Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಮ್ಮ ಸರ್ಕಾರ ನೀಡಿರುವ ಐದು ಗ್ಯಾರೆಂಟಿಯೇ ನಮ್ಮ ಅಭ್ಯರ್ಥಿಗಳಿಗೆ ಶ್ರೀರಕ್ಷೆ !

ಮೈಸೂರು: ಕಾಂಗ್ರೆಸ್‌ ಸರ್ಕಾರದ ಐದು ಗ್ರಾರೆಂಟಿಗಳೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಶ್ರೀರಕ್ಷೆ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಸರ್ವರ ಏಳಿಗೆ, ಅಭಿವೃದ್ಧಿಗೆ ಆದ್ಯತೆ ಹಾಗೂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆದ್ಯತೆ’ ಎಂದು ತಿಳಿಸಿದರು.

ಸಾಮಾನ್ಯ ಕಾರ್ಯಕರ್ತ ಎಂ.ಲಕ್ಷ್ಮಣ ಅವರಿಗೆ ಹೈಕಮಾಂಡ್‌ ಟಿಕೆಟ್ ನೀಡಿದೆ. ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರ ತೀವ್ರಗೊಳಿಸಲಿದ್ದೇವೆ. ಅಗತ್ಯ ಸಿದ್ಧತೆ ಮತ್ತು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ. ನಾವು ಗೆಲುವಿನ ಹಾದಿಯಲ್ಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜನರ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಅವರಿಗೆ ಲಭ್ಯವಾಗುವುದು ನಮ್ಮ ಆದ್ಯತೆ. ಇದಕ್ಕಾಗಿ ಕಾರ್ಯಕರ್ತನನ್ನು ಜನರ ನಡುವೆ ಬಿಟ್ಟಿದ್ದೇವೆ. ಜಾತ್ಯತೀತ ನಿಲುವು ಮುಂದುವರಿಸುವುದು, ಸಂವಿಧಾನದ ರಕ್ಷಣೆಯ ಸಂಕಲ್ಪ ನಮ್ಮದು. ಮೌಲ್ಯಧಾರಿತ ಚುನಾವಣೆಯನ್ನು ನಡೆಸಲಿದ್ದೇವೆ. ಪಕ್ಷದ ಅಭ್ಯರ್ಥಿಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ತಿಳಿಸಿದರು.

ಚಾಮರಾಜ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ‘ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಐವರು ಶಾಸಕರು ಕಾಂಗ್ರೆಸ್‌ನವರಾಗಿದ್ದು, ನಮ್ಮ ಬಲ ಜಾಸ್ತಿ ಇದೆ. ಕೇಂದ್ರದಲ್ಲಿ ಬಿಜೆಪಿ ನಡೆಸಿದ ದುರಾಡಳಿತವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿದ್ದೇವೆ. ಸಿದ್ದರಾಮಯ್ಯ ಅವರು ಮೈಸೂರಿಗೆ ನೀಡಿರುವ ಕೊಡುಗೆಗಳನ್ನು ತಿಳಿಸಲಿದ್ದೇವೆ. ಕೇವಲ 9 ತಿಂಗಳಲ್ಲಿ ಮೈಸೂರಿಗೆ ₹ 900 ಕೋಟಿಗೂ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿ ನೀಡಿದ್ದು, ಇದೆಲ್ಲವನ್ನೂ ಮನವರಿಕೆ ಮಾಡಿಕೊಟ್ಟು ಮತ ಕೇಳಲಿದ್ದೇವೆ’ ಎಂದು ತಿಳಿಸಿದರು.

ಮಾಜಿ ಶಾಸಕ ಎಚ್.ಪಿ.‌ ಮಂಜುನಾಥ್ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ಯದುವೀರ್ ರಾಜವಂಶಸ್ಥ ಅಲ್ಲ; ಅವರ ರಾಜವಂಶಸ್ಥರ ದತ್ತು ಪುತ್ರ ಅಷ್ಟೆ’ ಎಂದರು.

ಸಿದ್ದರಾಮಯ್ಯ ಅವರು ತಮಗೆ ಸನ್ಮಾನ ಸಂದರ್ಭದಲ್ಲಿ ನೀಡಿದ ಒಟ್ಟು 700 ಕೆ.ಜಿ. ಬೆಳ್ಳಿಯ ಪದಾರ್ಥಗಳನ್ನು ಮಲೆಮಹದೇಶ್ವರ ಬೆಟ್ಟಕ್ಕೆ ನೀಡಿದರು. ನಮಗೆ ಭಕ್ತಿ ಮನಸ್ಸಿನಲ್ಲಿದೆ. ಬಿಜೆಪಿಯವರಂತೆ ಬೀದಿಯಲ್ಲಿ ನಿಂತು ತೋರಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿ, ‘ಚುನಾವಣೆಯಲ್ಲಿ ‍ಪಕ್ಷದ ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದೇವೆ. ಜನರು ಬಿಜೆಪಿಯ ಕುತಂತ್ರಕ್ಕೆ ಬಲಿಯಾಗಬಾರದು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ಶಾಸಕರು, ಪರಾಜಿತ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿ ಆಗಿದ್ದವರೆಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌, ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡರಾದ ಎಂ.ಕೆ.ಸೋಮಶೇಖರ್‌, ಎಂ. ಪ್ರದೀಪ್ ಕುಮಾರ್, ಎಚ್‌ಎ. ವೆಂಕಟೇಶ್, ಮಾವಿನಹಳ್ಳಿ ಸಿದ್ದೇಗೌಡ ಪಾಲ್ಗೊಂಡಿದ್ದರು

Tags: