ಅಯೋಧ್ಯೆ: ಜನವರಿ ತಿಂಗಳಿನಲ್ಲಿ ಪ್ರಾಣಪ್ರತಿಷ್ಠೆ ನಡೆದ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಯ ರಾಮಮಂದಿರದಲ್ಲಿ ರಾಮನವಮಿಯನ್ನು ಆಚರಿಸಲಾಗುತ್ತಿದೆ. ಮೊದಲ ರಾಮನವಮಿಯ ಸಂಭ್ರಮದಲ್ಲಿ ಬಾಲರಾಮನ ಮೂರ್ತಿಗೆ ಸೂರ್ಯರಶ್ಮಿಯ ಸ್ಪರ್ಶವೂ ಸಹ ಆಗಿದೆ.
ಹೌದು, ಕನ್ನಡಿ ಹಾಗೂ ಮಸೂರಗಳನ್ನು ಬಳಸಿ ಬಾಲರಾಮನ ಹಣೆಗೆ ಸೂರ್ಯನ ಕಿರಣ ಸ್ಪರ್ಶಿಸುವ ಹಾಗೆ ಮಾಡಿದ್ದಾರೆ ವಿಜ್ಞಾನಿಗಳು. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ( CSIR ), ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ( CBRI ) ವಿಜ್ಞಾನಿಗಳ ಪ್ರಕಾರ ಬಾಲರಾಮನ ಹಣೆಯ ಮೇಲೆ ಬಿದ್ದಿರುವ ಈ ಯೋಜಿತ ಸೂರ್ಯರಶ್ಮಿಯು 58 ಮಿ.ಮೀ ಗಾತ್ರವನ್ನು ಹೊಂದಿದ್ದು, ಮೂರರಿಂದ ಮೂರೂವರೆ ನಿಮಿಷಗಳು ಇರಲಿದೆ ಎಂದು ಹೇಳಲಾಗಿದೆ.
ಇನ್ನು ಈ ಯೋಜಿತ ಸೂರ್ಯರಶ್ಮಿಯನ್ನು ಪ್ರತಿ ರಾಮನವಮಿಯಂದು ಬಾಲರಾಮನ ಮೇಲೆ ಬೀಳುವ ಹಾಗೆ ಮಾಡುವ ಯೋಜನೆಯನ್ನು ಹಾಕಲಾಗಿದೆ ಎಂದೂ ಸಹ ಹೇಳಲಾಗುತ್ತಿದೆ.





