಯ ಸುತ್ತ ಠಳಾಯಿಸುವ ಹುಡುಗರನ್ನು ನೋಡಿ, ತಕ್ಷಣ ‘ಬೇಡ, ತಡಿ ನಾನೇ ಹೋಗ್ತೀನಿ, ಇಪ್ಪತ್ತು ರೂಪಾಯಿ ಚೇಂಜ್ ಇದ್ರೆ ಕೊಡು’ ಎಂದು ನನ್ನಿಂದ ಚಿಲ್ಲರೆ ತಗೊಂಡು, ಇಳಿದು, ‘ಒಳಗಿನಿಂದ ಡೋರ್ ಲಾಕ್ ಮಾಡಿಕೋ’ ಎಂದು ಹೇಳಿ ಹೋಗುವ, ನನಗೇನಿಷ್ಟ ಎನ್ನುವುದನ್ನು ಗಮನಿಸಿ, ನೆನಪಿಟ್ಟುಕೊಂಡು, ನನ್ನನ್ನು ಖುಷಿಪಡಿಸುವ ಇರಾದೆ ಇರುವವನನ್ನು ನಾನು ನಂಬುತ್ತೇನೆ. ಬುರುಡೆ ಗಟ್ಟಿ ಇದೆಯೆಂದು ಬಂಡೆಗೆ ಚಚ್ಚಿಕೊಳ್ಳದೆ, ನನ್ನನ್ನು ರಕ್ಷಿಸುವುದು ತನ್ನ ಜವಾಬ್ದಾರಿ ಎನ್ನುವುದನ್ನು ಅರಿತಿರುವ ಹುಡುಗನನ್ನು ನಾನು ಆರಾಧಿಸುವೆ.

ಒಮ್ಮೆ ಕಾಡಿನಲ್ಲಿ ಕಾಡ್ಗಿಚ್ಚು ಹಬ್ಬಿರುತ್ತದೆ. ಅಗ್ನಿಶಾಮಕ ದಳದ ರಾಮ, ಶ್ಯಾಮ ಜೊತೆಗಾರರೊಂದಿಗೆ ಬಹಳ ಶ್ರಮಪಟ್ಟು ಕೊನೆಗೂ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ, ದಣಿದು ಕುಳಿತುಕೊಳ್ಳುತ್ತಾರೆ. ರಾಮನ ಮುಖ ಧೂಳು, ಮಸಿಯಿಂದ ಕೊಳಕಾಗಿಹೋಗಿರುತ್ತದೆ. ಶ್ಯಾಮನ ಮುಖ ಶುಚಿಯಾಗಿಯೇ ಇರುತ್ತದೆ. ಆದರೂ ಶ್ಯಾಮ, ಕಾಡಿನ ಮಧ್ಯೆ ಹರಿಯುತ್ತಿದ್ದ ಸಣ್ಣ ತೊರೆಯಲ್ಲಿ ಕೈಕಾಲು ಮುಖ ತೊಳೆದುಕೊಳ್ಳುವ ಬಾ ಎಂದು ಬಲವಂತ ಪಡಿಸುತ್ತಿರುತ್ತಾನೆ. ಶ್ಯಾಮನ ಶುಚಿಯಾದ ಮುಖವನ್ನು ನೋಡಿದ ರಾಮ, ತನ್ನ ಮುಖವೂ ಅಷ್ಟೇ ಶುಚಿಯಾಗಿರಬಹುದೆಂದು ನಿರಾಳವಾಗಿದ್ದರೆ, ರಾಮನ ಕೊಳಕು ಮುಖದಂತೆ ತನ್ನದೂ ಕೊಳಕಾಗಿಬಿಟ್ಟಿದೆಯೆಂದು ಶ್ಯಾಮ ಚಿಂತಿಸುತ್ತಾನೆ. ಜೀವನೋತ್ಸಾಹ, ಆತ್ಮಸ್ಥೈರ್ಯ ಜೊತೆಗಾರರ ಮೇಲೆಯೂ ಅವಲಂಬಿತವಾಗಿರುತ್ತದೆ.

ಗಂಡಿನ ಸಾಂಗತ್ಯದಲ್ಲಿ ಒಂದು ಹೆಣ್ಣು ನೆಮ್ಮದಿಯಾಗಿರಬೇಕೆಂದರೆ, ತನ್ನೆಲ್ಲಾ ಸಮಸ್ಯೆಗಳಿಗೆ ಅವನಲ್ಲಿ ಪರಿಹಾರವಿದೆ, ಇವನೊಂದಿಗೆ ಎಂಥದ್ದೇ ಸಂಕಷ್ಟ ಬಂದರೂ ಎದುರಿಸಬಲ್ಲೆ ಎಂದು ನಂಬುವುದು ಬಹಳ ಮುಖ್ಯ. ನನ್ನ ಹುಡುಗ ಸಮಸ್ಯೆಯನ್ನು ಕೇಳಿಸಿಕೊಂಡ ಕೂಡಲೇ ಪರಿಹಾರ ಕೊಡದಿದ್ದರೂ, ಈ ಸಮಸ್ಯೆಗೆ ಪರಿಹಾರ ಇಲ್ಲವೆಂದೇ ನಂಬಿದ್ದರೂ, ‘ಹೌದು ನೀನು ಹೇಳುತ್ತಿರುವುದು ನಿಜಕ್ಕೂ ಒಂದು ಸಮಸ್ಯೆ’ ಎಂದು ಮೊದಲು ಒಪ್ಪಿಕೊಂಡಂತೆ ಮಾಡಿ, ‘ಆದರೆ ಟೆನ್ಶನ್ ತಗೋಬೇಡ, ನಾನೀದಿನಲ್ಲ’ ಅಂತ ಧೈರ್ಯ ತುಂಬಬೇಕು. ಎಂಥದ್ದೇ ಸಂದರ್ಭದಲ್ಲೂ ಕೂಲ್ ಆಗಿರಬೇಕು. ಅಂದ್ರೆ ಗಟ್ಟಿಗನಂತೆ ಅಂತಾರಲ್ಲ ಹಾಗಿರಲು ಪ್ರಯತ್ನಿಸಿ, ತಾಳ್ಮೆ, ಸ್ಥಿಮಿತ ಕಳೆದುಕೊಳ್ಳದ, ಕಕ್ಕಾವಿಕ್ಕಿ ಆಗದ ಹುಡುಗನ ಮೇಲೆ ನನಗೆ ಭರವಸೆ.

ಈ ದಿನಗಳಲ್ಲಿ ಹೆಣ್ಣು ಗಂಡಿನ ಸಂಬಂಧಗಳು ಹದಗೆಡುತ್ತಿರುವುದಕ್ಕೆ ಬಹಳ ಮುಖ್ಯವಾದ ಕಾರಣ ಚೀಟಿಂಗ್ ಅಥವಾ ಅನೈತಿಕ ಸಂಬಂಧಗಳು. ಪ್ರೀತಿ ಪ್ರೇಮ ಎಂದೆಲ್ಲಾ ಭಾವನಾತ್ಮಕವಾದ ಬೆಸುಗೆಯಿಲ್ಲದಿದ್ದರೂ, ಟೈಮ್ ಪಾಸ್ ಅಂತಲೋ, ಎಲ್ಲರೂ ಮಾಡ್ತಾ ಇದ್ದಾರೆ ನಾವೂ ಮಾಡುವ ಎನ್ನುವ ದುರಾಸೆಯಿಂದಲೋ ಇದು ಇತ್ತೀಚೆಗೆ ಬಹಳ ಸಾಮಾನ್ಯ ಆಗಿಬಿಟ್ಟಿರುವ ಸಮಸ್ಯೆಯಾಗಿದೆ. ಬಹುಪತ್ನಿತ್ವವೇ ಮನುಷ್ಯನ ಮೂಲಭೂತ ಸ್ವಭಾವ ಆಗಿರುವಾಗ, ಅವನಿಂದ ಏಕಪತ್ನಿತ್ವವನ್ನು ನಿರೀಕ್ಷಿಸುವುದು ಸರಿಯೇ ಎಂಬ ವಾದವನ್ನು ಮಂಡಿಸುವವರ ನಡುವೆ, ನನ್ನ ಹುಡುಗ ನನ್ನನ್ನಷ್ಟೇ ಪ್ರೀತಿಸಲಿ ಎಂದು ನಾನೂ ಆಸೆ ಪಡುವವಳು. ತಪ್ಪು ಎಂದು ಗೊತ್ತಿದ್ದೂ ಮಾಡುವುದು, ಪಶ್ಚತ್ತಾಪವಿಲ್ಲದಿರುವುದು, ಮತ್ತೆ ಮತ್ತೆ ಅವಕಾಶ ಸಿಕ್ಕಾಗಲೆಲ್ಲಾ ಹೆಂಗಸರನ್ನು ಬಲೆಗೆ ಬೀಳಿಸಿಕೊಳ್ಳುತ್ತಾ, ಫ್ಲರ್ಟ್ ಮಾಡುವ, ಎಲ್ಲರ ಭಾವನೆಗಳೊಂದಿಗೆ ಆಟವಾಡುವ ಹೆಣ್ಣುಬಾಕರನ್ನು ಎಂದಿಗೂ ನಂಬಲಾರೆ. ಮಿತಿ ಮೀರಿದರೆ ಇದೊಂದು ಮಾನಸಿಕ ವಿಕೃತಿಯೂ ಆಗಬಹುದು. ಮೊದಲಿಗೆ ಸುಲಭವಾಗಿ ಸಿಗುತ್ತಿದ್ದ ಹೆಣ್ಣುಗಳ ಸ್ನೇಹ ದುರ್ಲಭವಾದಾಗ ಬಲವಂತ ಮಾಡುವುದು, ಶೋಷಣೆ ಮಾಡುವುದಕ್ಕೂ ಹೇಸದ ಹುಡುಗರು ಎಂದಿಗೂ ಅಪಾಯವೇ.

ನಾನು ಇಷ್ಟಪಡುವ ಹುಡುಗ ಸ್ನೇಹಮಯಿ ಆಗಿರಬೇಕು. ಅವನು ನಾಲ್ಕು ಜನರಿಗೆ ಟೀಮ್ ಲೀಡ್ ಆಗಿರದಿದ್ದರೂ, ಇಬ್ಬರ ಪ್ರಾಣ ಸ್ನೇಹಿತನಾದರೂ ಆಗಿರಬೇಕು. ಸಂಜೆ ಆಫೀಸಿನಿಂದ ಬಂದ ಮೇಲೆ ಸಿನಿಮಾಗೆ ಕರೆದುಕೊಂಡು ಹೋಗ್ತೀನಿ ಎಂದು ಮಾತು ಕೊಟ್ಟಿದ್ದರೂ, ಊರಿನಿಂದ ಚಡ್ಡಿ ದೋಸ್ತ್ ಬಂದಿದ್ದಾನೆ ಅಥವಾ ಕೊಲೀಗ್ ನನಗೂ ಸೇರಿಸಿ ಕ್ರಿಕೆಟ್ ಮ್ಯಾಚ್ ಟಿಕೆಟ್ ತಗೊಂಡು ಬಿಟ್ಟಿದ್ದಾನೆ ಅಥವಾ ಫ್ರೆಂಡ್ಸ್ ಜೊತೆ ಎಣ್ಣೆ ಪಾರ್ಟಿ ಇದೆ, ಹೋಗಲೇಬೇಕು, ಎಂದರೆ ಖಂಡಿತ ಕೋಪ ಮಾಡಿಕೊಳ್ಳುವುದಿಲ್ಲ. ಚಿಕ್ಕವಳಿಂದಲೇ ಹಾಸ್ಟೆಲ್ ಸೇರಿದ ನನಗೆ, ನಮ್ಮ ಜೀವನದಲ್ಲಿ ಸ್ನೇಹಿತರ ಪಾತ್ರ ಎಷ್ಟು ದೊಡ್ಡದು ಎನ್ನುವ ಅರಿವಿದೆ. ಶಾಲೆ, ಕಾಲೇಜು, ಹಳೇ ಆಫೀಸ್, ಹೊಸ ಆಫೀಸ್, ಅಕ್ಕ ಪಕ್ಕದವರು… ಹೀಗೆ ಎಲ್ಲಾ ಸರ್ಕಲ್‌ಗಳಲ್ಲೂ ಫ್ರೆಂಡ್ಸ್ ಇದಾರೆ ಎಂದರೆ ಅವನು ‘ನಾರ್ಮಲ್ಲು’ ಅಂತಲೇ.

ಒಟ್ಟಾರೆ, ಒಂದು ಅರ್ಥಪೂರ್ಣವಾದ ಜೀವನ ನಡೆಸಲು ಒಂದು ಹೆಣ್ಣಿನ ಒಡನಾಟ ಮುಖ್ಯ ಅಗತ್ಯ ಮತ್ತು ಅನಿವಾರ್ಯ ಎಂದು ನಂಬಿರುವ ಹುಡುಗನನ್ನು ನಂಬಬಹುದು ಅನ್ನಿಸುತ್ತದೆ.

malagimanipoornima@gmail.com
(ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕಥೆ, ಕಾದಂಬರಿಗಳನ್ನು ಬರೆದಿರುವ ಪೂರ್ಣಿಮಾ ಮಾಳಗಿಮನಿ, ಭಾರತೀಯ ವಾಯುಸೇನೆಯಲ್ಲಿ ಏರೋ ನಾಟಿಕಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.)

 

Tags: