ಅಯೋಧ್ಯೆ: 4ರಿಂದ 12 ವರ್ಷದೊಳಗಿನ ಮಕ್ಕಳನ್ನು ಬಿಹಾರದಿಂದ ಉತ್ತರಪ್ರದೇಶಕ್ಕೆ ಅನಧಿಕೃತವಾಗಿ ಸಾಗಿಸುತ್ತಿದ್ದಾಗ 95 ಮಕ್ಕಳನ್ನು ಅಯೋಧ್ಯೆಯ ಮಕ್ಕಳ ಆಯೋಗವು ರಕ್ಷಣೆ ಮಾಡಿದೆ.
ಉತ್ತರ ಪ್ರದೇಶದ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚುತುರ್ವೇದಿ ಅವರು ಅಯೋಧ್ಯೆಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸರ್ವೇಶ್ ಅವಸ್ತಿ ಅವರಿಗೆ ಕರೆ ಮಾಡಿ ಬಿಹಾರದಿಂದ ಅಪ್ರಾಪ್ತ ಮಕ್ಕಳನ್ನು ಅಕ್ರಮವಾಗಿ ಸಹರಾನ್‌ಪುರಕ್ಕೆ ಸಾಗಿಸಲಾಗುತ್ತಿದ್ದು, ಸದ್ಯ ಅವರನ್ನು ಗೋರಖ್‌ಪುರದಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಸರ್ವೇಶ್ ಅವಸ್ತಿ ಆಯೋಧ್ಯೆಯಲ್ಲಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಿಸಲ್ಪಟ್ಟ ಮಕ್ಕಳು 4-12 ವರ್ಷದೊಳಗಿನವರಾಗಿದ್ದಾರೆ. ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆಂದು ತಿಳಿದಿಲ್ಲ. ಪೋಷಕರನ್ನು ಸಂಪರ್ಕಿಸಿ ಮಕ್ಕಳನ್ನು ಒಪ್ಪಿಸಲಾಗುವುದು ಎಂದು ಮಕ್ಕಳ ಕಲ್ಯಾಣ ಆಯೋಗದ ಸದಸ್ಯರು ತಿಳಿಸಿದ್ದಾರೆ.
ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಇಂತಹ ಮಕ್ಕಳ ಕಳ್ಳ ಸಾಗಣಿಕೆಯು ಹೆಚ್ಚುತ್ತಿದ್ದು, ಅಲ್ಲಿ ಸರ್ಕಾರಗಳು ಇದರ ಬಗ್ಗೆ ಗಮನಹರಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ.





