- ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ: ಸಿ.ಎಂ. ಎಚ್ಚರಿಕೆ
- ಮೋದಿ ಹತ್ತು ವರ್ಷ ಪ್ರಧಾನಿಯಾಗಿ ಕೊಟ್ಟ ಮಾತಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ? ಎದೆ ಮುಟ್ಟಿಕೊಂಡು ಹೇಳಿ: ಸಿ.ಎಂ. ಸವಾಲು
ಮಡಿಕೇರಿ : ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಸಂವಿಧಾನ ವಿರೋಧಿ. ಸಂವಿಧಾನ ಬದಲಾಯಿಸುವುದು ಬಿಜೆಪಿ ಪರಿವಾರದ ಹುನ್ನಾರ. ಕೇಂದ್ರ ಸಚಿವರಾಗಿದ್ದವರೇ ಈ ಮಾತನ್ನು ಬಹಿರಂಗವಾಗಿ ಹೇಳಿದ್ದಾರೆ ಎಂದು ಸಿ.ಎಂ.ಸಿದ್ದರಾಮಯ್ಯ ಎಚ್ಚರಿಸಿದರು.
ಆರ್‌ಎಸ್‌ಎಸ್ ಪರಿವಾರ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲ?
ಆರ್‌ಎಸ್‌ಎಸ್ ಪರಿವಾರ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಇವರು ದೇಶಭಕ್ತರಾಗಲು ಸಾಧ್ಯವೇ ಇಲ್ಲ ಎಂದರು.
ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಭೆಯಲ್ಲಿ ಸಂವಿಧಾನ ವಿರೋಧಿಗಳ ಬಗ್ಗೆ ಎಚ್ಚರಿಸಿದ ಮಾತುಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಸಮಾಜದಲ್ಲಿನ ಎಲ್ಲಾ ಜಾತಿ, ವರ್ಗ ಮತ್ತು ಧರ್ಮದ ಬಡವರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬುವುದಕ್ಕಾಗಿ ನಾವು ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ ಎಂದರು.
ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿ ಕೊಟ್ಟ ಮಾತಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ? ಎದೆ ಮುಟ್ಟಿಕೊಂಡು ಹೇಳಿ ಎಂದು ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ಕರೆ ಕೊಟ್ಟರು.
ಭಾರತೀಯರನ್ನು ನಂಬಿಸಿ, ಭ್ರಮೆ ಹುಟ್ಟಿಸಿ , ಭಾವನೆಗಳನ್ನು ಕೆರಳಿಸಿ ಭಯಾನಕವಾಗಿ ವಂಚಿಸುವವರಿಗೆ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದಾ? ನುಡಿದಂತೆ ನಡೆದು ರಾಜ್ಯದ ಜನರ ಬದುಕಿಗೆ ಸ್ಪಂದಿಸಿದ ನಮಗೆ ಮತ ಹಾಕಿದರೆ ಆ ಮತಕ್ಕೆ ಗೌರವ ಬರುತ್ತದಾ? ಕೊಡಗು ಜಿಲ್ಲೆಯ ಮತದಾರರು ಪ್ರಜ್ಞಾವಂತರಾಗಿದ್ದಾರೆ. ತೋಚಿಸಿ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.
ಕೊಡಗಿನ ಶಾಸಕರಾದ ಪೊನ್ನಣ್ಣ ಮತ್ತು ಮಂಥರ್ ಗೌಡ ಅವರು ಕ್ಷೇತ್ರದ ಅಭಿವೃದ್ಧಿಗೆ ಏನೇನು ಕೇಳ್ತಾರೋ ಅದೆಲ್ಲವನ್ನೂ ಕೊಡಲು ಸರ್ಕಾರ ಬದ್ದವಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಮೆಹರೂಜ್ ಖಾನ್ ಸೇರಿ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು