ಮೈಸೂರು: ಕಳೆ ಹತ್ತು ವರ್ಷಗಳಿಂದ ಬಿಜೆಪಿ ದೇಶಕ್ಕೆ ಮಾಡಿರುವ ಮೋಸ, ದುರಾಡಳಿತ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಕುರಿತು ಜನರನ್ನು ಸಂಪರ್ಕಿಸಿ. ಆದರೇ ಯಾವುದೇ ಕಾರಣಕ್ಕೂ ಪಕ್ಷ ಮುಖಂಡರು, ಸ್ಥಳೀಯರು ಅಭ್ಯರ್ಥಿಗಳು, ಸಚಿವರು ಯಾರೂ ಕೂಡಾ ಯದುವೀರ್ ಒಡೆಯರ್ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡುವುದಾಗಲಿ, ಹೇಳಿಕೆ ನೀಡುವುದನ್ನು ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ನಡೆದ ಮೈಸೂರು-ಕೊಡಗು, ಚಾಮರಾಜನಗರ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗಿನ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.
ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯನ್ನು ಮನೆ-ಮನೆಗೂ ತಿಳಿಸಿ, ನಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ರಾಜ ವಂಶಸ್ಥರ ಜತೆ ಜನರು ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಆದ್ದರಿಂದ ಯದುವೀರ್ ಒಡೆಯರ್ ಅವರನ್ನು ಮಹಾರಾಜ, ರಾಜವಂಶಸ್ಥ ಎಂದು ಪದೇಪದೆ ಉಲ್ಲೇಖಿಸದೆ ಬಿಜೆಪಿ ಅಭ್ಯರ್ಥಿ ಎಂದು ಹೇಳಿ. ಅವರ ವಿರುದ್ಧ ಸಿಕ್ಕಸಿಕ್ಕಂತೆ ಹೇಳಿಕೆಗಳನ್ನು ಕೊಡಬೇಡಿ, ಭಾಷಣ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದು ತಿಳಿಸಿದ್ದಾರೆ.
ನಿಮ್ಮ ಹೇಳಿಕೆಗಳು ಬಿಜೆಪಿಯವರಿಗೆ ಆಹಾರವಾಗಬಾರದು. ಭಾವನಾತ್ಮಕ ವಿಚಾರಗಳನ್ನು ತಿರುಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಹಾಗಾಗಿ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಿ ಎಂದು ಮನದಟ್ಟು ಮಾಡಿದ್ದಾರೆ.