Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕುವೆಂಪುನಗರದ ಕಚೇರಿಗೆ ಆಗಮಿಸಿ ಮುಖಂಡರು, ಕಾರ್ಯಕರ್ತರ ಜತೆ ಚರ್ಚೆ

ಮೈಸೂರು: ಮೊದಲ ಚುನಾವಣೆಯ ಅನುಭವ ತುಂಬಾ ಚೆನ್ನಾಗಿತ್ತು. ಪ್ರಚಾರದ ಸಂದರ್ಭದಲ್ಲಿ ಸಹಜವಾಗಿ ಒತ್ತಡ ಇದ್ದರೂ ಅದನ್ನು ಮಾನಸಿಕವಾಗಿ ತಗ್ಗಿಸಿಕೊಂಡು ಪ್ರಚಾರ ಮಾಡಿದ್ದೆ. ಪ್ರಚಾರದ ವೇಳೆ ಜನರು ತೋರಿದ ಅಭೂತಪೂರ್ವ ಬೆಂಬಲ ನೋಡಿದರೆ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕುವೆಂಪುನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ಪ್ರಮುಖರು, ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿದ ಮೇಲೆ ಸ್ವಲ್ಪ ರಿಲ್ಯಾಕ್ಸಾಗಿದ್ದೇನೆ. ಮೊದಲ ಚುನಾವಣೆಯಾಗಿದ್ದರಿಂದ ಹೊಸ ಅನುಭವವಾಗಿದೆ. ಜನರನ್ನು ಹತ್ತಿರದಿಂದ ನೋಡಿ ಗಮನಿಸಿದ್ದೇನೆ. ಅರಿತುಕೊಂಡಿದ್ದೇನೆ. ಅನೇಕ ವಿಚಾರಗಳಲ್ಲಿ ಕಲಿತಿದ್ದೇನೆ ಎಂದರು.

ಚುನಾವಣೆಯಲ್ಲಿ ಹಣ ಹಂಚಿಕೆಯ ವಿಚಾರಗಳು ಅಲ್ಲಲ್ಲಿ ಕೇಳಿ ಬಂದಿದ್ದವು. ಆದರೆ, ಮತದಾರರು ಅದನ್ನು ಮೀರಿ ನಮ್ಮ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಚುನಾವಣೆಯಲ್ಲಿ ನಿರೀಕ್ಷಿತ ಮತಗಳನ್ನು ಪಡೆದು ಜಯಗಳಿಸುವ ನಂಬಿಕೆ ಇದೆ ಎಂದು ನುಡಿದರು.

ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಹೋಗಲು ನಾನು ಸಿದ್ಧನಿದ್ದೇನೆ. ಆದರೆ, ಪಕ್ಷ ಇನ್ನೂ ಅದರ ಬಗ್ಗೆ ಏನೂ ತಿಳಿಸಿಲ್ಲ. ಪಕ್ಷ ಹೇಳಿದರೆ ಖಂಡಿತ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವೆ ಎಂದರು.

ನಗರ ಪ್ರದೇಶದ ವಾತಾವರಣಕ್ಕಿಂತಲೂ ಗ್ರಾಮಾಂತರ ಪ್ರದೇಶದಲ್ಲಿ ಹಲವಾರು ವಿಚಾರಗಳು ಗಮನಿಸಿದ್ದೇನೆ. ನಾವು ಹೊರ ಬಂದು ನೋಡಿದಾಗ ಅನೇಕ ವಿಚಾರಗಳು ಕಾಣುತ್ತವೆ. ನಾನು ರಾಜಕೀಯಕ್ಕೆ ಹೊಸಬನಾಗಿದ್ದರೂ ಸ್ವಲ್ಪಮಟ್ಟಿಗೆ ಅರಿಯುವ ಕೆಲಸ ಮಾಡಿದ್ದೆ. ಪಕ್ಷದ ನಾಯಕರ ಮಾರ್ಗದರ್ಶನದಿಂದ ಎಲ್ಲಾ ಕಡೆಗಳಲ್ಲಿ ಪ್ರಚಾರ ಮಾಡಲು ಸಾಧ್ಯವಾಯಿತು. ಜನರು ತೋರಿದ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ. ಅವರ ನಿರೀಕ್ಷೆಯಂತೆ ಕೆಲಸ ಮಾಡುವೆ ಎಂದು ನುಡಿದರು.

Tags: