ಮೈಸೂರು: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಯ ಮನಗೆದ್ದಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು,ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲೂ ಶೇ.೬೦ ಮತದಾನವಾಗಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿದೆ. ಇದಕ್ಕಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪಕ್ಷದ ಮುಖಂಡರಿಗೆ ಕೃತಜ್ಞತೆ: ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಗುರುತಿಸಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಖಿಲಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಸರ್ಕಸ್: ಬಿಜೆಪಿಯವರು ಚುನಾವಣೆಗಾಗಿ ಸಾಕಷ್ಟು ಸರ್ಕಸ್ ಮಾಡಿದರು, ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ನಿಲ್ಲಿಸಿದರು. ಮಹಾರಾಜರೇ ಚುನಾವಣೆಗೆ ನಿಂತಿದ್ದಾರೆಂದು ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕಿ ಮತಸೆಳೆಯಲು ಯತ್ನಿಸಿದರು, ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯರನ್ನು ನಿಂದಿಸಿದರು ಎಂದು ಆಪಾದಿಸಿದರು.
ಅಭಿವೃದ್ಧಿ ಆಧಾರದ ಮೇಲೆ ಮತ ಯಾಚನೆ: ಕಾಂಗ್ರೆಸ್ ಪಕ್ಷ ದ ಮುಖಂಡರು ಚುನಾವಣಾ ಪ್ರಚಾರದಲ್ಲಿ ಜಾತಿ, ಧರ್ಮವನ್ನು ಟೀಕಿಸಿ ಮತ ಯಾಚಿಸಿಲ್ಲ, ಅಭಿವೃದ್ಧಿ ಆಧಾರದ ಮೇಲೆ ಮತ ಯಾಚಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು,ಪಕ್ಷ ಕನಿಷ್ಠ ೨೨ ಸೀಟು ಗೆಲ್ಲಬೇಕಿದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಎಸ್‌ಡಿಪಿಐ, ಆಮ್ ಆದ್ಮಿ, ರೈತ ಸಂಘಟನೆ, ದಲಿತ ಸಂಘಟನೆ, ಪ್ರಗತಿಪರ ಚಿಂತಕರು ನೀಡಿರುವ ಸಹಕಾರ ಮರೆಯುವುದಿಲ್ಲ ಎಂದರು.
ಸಂಸದನಾಗಿ ಆಯ್ಕೆಯಾಗುವ ವಿಶ್ವಾಸವಿದ್ದು, ಮೈಸೂರು ಹಾಗೂ ಕೊಡಗಿನಲ್ಲಿ ಕಚೇರಿ ಮಾಡುತ್ತೇನೆ ೧೫-೧೫ ದಿನ ಇರುತ್ತೇನೆ.. ಶಾಸಕರೊಡಗೂಡಿ ಅಭಿವೃದ್ಧಿ ಮಾಡುತ್ತೆನೆ ೨೪ ಗಂಟೆಯೂ ಜನರ ಕೈಗೆ ಸಿಗುತ್ತೇನೆ ಎಂದು ಹೇಳಿದರು.
ಮೊದಲ ಹಂತದ ಚುನಾವಣಾ ಪ್ರಚಾರದ ಒತ್ತಡದಿಂದ ಹೊರ ಬರಲು ಕೆಲ ದಿನಗಳ ಕಾಲ ಹೊರಗೆ ಹೋಗಬೇಕೆಂದಿದ್ದೇನೆ. ನಂತರ ೨ನೇ ಹಂತದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.
ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯನ್ನು ಯಾವುದೇ ಗೊಂದಲಗಳಿಲ್ಲದೇ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಿದ ಚುನಾವಣಾ ಆಯೋಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.