Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

IPL 2024: ಸ್ಟೋಯ್ನಿಸ್‌ ಆಲ್‌ರೌಂಡರ್‌ ಆಟ: ಮುಂಬೈ ವಿರುದ್ಧ ಲಖನೌಗೆ ಭರ್ಜರಿ ಗೆಲುವು!

ಲಖನೌ: ಲಖನೌ ಸೂಪರ್‌ ಜೈಂಟ್ಸ್‌ ತಂಡದ ಆಲ್‌ರೌಂಡರ್‌ ಆಟದ ಮುಂದೆ ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಮಂಡಿಯೂರಿದೆ. ಆ ಮೂಲಕ ಈವರೆಗಿನ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನಷ್ಟೇ ಗೆದ್ದಿರುವ ಮುಂಬೈ ಬಹುತೇಕ ಟೂರ್ನಿಯಿಂದಲೇ ಹೊರ ಬಿದ್ದಂತಾಗಿದೆ.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಸೀಸನ್‌ 17ರ 47ನೇ ಪಂದ್ಯದಲ್ಲಿ ಎಲ್‌ಎಸ್‌ಜಿ ಹಾಗೂ ಎಂಐ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 144 ರನ್‌ ಬಾರಿಸಿ 145 ರನ್‌ಗಳ ಗುರಿ ನೀಡಿದರು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಲಖನೌ 19.2 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 145 ಮೊತ್ತ ದಾಖಲಿಸಿ 4 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.

ಎಂಐ ಇನ್ನಿಂಗ್ಸ್;‌ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈಗೆ ಮಾಜಿ ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಆಘಾತ ನೀಡಿತು. ರೋಹಿತ್‌ 4(5) ಬಾರಿಸಿದರೇ ಇಶಾನ್‌ ಕಿಸಾನ್‌ 32(36) ಔಟಾಗಿ ಹೊರ ನಡೆದರು. ಈ ಇಬ್ಬರ ನಂತರ ಬಂದ ಬೇರ್ಯಾವ ಆಟಗಾರರು ತಂಡಕ್ಕೆ ಆಸರೆಯಾಗಲಿಲ್ಲ. ಈ ಬಾರಿಯೂ ಮುಂಬೈ ತಂಡಕ್ಕೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಸೂರ್ಯಕುಮಾರ್‌ ಯಾದವ್‌ 10(6) ಬಂದ ಹಾದಿಯಲ್ಲೇ ಹಿಂತಿರುಗಿದರು. ತಿಲಕ್‌ ಮರ್ಮಾ 7(11), ನಾಯಕ ಹಾರ್ದಿಕ್‌ ಪಾಂಡ್ಯ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.

ಬಳಿಕ ಒಂದಾದ ವಧೇರಾ ಹಾಗೂ ಟಿಮ್‌ ಡೇವಿಡ್‌ ಚೇತರಿಕೆ ಆಟವಾಡಿದರು. ವಧೇರಾ 46(41)ರನ್‌ ಹಾಗೂ ಡೇವಿಡ್‌ 35(18) ರನ್‌ ಬಾರಿಸಿ ತಂಡದ ಮೊತ್ತ 140ರ ಗಡಿ ದಾಟಲು ಸಹಕರಿಸಿದರು. ಉಳಿದಂತೆ ನಬಿ ಹಾಗೂ ಕಾಟ್ಜಿ ಔಟಾಗದೇ ತಲಾ ಒಂದೊಂದು ರನ್‌ ಬಾರಿಸಿದರು.

ಲಖನೌ ಪರ ಮೋಹ್ಸಿನ್‌ ಖಾನ್‌ 2, ಸ್ಟೋಯ್ನಿಸ್‌, ನವೀನ್‌ ಹುಲ್‌-ಹಕ್‌, ಮಯಾಂಕ್‌ ಯಾದವ್‌ ಹಾಗೂ ಬಿಷ್ನೋಯಿ ತಲಾ ಒಂದೊಂದು ವಿಕೆಟ್‌ ಪಡೆದು ಗಮನ ಸೆಳೆದರು.

ಎಲ್‌ಎಸ್‌ಜಿ ಇನ್ನಿಂಗ್ಸ್‌: ತಮ್ಮ ತವರಿನಂಗಳದಲ್ಲಿ ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಲಖನೌ ಪಡೆಗೆ ಆರಂಭಿಕ ಕುಸಿತ ಉಂಟಾಯಿತು. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದ ಅರ್ಷಿನ್‌ ಕುಲ್ಕರ್ಣಿ ಶೂನ್ಯ ಸುತ್ತಿ ಹೊರನಡೆದರು. ಬಳಿಕ ನಾಯಕ ಕೆ.ಎಲ್‌ ರಾಹುಲ್‌ ಜೊತೆ ಇನ್ನಿಂಗ್ಸ್‌ ಕಟ್ಟಿದ ಸ್ಟೋಯ್ನಿಸ್‌ ಮುಂಬೈ ಬೌಲರ್‌ಗಳನ್ನು ಕಾಡಿದರು. ಕನ್ನಡಿಗ ರಾಹುಲ್‌ 28(22) ರನ್‌ ಬಾರಿಸಿ ಔಟಾದರು. ಇತ್ತ ತಮ್ಮ ಅಮೋಘ ಬ್ಯಾಟಿಂಗ್‌ ಮೂಲಕ ಅರ್ಧಶತಕ ಗಳಿಸಿ ಲಖನೌ ಗೆಲುವಿಗೆ ಸಹಕರಿಸಿದ ಸ್ಟೋಯ್ನಿಸ್‌ 62(45) ಇನ್ನಿಂಗ್ಸ್‌ ನಲ್ಲಿ 7ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿದ್ದವು.

ಉಳಿದಂತೆ ದೀಪಕ್‌ ಹೂಡಾ 18(18), ಟರ್ನರ್‌ 5(8), ಬದೋನಿ 6(6) ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ಔಟಾಗದೇ ನಿಕೋಲಸ್‌ ಪೂರನ್‌ 14(14) ಹಾಗೂ ಕೃನಾಲ್‌ ಪಾಂಡ್ಯ 1(1) ಜತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

Tags: