Mysore
17
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪಿಎಸ್‌ಐ ಪರೀಕ್ಷೆ ಅಕ್ರಮ ಆರೋಪಿ ಮನೆಗೆ ಉಮೇಶ್ ಜಾಧವ ಭೇಟಿ: ಸ್ಪಷ್ಟನೆ ಕೋರಿದ ಪ್ರಿಯಾಂಕ್ ಖರ್ಗೆ

ಕಲಬುರಗಿ: ಸಾವಿರಾರು ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಪಿಎಸ್ಐ ಪರೀಕ್ಷೆ ಅಕ್ರಮ ಹಗರಣದ ಆರೋಪಿ ಮನೆಗೆ ಹೋಗಿ ಬೆಂಬಲ ಕೋರಿ ಬಂದಿರುವ ಬಗ್ಗೆ ಸಂಸದ ಉಮೇಶ್ ಜಾಧವ್ ಸ್ಪಷ್ಟನೆ ನೀಡಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಮಾರು‌ 58,000 ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆ ಬರೆದಿದ್ದರು. ಅಕ್ರಮ ಹಗರಣದ‌ ಬಯಲಿಗೆ ಬಂದ ನಂತರ ಒಟ್ಟು 114 ಜನರನ್ನು ಬಂಧಿಸಲಾಗಿದೆ. 54 ಅಭ್ಯರ್ಥಿಗಳು ಅದಾಗಲೇ ಆಯ್ಕೆಯಾಗಿದ್ದರು ಅವರನ್ನು ಖಾಯಂ ಸಸ್ಪೆಂಡ್ ಮಾಡಲಾಗಿದೆ. ಅವರಲ್ಲಿ 24 ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದರು. ಹಗಲು ರಾತ್ರಿ ಕಷ್ಟಪಟ್ಟು ಭವಿಷ್ಯದ ಕನಸು ಕಟ್ಟಿಕೊಂಡು ಪರೀಕ್ಷೆ ಬರೆದ ನೈಜ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ ಆರೋಪಿ ಆರ್ ಡಿ ಪಾಟೀಲ ಮನೆಗೆ ಹೋಗಿ ಚುನಾವಣೆಯಲ್ಲಿ ಬೆಂಬಲ ಕೋರಿದ್ದರ ಬಗ್ಗೆ ಹಾಗೂ ರಾಮನವಮಿ ಉತ್ಸವದಲ್ಲಿ ಮತ್ತೊಬ್ಬ ಆರೋಪಿಯ ಜೊತೆ ಜಾಧವ ಭಾಗಿಯಾಗಿರುವ ಕುರಿತು ಸ್ಪಷ್ಟನೆ‌ ನೀಡಲಿ. ಅಥವಾ ವಿರೋಧ ಪಕ್ಷದ‌ ನಾಯಕ ಆರ್ ಅಶೋಕ ಈ‌ ಬಗ್ಗೆ ರಾಜ್ಯದ ಜನರಿಗೆ ವಿವರಣೆ ನೀಡಲಿ ಎಂದು ಒತ್ತಾಯಿಸಿದರು.

“ಚಿಂಚೋಳಿ ಸಂಸದರು ಹೇಗಾದರೂ ಮಾಡಿ ಮತ ಪಡೆಯಲೇ ಬೇಕು ಎಂದುಕೊಂಡು ಬೆಂಬಲ ಕೇಳಲು ಹೋಗಿದ್ದರೋ ಅಥವಾ ಮೊದಲಿನಿಂದಲೂ ಅವರೊಂದಿಗೆ ಜುಗಲ್ ಬಂಧಿ ಇತ್ತೋ ಗೊತ್ತಿಲ್ಲ. ಅಕ್ರಮದ ಆರೋಪಿ ಆರ್‌ಡಿ ಪಾಟೀಲ ಈಗ ಜೈಲಿನಲ್ಲಿದ್ದಾನೆ ಇವರು ಅಲ್ಲಿಗೆ ಹೋಗಿರುವುದು ನೋಡಿದರೆ ಬಿಜೆಪಿ ಭ್ರಷ್ಟರೊಂದಿಗೆ ಕೈ ಜೋಡಿಸಿದೆ ಎನ್ನುವ ಅನುಮಾನ ಮೂಡುತ್ತದೆ” ಎಂದು ಆರೋಪಿಸಿದರು.

ಪರೀಕ್ಷೆಗಳಲ್ಲಿ ಅಕ್ರಮವಾದರೆ ಲಕ್ಷಾಂತರ ಜನರಿಗೆ ಪರಿಣಾಮ ಬೀರುತ್ತದೆ. ನೈಜ ಅಭ್ಯರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಅಕ್ರಮ ಬಯಲಿಗೆ ಬಂದಾಗ ಕಾನೂನು ಪ್ರಕ್ರಿಯೆಗಳು ಮುಗಿಯುವದರೊಳಗೆ ಬಹಳ ಜನ ಅಭ್ಯರ್ಥಿಗಳು ಮುಂದಿನ ಪರೀಕ್ಷೆ ಬರೆಯಲು ಆಸಕ್ತಿ ಕಳೆದುಕೊಂಡಿರುತ್ತಾರೆ. ಅಲ್ಲದೇ, ಕೆಲವರ ವಯಸ್ಸು ಮುಗಿರುತ್ತದೆ. ಆದರೆ, ಇದೆಲ್ಲ ಬಿಜೆಪಿ ನಾಯಕರಿಗೆ ಈ ತರಹದ ಆಲೋಚನೆಗಳು ಬರುವುದಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅವಧಿಯಲ್ಲಿ ಪರೀಕ್ಷೆಗಳಲ್ಲಿ ಅಕ್ರಮ ಸರ್ವೇ ಸಾಮಾನ್ಯವಾಗಿದ್ದವು. ‌ಎಇ, ಜೆಇ, ಕೆಪಿಟಿಸಿಎಲ್ ಸೇರಿದಂತೆ ಪಿಎಸ್ವೈಗಳ ಪರೀಕ್ಷೆ ಗಳಲ್ಲಿ ಅಕ್ರಮ ನಡೆದಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ತಡೆಗೆ ಬಿಲ್ ತಂದಿದ್ದೇವೆ. ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅತ್ಯಂತ ಅಸಮರ್ಥ ಸಚಿವರಾಗಿದ್ದರು. ಆಗ ಅವರೇ ಆರೋಪಿಯೊಬ್ಬರ ಮನೆಗೆ ಹೋಗಿ ಗೋಡಂಬಿ ದ್ರಾಕ್ಷಿ ತಿಂದು ಬಂದಿದ್ದರು. ಈಗ ಜಾಧವ ಊಟ ಮಾಡಿ ಬಂದಿದ್ದಾರೆ ಅಷ್ಟೇ, ಎಂದು ಟೀಕಿಸಿದರು.

ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಾಯಿದೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮತ್ತೊಂದು ಕಡೆ ಮೋದಿ ಭ್ರಷ್ಟಾಚಾರಿಗಳ ವಿರುದ್ದ ಕಠಿಣ ಕ್ರಮದ ಮಾತುಗಳನ್ನಾಡುತ್ತಿದ್ದಾರೆ. ಇಲ್ಲಿ ನೋಡಿದರೆ ಅಭ್ಯರ್ಥಿ ಭ್ರಷ್ಟಚಾರಿಗಳ ಮನೆಗೆ ಹೋಗಿ ಬರುತ್ತಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಲಬುರಗಿಗೆ ಬರುತ್ತಿದ್ದಾರೆ ಅವರಿಗೆ ಸ್ವಾಗತ ಈ ವಿಷಯದ ಕುರಿತಂತೆ ಜನರಿಗೆ ಉತ್ತರ ನೀಡಲಿ ಎಂದು ಖರ್ಗೆ ಆಗ್ರಹಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಪ್ರವೀಣ ಹರವಾಳ, ಡಾ ಕಿರಣ ದೇಶಮುಖ, ಫಾರೂಖ್ ಸೇಟ್, ಪರಶುರಾಮ ನಾಟೀಕಾರ್ ಇದ್ದರು.

Tags: