Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕಥೆಗಾರರ ಕಣ್ಣಿನಲ್ಲಿ ಗಂಡು ಮತ್ತು ಹೆಣ್ಣು

  • ವಿಕ್ರಂ ಹತ್ವಾರ್ 

ಗಂಡಸರೆಲ್ಲರು ಮಾರಿಗಳೋ ಸೋಮಾರಿಗಳೋ ಹಠಮಾರಿ ವ್ಯಾಪಾರಿಗಳೋ – ಏನೇ ಆಗಿರಬಹುದು. ಆದರೆ ಆಳದಲ್ಲಿ ದುರ್ಬಲರು. ಅದನ್ನು ಮುಚ್ಚಿಕೊಳ್ಳಲೆಂದೇ ತನ್ನ ಸುತ್ತ ಹಣ ಬಲ, ಜನ ಬಲ, ಅಧಿಕಾರ ಬಲದ ಕೋಟೆ ಕಟ್ಟಿಕೊಳ್ಳುವರು. ಅಂತಃಪುರದಲ್ಲಿ ಸತ್ವ ತುಂಬಿ ಸಲಹುವುದು ಮಾತ್ರ ಹೆಣ್ಣಿನ ಆಸರೆಯೇ.

ಅಸಹಾಯಕ ಪುರುಷನ ಅನಂತ ಕಷ್ಟಗಳು

 ಗಂಡಸರು ಮೂಲತಃ ಸೋಮಾರಿಗಳು. ಸಿಂಹಗಳ ವಿಷಯದಲ್ಲೂ ಇದು ನಿಜ. ಪುರುಷ ಸಿಂಹ ಬೇಟೆ ಆಡುವುದು ಕಡಿಮೆ. ಬೇಟೆ ಆಡಿ ಸಂಸಾರದ ಹೊಟ್ಟೆ ತುಂಬಿಸುವ ಕೆಲಸದಲ್ಲಿ ಹೆಣ್ಣು ಸಿಂಹಕ್ಕೇ ಸಿಂಹಪಾಲು. ಜೀವ ಸಂಕುಲದಲ್ಲಿ ಮಕ್ಕಳ ಪಾಲನೆ, ವಂಶದ ಅಭಿವೃದ್ಧಿ, ಕುಲದ ಸಂರಕ್ಷಣೆಯ ಜವಾಬ್ದಾರಿ ಕೂಡ ಹೆಣ್ಣಿನದೇ. ಸುಮ್ಮನೆ ಬೇಜವಾಬ್ದಾರಿಯಾಗಿ ಕಾಡೆಲ್ಲ ಅಲೆದಾಡಿಕೊಂಡಿರುವ ಗಂಡು, ಹೆಣ್ಣನ್ನು ಸೆಳೆಯುವುದಕ್ಕೆ ಸಾಧ್ಯವಾದರೆ ಅದೇ ಅದರ ಸಾಧನೆ. ಹೆಣ್ಣು ತಾನಾಗಿಯೇ ಅದರೆಡೆಗೆ ಆಕರ್ಷಿತಗೊಂಡರೆ ಅದು ಭುವನದ ಸೌಭಾಗ್ಯ. ಸಾವಿರ ಗರಿ ಹೊತ್ತು ಕುಣಿಯುವ ಗಂಡು ನವಿಲು, ಮಕರಂದ ಹೀರಿ ತನ್ನೊಳಗಿನಿಂದ ವಿಶಿಷ್ಟವಾದ ಸುವಾಸನೆ ಸೃಷ್ಟಿಸುವ ದುಂಬಿ, ಆಳವಾದ ಗಾಂಭೀರ್ಯದಿಂದ ಘರ್ಜಿಸುವ ಹುಲಿ, ದಟ್ಟವಾದ ಕೇಸರಿ ಬೀಸುತ್ತ ನಡೆಯುವ ಸಿಂಹ, ಎಲ್ಲವೂ ಹೆಣ್ಣನ್ನು ಆಕರ್ಷಿಸಲು. ಹೆಣ್ಣಿನೊಂದಿಗೆ ರತಿಕ್ರೀಡೆಗೆ ಸಹಕರಿಸುವುದಷ್ಟೇ ಗಂಡು ತಾನು ಈ ನಿಸರ್ಗಕ್ಕೆ ನೀಡಬಹುದಾದ ಬಹು ದೊಡ್ಡ ಕೊಡುಗೆ.

ಇದರ ಬಗ್ಗೆ ಕಿಂಚಿತ್ತಾದರೂ ಅನುಮಾನವಿದ್ದರೆ, ನ್ಯಾಷನಲ್ ಜಿಯೋಗ್ರಫಿಯಲ್ಲಿ ‘ಕ್ವೀನ್ಸ್’ ಎಂಬ ಸೀರೀಸಿನಲ್ಲಿರುವ ಆರು ಎಪಿಸೋಡು ನೋಡುವಷ್ಟರಲ್ಲಿ ಇದು ಸಂಪೂರ್ಣವಾಗಿ ಮನವರಿಕೆಯಾಗುತ್ತೆ. ಹೈನಾ, ಸಿಂಹ, ಆನೆ, ಇರುವೆ, ದುಂಬಿ, ಚಿಂಪಾಂಜಿ… ಹೀಗೆ ಎಲ್ಲ ವರ್ಗಗಳ ಜೀವಿಗಳಲ್ಲಿ ಹೆಣ್ಣು ಹೇಗೆ ರಾಣಿ ಪದವಿಯನ್ನು ಜೀವಿಸುತ್ತಾಳೆ, ತನ್ನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾಳೆ ಎನ್ನುವ ಕಥನವಿದೆ. ಚಿಂಪಾಂಜಿಯ ಕುಟುಂಬದಲ್ಲಿ ಹೊರಗಿನಿಂದ ಬಂದ ಹೆಣ್ಣು ತಾನಾಗಿಯೇ ಒಲಿದು ಸರಸಕ್ಕೆ ಆಹ್ವಾನಿಸಿದರೂ ಗಂಡು ಅದರೊಂದಿಗೆ ಕೂಡುವಂತಿಲ್ಲ. ಆ ಕುಟುಂಬದ ನಾಯಕಿಯ ಅನುಮತಿ ಪಡೆದೇ ಆ ಹೆಣ್ಣಿನ ಸಹವಾಸ ಮಾಡಬೇಕು! ಅದರೊಂದಿಗೆ ಆ ಹೊಸ ಹೆಣ್ಣು ಈ ಕುಟುಂಬದಲ್ಲಿ ತನ್ನ ಆಧಿಪತ್ಯವನ್ನು ಸ್ಥಾಪಿಸುವ ಮೊದಲ ಹೆಜ್ಜೆ ಇಟ್ಟಿರುತ್ತಾಳೆ. ಹೀಗೆ ಪ್ರತಿಯೊಂದು ಜೀವಿಯ ಕತೆಯಲ್ಲೂ ಹೆಣ್ಣಿಂದ ಹೆಣ್ಣಿಗೆ ಅಧಿಕಾರ ವರ್ಗಾವಣೆಯಾಗುವ ನಾನಾ ರೀತಿಯ ತಿರುವುಗಳಿವೆ! ತಾಯಿಯ ತ್ಯಾಗ, ಸ್ವಾರ್ಥ, ಚಾಣಾಕ್ಷತೆಗಳ ಅನಾವರಣವಿದೆ. ನಾವು ತಾಯಿಯನ್ನು ಭೂಮಿಗೆ ಹೋಲಿಸುತ್ತೇವೆ. ಏನೇ ತಪ್ಪು ಮಾಡಿದರೂ, ಎಲ್ಲವನ್ನೂ ಕ್ಷಮಿಸುತ್ತಾಳೆ ಅಂತ. ಅಪ್ಪ ಎಂದರೆ ಆಕಾಶ ಎನ್ನುತ್ತೇವೆ. ಎಲ್ಲ ಜವಾಬ್ದಾರಿ ಹೊರುತ್ತಾನೆ, ಕುಟುಂಬವನ್ನು ಪೊರೆಯುತ್ತಾನೆ ಅಂತ. ಆದರೆ ತೇಲುವ ಮೋಡಗಳ ಆಕಾಶ ಮಳೆ ಸುರಿಸಿ ನಿರಾಳವಾಗುತ್ತದೆ. ಬೆಳೆಯುವುದು ಪೊರೆಯುವುದು ಸೃಷ್ಟಿಯನ್ನು ಮುನ್ನಡೆಸುವುದು ಭೂಮಿಯ ಹೊಣೆಗಾರಿಕೆ. ಇಡಿಯ ಪ್ರಕೃತಿಯೇ ಮಾತೃ ಪ್ರಧಾನವಾಗಿದೆ. ಹೆಣ್ಣಿನ ಕಾರ್ಯ ಕ್ಷೇತ್ರವಾಗಿದೆ.

ಆದರೆ, ಮನುಷ್ಯ ಲೋಕದ ಲೆಕ್ಕಾಚಾರಗಳೇ ಬೇರೆ. ಗಂಡಿನ ಮೇಲೆ ವಿಪರೀತ ನಿರೀಕ್ಷೆಗಳ ಭಾರ. ಆತ ಏನೇ ಮಾಡಿದರೂ, ಆತನನ್ನು ಯಶಸ್ಸಿನ ಮೂಲಕವೇ ಅಳೆಯಲಾಗುತ್ತದೆ. ಕಾಡು ಅಲೆಯುವವರು, ಹಕ್ಕಿಯ ದನಿಗೆ ಮೈಮರೆತವರು, ಕಾವ್ಯದಲ್ಲಿ ಮುಳುಗಿರುವವರು ನಿಷ್ಪ್ರಯೋಜಕರು. ಭಾವುಕತೆ ಎನ್ನುವುದು ನ್ಯೂನತೆ. ಕರಗುವವನು ಅವಿವೇಕಿ. ಪಣಕ್ಕಿಟ್ಟು ಆಡುವವನು ಜೂಜುಕೋರ. ಹೂವಿಗೆ, ಹೆಣ್ಣಿಗೆ ಮನ ಸೋಲುವುದು ಮರುಳುತನ. ಮತ್ತೆ ಮತ್ತೆ ಮರುಳಾದರೆ ಲಂಪಟ! ಬದುಕಿನಲ್ಲಿ ಯಶಸ್ವಿ ಆಗಬೇಕೆಂದರೆ ಈ ಎಲ್ಲದರಿಂದ ದೂರ ಇರಬೇಕು. ಇಂಥ ಕಳಂಕ ತನ್ನ ಹತ್ತಿರ ಸುಳಿಯದಂತೆ ಎಚ್ಚರದಿಂದಿರಬೇಕು. ಗಂಡು ಬಲಾಢ್ಯನಾಗಿರಬೇಕು, ಬುದ್ಧಿವಂತನಾಗಿರಬೇಕು, ಅಧಿಕಾರ ಹೊಂದಿರಬೇಕು, ಕೊನೆಯ ಪಕ್ಷ ಚಾಣಾಕ್ಷನಾಗಿರಬೇಕು. ಇಂಥ ಬಲಾಢ್ಯರೇ ಯಶಸ್ವಿಯಾಗುವುದು. ಯಶಸ್ಸೆಂದರೆ ಹಣ, ಕೀರ್ತಿ, ಅಧಿಕಾರ. ಒಮ್ಮೆ ಯಶಸ್ವಿ ಅನ್ನಿಸಿಕೊಂಡ ಮೇಲೆ ಮುಗಿಯಿತು. ಆಗ ಇದೇ ಲಂಪಟತನ ಲವಲವಿಕೆ ಅನ್ನಿಸಿಕೊಳ್ಳುತ್ತೆ. ವಾಂಛೆಗಳ ಬೆನ್ನಟ್ಟಿ ಹೋಗುವುದೇ ಜೀವನೋತ್ಸಾಹ. ಜೊತೆಗೆ ನಿರ್ಲಜ್ಜೆಯನ್ನೂ ರೂಢಿಸಿಕೊಂಡು ಬಿಟ್ಟರೆ, ತಾನು ಮಾಡಿದ್ದಕ್ಕೆಲ್ಲ ತಾನೇ ಮಾಫಿ ನೀಡುತ್ತ ಮುನ್ನುಗ್ಗುತ್ತಾನೆ. ನಿರ್ಲಜ್ಜೆಯೇ ಹೆಮ್ಮೆಯ ಸಂಗತಿಯಾಗುತ್ತೆ. ಕರಗದೆ ಸೋಲದೆ ಭಾವುಕನಾಗದೆ ಎಲ್ಲವನ್ನೂ ಪಡೆಯಬಹುದು. ಸೋಲದೆ ಪಡೆಯುವುದಕ್ಕಾಗಿ ಗೆಲ್ಲುವ ಹಠ. ನೂರೆಂಟು ವೇಷದಾಟ.

ಯಾಕೆಂದರೆ, ಇಲ್ಲಿ ಸೋತ ಗಂಡಸಿನ ಅವಸ್ಥೆ ಅವನಿಗೆ ಚೆನ್ನಾಗಿ ಗೊತ್ತು. ಯೌವನದಲ್ಲಿನ ಸೋಲು ಒಂದು ಬಗೆಯದ್ದಾದರೆ, ಮಧ್ಯ ವಯಸ್ಸಿನ ಸೋಲಿನ ಮುಜುಗರ ಮತ್ತೊಂದೇ ಬಗೆಯದು. ಯೌವನದಲ್ಲಿ ಬದುಕಿನಲ್ಲಿನೆಲೆಗೊಳ್ಳುವ ಹೋರಾಟವಿದ್ದರೆ ನಡುವಯಸ್ಸಿನಲ್ಲಿ ಆ ನೆಲೆಯನ್ನು ಭದ್ರಪಡಿಸಿಕೊಳ್ಳುವ ಧಾವಂತ. ಯಾವ ಹಂತದಲ್ಲಿ ಸೋತರೂ ಅವಮಾನ ನಿಶ್ಚಿತ. ಯೌವನದಲ್ಲಿ ಹೆಣ್ಣು ಒಲಿಯದ ಸಂಕಟ ಒಂದು ಬಗೆಯದ್ದಾದರೆ, ನಡುವಯಸ್ಸಿನಲ್ಲಿ ಒಲಿದ ಹೆಣ್ಣಿನ ಭಾವ ಬದಲಾಗುವ ಸಂಕಟ. ರಾಜ್ಯ ಆಳಬೇಕಾದ ಸಮಯದಲ್ಲಿ ಹೆಂಡತಿಯನ್ನು ಕಾಡಿಗೆ ಕರೆದುಕೊಂಡು ಹೊರಟ ಮಾತ್ರಕ್ಕೆ ರಾಮನಾಗಲಾರ. ಅದೃಷ್ಟದಾಟದಲ್ಲಿ ಎಲ್ಲವನ್ನೂ ಪಣಕ್ಕಿಟ್ಟು ಸೋತ ಮಾತ್ರಕ್ಕೆ ಧರ್ಮರಾಯನಾಗಲಾರ. ಇಲ್ಲಿ ಕಳೆದುಕೊಂಡವರು ಕೇವಲವಾಗಿಬಿಡುತ್ತಾರೆ. ಊರು ಸಮಾಜ ಮಾತ್ರವಲ್ಲ, ತನ್ನವರ ಕಣ್ಣಿನಲ್ಲೇ ತಾನು ನಿಕೃಷ್ಟ. ಅರ್ಧಾಂಗಿಯೇ ಅಂಗಿ ಹರಿಯುತ್ತಾಳೆ. ಅಂಥ ಹೀನಾಯ ಸ್ಥಿತಿಯ ಅವಮಾನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಾನೊಬ್ಬ ಯಶಸ್ವೀ ಪುರುಷ ಅನ್ನಿಸಿಕೊಳ್ಳುವ ಸಾಹಸ.

ಇಂಥ ಸಾಹಸಕ್ಕೆ ತಾನು ಹೊರಳಿಕೊಂಡಿದ್ದಾದರು ಯಾವಾಗ? ಋತುಮತಿಯಾದಾಗ ಹೆಣ್ಣಿಗೆ ತಾನು ಹೆಣ್ಣಾದೆ ಎನ್ನುವ ಒಂದು ಗುರುತಿನ ಕಾಲಘಟ್ಟವಿರುತ್ತೆ. ಆದರೆ ಗಂಡಿಗೆ, ಯಾವ ಹಂತದಲ್ಲಿ ತನ್ನ ಗಂಟಲು ಒಡೆದು ದನಿ ಗಡುಸಾಯಿತು ಅನ್ನುವುದೂ ತಿಳಿದಿರುವುದಿಲ್ಲ. ಅಷ್ಟರಲ್ಲಾಗಲೇ ಅವನನ್ನು ಗಂಡಸುತನದ ಪೊರೆ ಆವರಿಸಿಬಿಟ್ಟಿರುತ್ತೆ. ಹೆಣ್ಣಿನ ಮೇಲೆ ನಿರ್ಬಂಧಗಳನ್ನು ಹೇರಿದರೆ, ಗಂಡಿನ ಒಳಗೆ ಪುರುಷತ್ವದ ಅಹಂಕಾರವನ್ನು ಬಿತ್ತುತ್ತಾರೆ. ಬಾಲ್ಯದ ಅಂಜಿಕೆ ಹಿಂಜರಿಕೆ ಅವಲಂಬನೆಯನ್ನು ಮೀರುವುದಕ್ಕಾಗಿ, ತನ್ನದೇ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವುದಕ್ಕಾಗಿ ಗಂಡು ದುಡಿಮೆಗೆ ಇಳಿಯುತ್ತಾನೆ. ಹೆಣ್ಣು ಜೀವಮಾನ ಪೂರ್ತಿ ದುಡಿದರೂ, ಮನೆಯ ಒಳಗೂ ಹೊರಗೂ ದುಡಿದರೂ, ಎಷ್ಟೋ ಕುಟುಂಬಗಳು ಹೆಣ್ಣಿನ ಸಂಪಾದನೆಯಿಂದಲೇ ನಡೆಯುತ್ತಿದ್ದರೂ, ‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವ ಉಕ್ತಿ ಮಾತ್ರ ಬದಲಾಗಿಲ್ಲ. ಅದು ಗಂಡಿನ ಪಾಲಿಗೆ ಬೆಂಬಿಡದ ಭೂತವಾಗಿದೆ.

ಕೆಲವು ವಿಚಾರವಂತ ಕುಟುಂಬಗಳಲ್ಲಿ ಹೆಣ್ಣಿಗೆ – ಏನನ್ನು ಬೇಕಾದರೂ ಕಲಿ, ಯಾವ ಕೆಲಸವನ್ನು ಬೇಕಾದರೂ ಮಾಡು, ಇಷ್ಟವಿದ್ದರೆ ಮಾಡು ಇಲ್ಲದಿದ್ದರೆ ಬೇಡ – ಎನ್ನುವ ವಾತಾವರಣವಿದೆ. ಮದುವೆಯ ಪ್ರಸ್ತಾಪದಲ್ಲು, ಕೆಲಸಕ್ಕೆ ಹೋಗುವ ಅಥವ ಹೋಗದಿರುವ ಆಯ್ಕೆಯನ್ನು ಹೆಣ್ಣಿಗೇ ಬಿಡುತ್ತಾರೆ. ಆದರೆ ಗಂಡಿಗೆ ಆ ಆಯ್ಕೆ ಇಲ್ಲ. ‘ನೀನು ಸಂಪಾದನೆ ಮಾಡಿದರೂ ಪರವಾಗಿಲ್ಲ; ಮಾಡದಿದ್ದರೂ ಪರವಾಗಿಲ್ಲ’ ಅಂತ, ಮದುವೆಗೆ ಮುಂಚೆ ಹೆಣ್ಣಿನ ಕಡೆಯಿಂದ ಹೇಳಿಸಿಕೊಂಡ ಗಂಡಸು ಇದುವರೆಗೆ ಹುಟ್ಟಿಯೇ ಇಲ್ಲ. ಹಾಗಾಗಿ ಸಂಪಾದನೆ ಅನ್ನುವುದು ಗಂಡಿನ ಪಾಲಿಗೆ ಎಲ್ಲ ಬಗೆಯಿಂದಲೂ ಅಘೋಷಿತ ಅನಿವಾರ್ಯ ಕರ್ಮ. ಸಂಪಾದನೆಯ ಹಾದಿಯಲ್ಲಿ ದುಡಿಮೆ ಎನ್ನುವುದು ಧರ್ಮವಾಗುವ ಬದಲು ಪ್ರತಿಷ್ಠೆಯಾಗುತ್ತದೆ. ಅಹಂಕಾರದ ಸಂಕೋಲೆ ಜಟಿಲಗೊಳ್ಳುತ್ತ ಬೆಳೆಯುತ್ತದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸುವುದಕ್ಕಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಹೆಚ್ಚಿನ ಸ್ಥಾನಮಾನ ಪಡೆಯಲು ಪ್ರಯತ್ನಿಸುತ್ತಾನೆ. ಹಾಗೆ ಗಟ್ಟಿಗೊಂಡ ಅಹಂಕಾರಕ್ಕೆ ಪೆಟ್ಟಾದರೆ, ತಾನು ಅಂದುಕೊಂಡ ಎತ್ತರ ಏರಲಾಗದಿದ್ದರೆ ಸಿಟ್ಟು. ನಿರ್ಲಕ್ಷ್ಯಕ್ಕೆ ಒಳಗಾದರೆ ಹತಾಶೆ.

ಇಷ್ಟೆಲ್ಲ ಮಾಡಿ, ಏನೆಲ್ಲ ಸಂಪಾದಿಸಿದ ಮೇಲೂ, ಗಂಡು ಕೊನೆಗೂ ನಿರೀಕ್ಷಿಸುವುದು – ಇದೆಲ್ಲ ಇರದಿದ್ದರೂ, ಇರುವುದನ್ನೆಲ್ಲ ಕಳೆದುಕೊಂಡರೂ, ಯಾವುದನ್ನೂ ನೋಡದೆ ತನ್ನನ್ನು ನಿಜವಾಗಿ ಬಯಸುವ ಹೆಣ್ಣನ್ನು. ಎಲ್ಲ ಸಂಬಂಧಗಳಲ್ಲೂ ಅವನು ಅದನ್ನೇ ಹಂಬಲಿಸುತ್ತಾನೆ. ಆಸ್ತಿಗಾಗಿ ಆದರಿಸುವ ಮಕ್ಕಳನ್ನು, ಸ್ವಾರ್ಥಕ್ಕಾಗಿ ಸುಳಿಯುವ ಸ್ನೇಹಿತರನ್ನು, ಲಾಭಕ್ಕಾಗಿ ಸುತ್ತಿಕೊಳ್ಳುವ ಸಂಬಂಧಿಕರನ್ನು ಯಾರು ತಾನೆ ಸಹಿಸುತ್ತಾರೆ? ತನ್ನ ಬಳಿ ಎಲ್ಲವೂ ಇರಬೇಕು. ಆದರೆ ತನ್ನವರು ಅದಕ್ಕಾಗಿ ಹಾತೊರೆಯಬಾರದು. ತನ್ನವರ ಆಸೆಗಳ ಭಾರಕ್ಕೆ ಕುಸಿಯುತ್ತಾನೆ. ಆ ಕುಸಿತದಲ್ಲಿ ಆ ಹುಸಿತನ ನಿಭಾಯಿಸಲಾಗದೆ ಮತ್ತೆ ಸಿಟ್ಟು, ಆಕ್ರೋಶ, ಹತಾಶೆ. ಒಳಗೊಳಗೆ ಒಣಗುತ್ತ ಜೀವದ ಸತ್ವವೇ ಇಂಗಿಹೋಗುತ್ತದೆ.

ತಾನೇ ಪೋಷಿಸಿಕೊಂಡು ಬಂದಿರುವ ಇಂಥ ಸಂಕೋಲೆಗಳು ಸ್ವಲ್ಪವಾದರು ಸಡಿಲಗೊಳ್ಳುವ ಸಂದರ್ಭ ಬದುಕಿನಲ್ಲಿ ಒಮ್ಮೆ ಸಿಕ್ಕರೂ ಸಾಕು, ಗಂಡಸು ಕರಗುತ್ತಾನೆ. ಈ ಕರಗುವಿಕೆಗೇ ಹಾತೊರೆಯುತ್ತಿದ್ದೆ ಎನ್ನುವಂತೆ ಶರಣಾಗತನಾಗುತ್ತಾನೆ. ಪ್ರಭಾವಿ ವ್ಯಕ್ತಿಗಳು ಜೀವನದ ಉನ್ನತ ಘಟ್ಟದಲ್ಲಿರುವಾಗಲೇ ಯಾವುದೋ ಒಂದು ಹೆಣ್ಣಿನ ಪ್ರೇಮ ಪಾಶಕ್ಕೆ ಸಿಲುಕಿ ಸೋಲುತ್ತಾರೆ. ಗೆಲ್ಲುವುದೊಂದೇ ಧ್ಯೇಯವಾಗಿರುವ ಪ್ರಪಂಚದಲ್ಲಿ ಹೆಣ್ಣಿನೆದುರಿನ ಆ ಸೋಲು ಅವರಿಗೆ ಜೀವನದ ನಿಜವಾದ ಹಿತವನ್ನು ಕಾಣಿಸಿರುತ್ತೆ. ಅಲ್ಲಿ ಅವರಿಗೆ ತಮ್ಮ ಕೀರ್ತಿ, ಪ್ರತಿಷ್ಠೆ ಯಾವುದೂ ಬಾಧಿಸುವುದಿಲ್ಲ. ಸಮಾಜದ ಅಪಹಾಸ್ಯಕ್ಕೆ ಈಡಾಗುವ ಅಂಜಿಕೆಯಲ್ಲಿ. ಯಾರು ಏನು ತಿಳಿದಾರೆಂಬ ಗೊಡವೆಯಿಲ್ಲ. ತನ್ನವರು ಅನ್ನಿಸಿಕೊಂಡವರು ತನ್ನನ್ನು ದೂರ ಮಾಡಬಹುದೆನ್ನುವ ಚಿಂತೆಯಿಲ್ಲ. ಇದುವರೆಗೆ ಗೆದ್ದಿರುವುದೆಲ್ಲವೂ ಈ ಒಂದು ಸೋಲಿನಿಂದಾಗಿ ಸಾರ್ಥಕವೆನಿಸುತ್ತೆ.

ಗಂಡಸರೆಲ್ಲರೂ ಮಾರಿಗಳೋ ಸೋಮಾರಿಗಳೋ ಹಠಮಾರಿ ವ್ಯಾಪಾರಿಗಳೋ – ಏನೇ ಆಗಿರಬಹುದು. ಆದರೆ ಆಳದಲ್ಲಿ ದುರ್ಬಲರು. ಅದನ್ನು ಮುಚ್ಚಿಕೊಳ್ಳಲೆಂದೇ ತನ್ನ ಸುತ್ತ ಹಣ ಬಲ, ಜನ ಬಲ, ಅಧಿಕಾರ ಬಲದ ಕೋಟೆ ಕಟ್ಟಿಕೊಳ್ಳುವರು. ಅಂತಃಪುರದಲ್ಲಿ ಸತ್ವ ತುಂಬಿ ಸಲಹುವುದು ಮಾತ್ರ ಹೆಣ್ಣಿನ ಆಸರೆಯೇ. ಮುಡಿ ಕಟ್ಟಲು ಶತ್ರುಗಳ ರಕ್ತಕ್ಕಾಗಿ ಹಠ ಹಿಡಿದ ದ್ರೌಪದಿಯೇ, ಸೌಗಂಧಿಕ ಪುಷ್ಪದ ಪರಿಮಳವನ್ನೂ ಬಯಸಿದಳು. ಸಾವಿರ ಆನೆಯ ಬಲದ ಭೀಮನಂಥ ಭೀಮನು ಹೆಂಡತಿಯನ್ನು ನಿರ್ಲಕ್ಷಿಸಬಹುದಿತ್ತು. ಸೀತೆಯನ್ನು ಕಳೆದುಕೊಂಡ ರಾಮ ಹುಡುಕುವಷ್ಟು ಹುಡುಕಿ, ಹೆಂಡತಿಯನ್ನು ಮರೆತು ಬದುಕಿನಲ್ಲಿ ಮುಂದುವರಿದು ನಿರಾಳನಾಗಿರಬಹುದಿತ್ತು.

ದ್ರೌಪದಿಯ ಬೊಗಸೆಯಲ್ಲಿ ಮುಖವಿಟ್ಟು ಅಳುವ ಭೀಮಸೇನ, ಸೀತೆಗಾಗಿ ಕಾಡಲ್ಲೆಲ್ಲ ಹುಚ್ಚನಂತೆ ಅಲೆಯುವ ರಾಮಚಂದ್ರ – ಇದು ಗಂಡಿನ ಬಯಕೆಯ ಆತ್ಯಂತಿಕ ಅವಸ್ಥೆಯ ಪ್ರತೀಕಗಳು. ಗಂಡು ಪರಿಪೂರ್ಣನಾಗುವುದು ತಾನು ಆಂತರ್ಯದಲ್ಲಿ ಹೆಣ್ಣಾದಾಗ. ಹಾಗಾದರೆ ಹೆಣ್ಣು? ಇದರ ಮರ್ಮ ಅರಿತರೆ ಜೀವನದ ಸರಳ ಸತ್ಯವನ್ನು ಅರಿತಂತೆ. ಎಲ್ಲ ಸಂಕೋಲೆಗಳಿಂದ ಕಳಚಿಕೊಂಡಂತೆ. ಅಲ್ಲಿವರೆಗೂ ನಿರೀಕ್ಷೆಗಳ ಭಾರದಲ್ಲಿ ಗಂಡು ಹೆಣ್ಣಿನ ಪರಸ್ಪರ ತಿಕ್ಕಾಟ ನಡೆಯುತ್ತಲೇ ಇರುತ್ತದೆ.

vhathwar@gmail.com

(ಕಥೆಗಾರ ವಿಕ್ರಮ್ ಹತ್ವಾರ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪಡೆದವರು. ‘‘ಕಾಗೆ ಮೇಷ್ಟ್ರು’’… ‘ಝೀರೋ ಮತ್ತು ಒಂದು’ ಹಾಗೂ ‘ಹಮಾರಾ ಬಜಾಜ್’ ಇವರ ಕಥಾ ಸಂಕಲನಗಳು)

 

Tags: