ನವದೆಹಲಿ: ಒಂದು ವಾಹನ ಒಂದು ಫಾಸ್ಟ್ಯಾಗ್ ನಿಯಮ ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. ಹಲವು ವಾಹನಗಳಿಗೆ ಒಂದೇ ಫಾಸ್ಟ್ ಬಳಕೆ ಅಥವಾ ನಿರ್ದಿಷ್ಟ ವಾಹನಕ್ಕೆ ಹಲವು ಫಾಸ್ಟ್ಯಾಗ್ ಗಳನ್ನು ಲಿಂಕ್ ಮಾಡುವುದನ್ನು ಈ ನಿಯಮ ನಿರ್ಬಂಧಿಸುತ್ತದೆ.
ಮಾರ್ಚ್ 1 ರಿಂದಲೇ ಒಂದು ವಾಹನ ಒಂದು ಫಾಸ್ಟ್ಯಾಗ್ ನಿಯಮ ಜಾರಿಗೆ ಬರಬೇಕಿತ್ತು. ನಿರ್ಬಂಧಿತ ಪೇಟಿಎಂ ಪೇಮೆಂಟ್ ಬ್ಯಾಂಕ್ ನ ಫಾಸ್ಟ್ಯಾಗ್ ಬಳಕೆದಾರರು ತೊಂದರೆಗೀಡಾದ ಕಾರಣ ಒಂದು ತಿಂಗಳವರೆಗೆ ಗಡುವು ವಿಸ್ತರಿಸಲಾಗಿತ್ತು. ಹೀಗಾಗಿ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ.
ಇನ್ನು ಬಹು ಫಾಸ್ಟ್ಯಾಗ್ ಗಳು ಕಾರ್ಯ ನಿರ್ವಹಿಸುವುದಿಲ್ಲ. ಒಂದು ವಾಹನಕ್ಕೆ ಬಹು ಫಾಸ್ಟ್ಯಾಗ್ ಗಳನ್ನು ಹೊಂದಿರುವರವರಿಗೆ ಏಪ್ರಿಲ್ 1ರಿಂದ ಆ ಫಾಸ್ಟ್ಯಾಗ್ ಬಳಸಲು ಸಾಧ್ಯವಾಗುವುದಿಲ್ಲ. ಕೆಲವರು ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಲಿಂಕ್ ಮಾಡುತ್ತಿದ್ದರು ಅಥವಾ ಅನೇಕ ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಬಳಕೆ ಮಾಡುತ್ತಿದ್ದರು.
ಇದನ್ನು ತಡೆಗಟ್ಟಿ ಟೋಲ್ ಗಳಲ್ಲಿ ತಡೆರಹಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಒಂದು ವಾಹನ ಒಂದು ಫಾಸ್ಟ್ಯಾಗ್ ನಿಯಮ ಜಾರಿಗೆ ತಂದಿತ್ತು.
ಕೆವೈಸಿ ಅಪೂರ್ಣವಾಗಿರುವ ಗ್ರಾಹಕರು ತಾವು ಫಾಸ್ಟ್ಯಾಗ್ ಪಡೆದ ಬ್ಯಾಂಕ್ ಗಳಿಗೆ ಹೋಗಿ ಕೆವೈಸಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.
ಹೊಸ ವ್ಯವಸ್ಥೆಯಿಂದ ಟೋಲ್ ಸಂಗ್ರಹ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ಟೋಲ್ ಗಳಲ್ಲಿ ಅಡೆತಡೆ ಇಲ್ಲದೆ ಪ್ರಯಾಣಿಸಬಹುದಾಗಿದ್ದು, ಸೋರಿಕೆ ತಡೆಯಾಗಿ ಆದಾಯ ಎಚ್ಚರವಾಗುವ ನಿರೀಕ್ಷೆ ಇದೆ.