ಕೆ.ಆರ್ ನಗರ: ತನ್ನ ಬೈಕ್ ತಪಾಸಣೆ ಮಾಡಿದ ಕಾರಣಕ್ಕೆ ಪಟ್ಟಣದ ಅಬಕಾರಿ ಇಲಾಖೆ ಸಿಬ್ಬಂದಿಯ ಮೇಲೆ ಕೊಪಗೊಂಡು ಹಲ್ಲೆ ನಡೆಸಿರುವ ಘಟನೆ ತಿಪ್ಪೂರು ಬಳಿ ನಡೆದಿದೆ. ಅಧಿಕಾರಿ ಮೇಲೆ ದಾಳಿ ಮಾಡಿದ ಆರೋಪದಡಿ ನಾಲ್ವರನ್ನು ಬಂಧಿಸಲಾಗಿದೆ.
ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಇಲಾಖೆಯ ಸಿಬ್ಬಂದಿಗಳಾದ ಸಂತೋಷ್, ಸಂದೀಪ್, ಮಲ್ಲೇಶ್ ಮತ್ತು ಮಾಳಪ್ಪ ಅವರು ತಾಲೂಕಿನ ತಿಪ್ಪೂರು ಗ್ರಾಮದ ಬಳಿ ಅದೇ ಗ್ರಾಮದ ಸಂತೋಷ್ ಎಂಬುವವರ ಬೈಕ್ ತಪಾಸಣೆ ಮಾಡಲು ಮುಂದಾಗಿದ್ದಾರೆ. ಇದನ್ನು ಸಹಿಸದ ಸಂತೋಷ್ ಅಧಿಕಾರಿಗಳ ಜೊತೆ ಮಾತಿಗೆರಗಿದ್ದಾನೆ. ಆದರೂ ತಪಾಸಣೆ ನಡೆಸಿದ ಅಧಿಕಾರಿಗಳು ಮದ್ಯ ಸಿಗದ ಹಿನ್ನಲೆ ವಾಪಾಸಾಗಿದ್ದಾರೆ.
ಈ ಘಟನೆಯಿಂದ ಕುಪಿತಗೊಂಡ ಸಂತೋಷ್ ತನ್ನ ಸ್ನೇಹಿತರಾದ ರಘು, ಯಶ್ವಂತ್ ಮತ್ತು ಪ್ರಶಾಂತ್ ಎಂಬುವವ ಜೊತೆಗೂಡಿ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಹಿಂಬಾಲಿಸಿ ಕಗ್ಗೆರೆ ಬಸ್ ನಿಲ್ದಾಣದ ಬಳಿ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿಯಿಂದ ಅಬಕಾರಿ ಮುಖ್ಯ ಪೇದೆ ಸಂತೋಷ್‌ಗೆ ತೀವ್ರ ಗಾಯಗಳಾಗಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಖ್ಯ ಪೇದೆ ಸಂತೋಷ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.