ಮೈಸೂರು : ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯ, ಕೊಲೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಹಳ ಲಘುವಾಗಿ ತೆಗೆದುಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣವನ್ನು ರಾಜ್ಯ ಸರ್ಕಾರ ಬಹಳ ಲಘುವಾಗಿ ತೆಗೆದುಕೊಂಡಿತ್ತು. ಎನ್‌ಐಎ ತನಿಖೆ ನಡೆಸಿ, ಆರೋಪಿಗಳನ್ನು ಕೊಲ್ಕತ್ತಾದಲ್ಲಿ ಬಂಧಿಸಿದೆ. ಆರೋಪಿಗಳು ತಮಿಳುನಾಡಿನಲ್ಲಿ ಅವಿತುಕೊಂಡಿದ್ದರು. ಇದನ್ನೆಲ್ಲಾ ನೋಡಿದರೆ ಇಂಡಿಯಾ ಒಕ್ಕೂಟ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತಮಗೆ ಆಶ್ರಯ ಸಿಗಬಹುದೆಂದು ಭೋಂತ್ಪಾದಕರು ಭಾವಿಸಿದಂತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಒಂದು ಜನಾಂಗದವರನ್ನು ಓಲೈಸುವುದರಿಂದ ಕೊಲೆಗಳು ನಡೆಯುತ್ತಿವೆ. ಜನರಿಗೆ ರಕ್ಷಣೆ ಇಲ್ಲದಂತಾಗಿದೆ, ಜನರ ರಕ್ಷಣೆಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹೆಣ್ಣು ಮಕ್ಕಳ ಕೊಲೆ, ಅತ್ಯಾಚಾರಗಳು ಹೆಚ್ಚಾಗಿದೆ. ಒಂದು ಸಮುದಾಯದ ಓಲೈಕೆಗೆ ಸರ್ಕಾರ ಮುಂದಾಗಿದೆ. ನಮ್ಮ ಹೆಣ್ಣು ಮಕ್ಕಳನ್ನ ನಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ. ಇಂತಹ ಸರ್ಕಾರಕ್ಕೆ ಜನರು ಏ.೨೬ ರಂದು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ವಿವಿಧ ಹಿಂದುಳಿದ ವರ್ಗಗಳ ಸಮುದಾಯಕ್ಕೆ ನೀಡುತ್ತಿದ್ದ ಅನುದಾನ ಬಳಸಿಕೊಂಡಿದ್ದಾರೆ. ಆ ಮೂಲಕ ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಹಳೆ ಡಬ್ಬ, ಖಾಲಿ ಸೀಸ ಎಂಬಂತ ಪರಿಸ್ಥಿತಿ ರಾಜ್ಯಸರ್ಕಾರಕ್ಕೆ ನಿರ್ಮಾಣವಾಗಿದೆ ಎಂದರು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ರಾಜ್ಯದಲ್ಲಿಯೂ ಅತಿ ಹೆಚ್ಚು ಸ್ಥಾನವನ್ನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಗ್ರಾವಾಂತರ ವಕ್ತಾರ ದಾಂನಂದ ಪಾಟೀಲ್, ಮಾಧ್ಯಮ ಸಂಚಾಲಕರಾದ ಮಹೇಶ್ ರಾಜೇ ಅರಸ್, ಮಹದೇವಸ್ವಾಮಿ, ಬಿ.ಎಂ.ಸಂತೋಷ್ ಕುವಾರ್, ವಸಂತಕುವಾರ್ ಮತ್ತಿತರರು ಉಪಸ್ಥಿತರಿದ್ದರು.