ಬೆಂಗಳೂರು : ಮಳೆ ಅಭಾವದಿಂದಾಗಿ ರಾಜ್ಯದೆಲ್ಲೆಡೆ ಬರದ ಛಾಯೆ ಮೂಡಿದೆ. ಹೀಗೆ ಮುಂದುವರೆದರೆ ಕುಡಿಯುವ ನೀರಿಗೂ ಹಪಹಪಿಸುವಂತ ಸ್ಥಿತಿ ಎದುರಾಗುವ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದಾರೆ.
ಹೀಗಿರುವಾಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಈ ಮಧ್ಯೆ ಆಜಧಾನಿಯಲ್ಲಿ ಕೆಲಸ ಮಾಡುತ್ತಿರುವ ಐಟಿ ಕಂಪನಿಯ ಉದ್ಯೋಗಿಗಳು ತಮಗೆ ವರ್ಕ್ ಫ್ರಂ ಹೋಮ್ ನೀಡಿ ಎಂದು ಕಂಪನಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ನಗರದಲ್ಲಿ ತೀವ್ರ ನೀರಿನ ಸಮಸ್ಯೆಯಿಂದ ಬೆಂಗಳೂರಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದು, ಈ ನಡುವೆ 15 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಕಂಪನಿಗಳನ್ನು ಒತ್ತಾಯಿಸಿರುವುದಾಗಿ ವರದಿಯಾಗಿದೆ.
ಅಂಕಿ ಅಂಶಗಳ ಪ್ರಕಾರ, ನಗರಕ್ಕೆ ಪ್ರತಿ ದಿನ 2,600 ಎಂಎಲ್ಡಿ ನೀರಿನ ಅವಶ್ಯಕತೆ ಇದೆ. ಸದ್ಯ ಬೆಂಗಳೂರು ನಗರವು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ.
ನೀರಿನ ಬಿಕ್ಕಟ್ಟು ಹಲವಾರು ವಾರಗಳಿಂದ ಮುಂದುವರಿದಿರುವುದರಿಂದ ಕರ್ನಾಟಕ ಸರ್ಕಾರವು ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸುಮಾರು 15 ಲಕ್ಷ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಒದಗಿಸುವುದರಿಂದ ಅಲ್ಪಾವಧಿಯ ಪರಿಹಾರ ದೊರೆಯಲಿದೆ ಎಂದು ಕರ್ನಾಟಕ ಮತ್ತು ಅಸ್ಸಾಂನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದರಿಂದ ಸುಮಾರು 10 ಲಕ್ಷ ಜನ ಅವರ ಊರುಗಳಿಗೆ ಮರಳಬಹುದು. ಇದರಿಂದಾಗಿ ಬೆಂಗಳೂರಿನ ಸಂಪನ್ಮೂಲಗಳ ಮೇಲೆ ಸ್ವಲ್ಪ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.