ಮೈಸೂರು: ಮೈಸೂರಿನಲ್ಲಿ ಮಳೆ ಆರ್ಭಟ ಮತ್ತೆ ಜೋರಾಗದ್ದು, ನಗರದ ಹಲವೆಡೆ ಅಪಾರ ಹಾನಿ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. ನಗರದ ರಾಮಕೃಷ್ಣ ನಗರದ ಕನಕ ಟ್ರಾವೆಲ್ಸ್ ಬಳಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಬೃಹತ್ ಗಾತ್ರದ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದಿದ್ದು ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ.
ಮರ ವಿದ್ಯುತ್ ತಂತಿ, ಕಂಬದ ಮೇಲೆ ಬಿದ್ದಾಗ ವಿದ್ಯುತ್ ಸಂಪರ್ಕ ಕಡಿತವಾಗಿ ಗುರುವಾರ ಮಧ್ಯಾಹ್ನ ವಾದರೂ ಮರವನ್ನು ತೆರವುಗೊಳಿಸದೆ, ವಿದ್ಯುತ್ ವ್ಯವಸ್ಥೆ ಸರಿಪಡಿಸದೇ ಇದ್ದುದರಿಂದ ವಿದ್ಯುತ್ ಪೂರೈಕೆಯಿಲ್ಲದೆ ಬಡಾವಣೆ ನಿವಾಸಿಗಳು ಪರದಾಡಿದರು.
ಜತೆಗೆ ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಕಂಬ ತುಂಡಾಗಿ ಮರದ ಕೆಳಗೆ ನಿಲ್ಲಿಸಿದ್ದ ಕಾರೊಂದರ ಮೇಲೆ ಉರುಳಿದೆ. ಆದರೆ ಕಾರಿಗೆ ಹೆಚ್ಚು ಹಾನಿಯಾಗಿಲ್ಲ.
ರಾತ್ರಿ ಮಳೆಯಾದ ಸಂದರ್ಭದಲ್ಲಿ ಅಂತಹ ಭಾರೀ ಗಾಳಿ ಇಲ್ಲದಿದ್ದರೂ ತೇವಾಂಶದಿಂದ ಬೇರು ಸಡಿಲಗೊಂಡಿದ್ದ ಮರ ಬಿದ್ದಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಅಲ್ಲದೆ ಮಳೆಯಾಗುತ್ತಿದ್ದರಿಂದ ಈ ಸ್ಥಳದಲ್ಲಿ ಜನರ ಓಡಾಟ ಇಲ್ಲದ್ದರಿಂದ ಅನಾಹುತ ತಪ್ಪಿದೆ.