ಮಂಗಳೂರು: ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಭಾನುವಾರ(ಏ.14) ಮೈಸೂರಿನಿಂದ ತಮ್ಮ ಯಾತ್ರೆ ಆರಂಭಿಸಿ, ಇದೀಗ ಮಂಗಳೂರಿನಲ್ಲಿ ರೋಡ್‌ಶೋ ಮೂಲಕ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ.
ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮ ಶ್ರೀನಾರಾಯಣಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಧಾನಿ ಮೋದಿ ರೋಡ್ ಶೋ ಆರಂಭಿಸಿದರು. ನಾರಾಯಣಗುರು ವೃತ್ತದಿಂದ ನವಭಾರತ ವೃತ್ತದವರೆಗೆ ಅಂದರೆ ಸುಮಾರು 2 ಕಿ.ಮೀ. ರೋಡ್ ಶೋ ನಡೆಸಿದರು.
ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ನಗು ಬೀರುತ್ತಾ ರೋಡ್ ಶೋಗೆ ಮೋದಿ ಆಗಮಿಸುತ್ತಿದ್ದಂತೆ ರಸ್ತೆಯ ಬದಿಯಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮ ಮೋದಿ ಮೋದಿ ಎಂದು ಜೈಕಾರ ಮೊಳಗಿಸಿದರು. ಮೋದಿ ಜನರತ್ತ ಕೈಬೀಸುತ್ತಾ ಮುಂದೆ ಸಾಗಿ ಕಾರ್ಯಕರ್ತರಲ್ಲಿ ಉತ್ಸಹ ತುಂಬಿದರು.
ಮೋದಿ ಅವರನ್ನು ನೋಡಲೆಂದೇ ರಸ್ತೆ ಪಕ್ಕದಲ್ಲಿ ಕಾದು ಕುಳಿತಿದ್ದ ಅಭಿಮಾನಿಗಳು ನೆಚ್ಚಿನ ನಾಯಕನ ಕಂಡು ಪುಳಕಿತರಾದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ 15 ಮಂದಿ ತೆರೆದ ವಾಹನದಲ್ಲಿದ್ದರು.





