Mysore
23
broken clouds
Light
Dark

ನಾಳೆ(ಏ.೫) ಬಿಜೆಪಿಗೆ ಸಂಸದೆ ಸುಮಲತಾ ಸೇರ್ಪಡೆ: ಇವರಿಗಾಗಿ ಬಿಜೆಪಿಗೆ ಸೇರುತ್ತಿದ್ದೇನೆ ಎಂದ ಸಂಸದೆ!

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್‌ ಅವರು ನಾಳೆ (ಏ.೫) ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಸುಮಲತಾ ಅಂಬರೀಶ್‌ ಅವರು ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಆದರೆ, ಮೈತ್ರಿ ಮೊರೆಹೋದ ಎನ್‌ಡಿಎ, ಬಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ಘೊಷಣೆ ಮಾಡಿತು. ಇದರ ಬೆನ್ನಲ್ಲೇ ರಾಜ್ಯ ಹಾಗೂ ಹೈಕಮಾಂಡ್‌ನ ಬಿಜೆಪಿ ನಾಯಕರು ಸುಮಲತಾ ಪರವಾಗಿದ್ದು, ತಮ್ಮ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಸೂಚನೆ ನೀಡಿದ್ದರು.

ಈ ಎಲ್ಲಾ ಷರತ್ತುಗಳನ್ನು ಒಪ್ಪಿರುವ ಸಂಸದೆ ಸುಮಲತಾ ಅವರು ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದರು. ಅವರು ಬಿಜೆಪಿಗೆ ಸೇರುವುದು ಬಹುತೇಕ ಖಚಿತ ಎಂಬ ಮಾಹಿತಿ ಹೊರ ಬರುತ್ತಿದ್ದಂತೆ ನಾಳೆ (ಏ.೫) ಅಧಿಕೃತವಾಗಿ ಬಿಜೆಪಿ ಸೇರುವ ಬಗ್ಗೆ ಸುಮಲತಾ ಪ್ರಕಟಿಸಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮೋದಿ ಅವರನ್ನು ಪ್ರಧಾನಿಯನ್ನಾಗಿ ನೋಡುವ ಆಶಯದೊಂದಿಗೆ ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಸುಮಲತಾ ಟ್ವೀಟ್‌ನಲ್ಲೇನಿದೆ?

ಮಂಡ್ಯದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ. ಅದರಂತೆಯೇ, ಬಿಜೆಪಿ ನಾಯಕರ ಸಮ್ಮುಖದಲ್ಲಿ 5 ಏಪ್ರಿಲ್ 2024ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವೆ.

ನಮ್ಮ ಕರುನಾಡಿನ ಸಕ್ಕರೆಯ ನಾಡು ಮಂಡ್ಯದ ನನ್ನ ಸ್ವಾಭಿಮಾನಿ ಬಂಧುಗಳ, ಡಾ.ಅಂಬರೀಶ್ ಅವರ ಅಭಿಮಾನಿಗಳ ಹಾಗೂ ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದ ಎಂದಿನಂತೆ ಇರಲಿ ಎಂದು ನನ್ನ ಸವಿನಯ ಕೋರಿಕೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.