ಹೈದರಾಬಾದ್: ಲೋಕಸಭಾ ಚುನಾವಾಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತು ಯಾರ ಬಳಿ ಇದೆ ಎಂದು ತಿಳಿಯಲು ಹಣಕಾಸು ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸಲಾಗುವುದು ಮತ್ತು ನಂತರ ಮರುಹಂಚಿಕೆ ಮಾಡಲು ಯೋಜನೆ ರೂಪಿಸಲಿದೆ ಎಂದು ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ತುಕ್ಕುಗುಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗುವುದು ಎಂದರು.
ಹಿಂದುಳಿದ ವರ್ಗಗಳು, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಮತ್ತು ಇತರ ಜಾತಿಗಳ ನಿಖರವಾದ ಜನಸಂಖ್ಯೆ ಮತ್ತು ಸ್ಥಿತಿಯನ್ನು ತಿಳಿಯಲು ಜಾತಿ ಗಣತಿಯನ್ನು ನಡೆಸುತ್ತೇವೆ. ನಂತರ, ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತೇವೆ, ಬಳಿಕ ನಾವು ಭಾರತದ ಸಂಪತ್ತನ್ನು ಹಂಚುವ ಐತಿಹಾಸಿಕ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಪ್ರತಿಪಾದಿಸಿದರು.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 90ರಷ್ಟು ಮಂದಿ ಹಿಂದುಳಿದವರು, ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳಿದ್ದಾರೆ. ಆದರೆ ಸರ್ಕಾರಿ ಉದ್ಯೋಗಗಳು, ದೊಡ್ಡ ಕಂಪನಿಗಳು ಮತ್ತು ಇತರ ಕ್ಷೇತ್ರಗಳಲ್ಲಿ ಇವರ ಪಾಲು ನಗಣ್ಯ, ಶೇ 90 ರಷ್ಟು ಮಂದಿಗೆ ದೇಶದ ಆಡಳಿತದ ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲ. ದೇಶವನ್ನು ಆಳುವ 90 ಐಎಎಸ್ ಅಧಿಕಾರಿಗಳ ಪೈಕಿ ಕೇವಲ ಮೂವು ಹಿಂದುಳಿದವರು, ಒಬ್ಬ ಆದಿವಾಸಿ ಮತ್ತು ಮೂವರು ದಲಿತರು ಎಂದು ಅಂಕಿ ಅಂಶ ನೀಡಿದರು.
ಒಟ್ಟು 100ರೂ. ಖರ್ಚು ಮಾಡುವುದಾದಲ್ಲಿ, ಆ ಪೈಕಿ ಹಿಂದುಳಿದ ವರ್ಗಗಳ ಅಧಿಕಾರಿಗಳು ಒಳಗೊಳ್ಳುವುದು ಕೇವಲ 6 ರೂಪಾಯಿ ಖರ್ಚು ಮಾಡುವ ನಿರ್ಧಾರದಲ್ಲಿ ಮಾತ್ರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.





