Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಹಳೆ ತಲೆಮಾರಿನ ರಾಜಕಾರಣಿಗಳ ಕೊಂಡಿ ಕಳಚಿಹೋಗಿದೆ : ಸಿ.ಎಂ ಸಿದ್ದರಾಮಯ್ಯ

ಮೈಸೂರು : ಶ್ರೀನಿವಾಸ ಪ್ರಸಾದ್‌ ನಿಧನದಿಂದ ಹಳೆ ತಲೆಮಾರಿನ ರಾಜಕಾರಣಿಗಳ ಕೊಂಡಿ ಕಳಚಿಹೋಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ ಆವರಣದಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಪ್ರಸಾದ್‌ ನಿಧನದಿಂದ ಹಳೆ ತಲೆ ಮಾರಿನ ರಾಜಕಾರಣಿಗಳ ಕೊಂಡಿ ಒಂದು ಕಳಚಿಹೋಗಿದೆ ಎಂದು ತಿಳಿಸಿದರು.

ಪ್ರಸಾದ್‌ ಅವರು ಮನುಷ್ಯತ್ವದ ಬಗ್ಗೆ ಗೌರವ ಇಟ್ಟಿದ್ದರು. ಹೀಗಾಗಿ ಯಾವುದೇ ಪಕ್ಷದಲ್ಲಿದ್ದರೂ ಮನುಷ್ಯತ್ವಕ್ಕೆ ಗೌರವ ನೀಡುತ್ತಿದ್ದರು ಎಂದರು.

ಯಾರಿಗೆಲ್ಲಾ ರಾಜಕಾರಣದಲ್ಲಿ ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್‌ ಅವರ ಬಗ್ಗೆ ಕ್ಲ್ಯಾರಿಟಿ ಇರುತ್ತದೆ ಅವರೆಲ್ಲರಿಗೂ ಮನುಷ್ಯತ್ವದ ಪರವಾಗಿ ಇರಲು ಸಾಧ್ಯ. ಶ್ರೀನಿವಾಸ ಪ್ರಸಾದ್‌ ಅವರಿಗೆ ಆ ಕ್ಲ್ಯಾರಿಟಿ ಇತ್ತು ಎಂದು ತಿಳಿಸಿದರು.

ರಾಜಕೀಯದಲ್ಲಿದ್ದಾಗ ಪರಸ್ಪರ ಟೀಕೆ ಮಾಡುವುದು ಸ್ವಾಭಾವಿಕ. ಶ್ರೀನಿವಾಸ ಪ್ರಸಾದ್‌ ಅವರು ನನ್ನನ್ನು ಅನೇಕ ಬಾರಿ ಟೀಕೆ ಮಾಡಿದ್ದಾರೆ. ನಾನೂ ಅನೇಕ ಬಾರಿ ಅವರ ಬಗ್ಗೆ ಮಾತನಾಡಿದ್ದೇನೆ. ಆದರೆ ನಮ್ಮಿಬ್ಬರ ಸ್ನೇಹಕ್ಕೆ ಎಂದಿಗೂ ಧಕ್ಕೆ ಬಂದಿರಲಿಲ್ಲ ಎಂದರು.

ಆರಂಭದ ದಿನ ಮೆಲಕು ಹಾಕಿದ ಸಿಎಂ : ಪ್ರಸಾದ್‌ ಹಾಗೂ ನಾನು ಹೆಚ್ಚುಕಮ್ಮಿ ಒಂದೇ ವಯಸ್ಸಿನವರು. ಆದರೆ ನನಗಿಂತ ಮೊದಲೇ 1974ರಲ್ಲಿ ಪ್ರಸಾದ್‌ ಚುನಾವಣಾ ರಾಜಕಾರಣಕ್ಕೆ ಬಂದವರು. ಜನತಾ ಪಕ್ಷ ಪ್ರಾರಂಭವಾದಾಗ ನಾನು ಅವರು ಒಟ್ಟಿಗೆ ಇದ್ದವರು. ಆಗಿನಿಂದ ಅವರ ಪರಿಚಯ ಎಂದರು.

ಪ್ರಸಾದ್‌ ಮೊದಲಿನಿಂದ ಕಾಂಗ್ರೆಸ್‌ ವಿರೋಧಿಯಾಗಿದ್ದರು. ಕೆಲವು ಸ್ನೇಹಿತರ ಒತ್ತಾಸೆಯಿಂದ ಕಾಂಗ್ರೆಸ್‌ ಸೇರಿದ್ದರು. 1980ರ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಪ್ರಸಾದ್‌ ಗೆದ್ದರು. ಆಗ ನಾನು ಜನತಾದಳ ಪಕ್ಷದಲ್ಲಿದೆ. ಆಗ ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ ಇಬ್ಬರ ನಡುವಿನ ಪರಸ್ಪರ ಗೌರವ ಹಾಗೂ ಸ್ನೇಹ ಮುಂದುವರೆದುಕೊಂಡೇ ಬಂದಿತ್ತು ಎಂದು ಶ್ರೀನಿವಾಸ ಪ್ರಸಾದ್‌ ಅವರ ಜತೆಗಿನ ಸ್ನೇಹದ ದಿನಗಳನ್ನು ಮೆಲುಕು ಹಾಕಿದರು.

ಶ್ರೀನಿವಾಸ ಪ್ರಸಾದ್‌ಗೆ ಗುಲಾಮಗಿರಿ ಕೀಳರಿಮೆ ಇರಲಿಲ್ಲ : ದಲಿತರಿಗೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಹಾಗೂ ಬಡವರಿಗೆ ಸ್ವಾಭಿಮಾನ ಇರಲೇಬೇಕು. ಸ್ವಾಭಿಮಾನ ಇದ್ದರೆ ಮಾತ್ರ ನಾವು ಮನುಷ್ಯರಾಗಿರಲು ಸಾಧ್ಯ. ಇಲ್ಲವಾದರೆ ಗುಲಾಮಗಿರಿಯ ಕೀಳರಿಮೆ ಮುಂದುವರೆಯುತ್ತದೆ. ಶ್ರೀನಿವಾಸ ಪ್ರಸಾದ್‌ ಅವರಿಗೆ ಆ ಗುಲಾಮಗಿರಿ ಕೀಳರಿಮೆ ಇರಲಿಲ್ಲ. ಯಾವುದೇ ಪಕ್ಷದಲ್ಲಿದ್ದರೂ ಸ್ವಾಭಿಮಾನಕ್ಕೆ ಧಕ್ಕೆ ಆದರೆ ತಕ್ಷಣ ತೀರ್ಮಾನ ಕೈಗೊಳ್ಳುತ್ತಿದ್ದರು ಎಂದೂ ಸಹ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ,  ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ,  ಮಾಜಿ ಸಂಸದ ಪ್ರತಾಪ್‌ ಸಿಂಹ,  ಶ್ರೀವತ್ಸ, ಮಾಜಿ ಸಚಿವ ಪಿ.ಜಿ.ಆರ್‌.ಶಿಂಧ್ಯ, ಹಿರಿಯ ವಕೀಲ ಸಿ.ಎಸ್‌.ದ್ವಾರಕಾನಾಥ್‌, ಮಾಜಿ ಶಾಸಕ ಹರ್ಷವರ್ಧನ್‌ ಉಪಸ್ಥಿತರಿದ್ದರು.

Tags: