ಮೈಸೂರು: ಸಿದ್ದರಾಮಯ್ಯ ಗರ್ವ ಭಂಗವಾಗಬೇಕು ಎಂಬ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನನಗೆ ಗರ್ವ ಇದ್ದರೆ ತಾನೇ ಭಂಗ ಆಗುವುದು ಎಂದು ಕಿಡಿಕಾರಿದ್ದಾರೆ.
ಮೈಸೂರು, ಚಾಮರಾಜನಗರದ ಪ್ರವಾಸದಲ್ಲಿರುವ ಸಿಎಂ ಇಂದು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದೇವೇಗೌಡರು ಹೇಳಿದನ್ನೇ ನಾನು ಹೇಳಿದ್ದೇನೆ ಎಂದಿದ್ದಾರೆ.
ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದವರು ಯಾರು? ಮುಂದಿನ ಜನ್ಮ ಇದ್ದರೆ ಮುಸ್ಲಿಂ ಆಗುತ್ತೇನೆ ಎಂದಿದ್ದವರು ಯಾರು? ಎಂದು ಕೇಳಿದರು. ನೀಜ ಹೇಳಿದರೆ ತಪ್ಪಾ? ಮೋದಿ ಎಂದಿಗೆ ಚೆನ್ನಾಗಿರುವ ದೇವೇಗೌಡರು ಮೇಕೆದಾಟು ಯೋಜನೆಗೆ ಈಗಲೇ ಅನುದಾನ ಕೊಡಿಸಲಿ. ಇದನ್ನು ಕೇಳುವುದು ಗರ್ವನಾ? ಸತ್ಯ ಹೇಳಿದರೆ ಅವರ ದೃಷ್ಟಿಯಲ್ಲಿ ಗರ್ವ. ಸುಳ್ಳು ಹೇಳಿದವರು ಅವರು, ನಾನು ಸತ್ಯ ಹೇಳುತ್ತಿದ್ದೇನೆ, ಅದನ್ನು ಗರ್ವ ಎನ್ನುತ್ತಾರೆ, ಏನು ಮಾಡುವುದು ಎಂದು ಕೇಳಿದರು.
ದೇವೇಗೌಡ ನಾನು ಬಹಳ ವರ್ಷ ಜತೆಯಲ್ಲಿದ್ದರಿಂದಾಗಿ ಎಲ್ಲ ಕಡೆ ನನ್ನ ಬಗ್ಗೇಯೇ ಮಾತನಾಡುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಹಾಗೂ ನಮ್ಮ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ, ಸಾಧನೆ ಮತ್ತು ಗ್ಯಾರಂಟಿ ಕ್ರಾರ್ಯಕ್ರಮಗಳು ನಮ್ಮ ಕೈ ಹಿಡಿಯುತ್ತವೆ. ಮೈಸೂ-ಕೊಡಗು ಮತ್ತು ಚಾಮರಾಜನಗರ ಕ್ಷೇತ್ರಗಳೆರಡರಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಮೈಸೂರು ಮಾತ್ರಾ ನನಗೆ ಮುಖ್ಯವಲ್ಲ. ಎಲ್ಲ ಕ್ಷೇತ್ರಗಳೂ ಬಹಳ ಮುಖ್ಯ ಎಂದು ಹೇಳಿದರು.





