Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೈಸೂರಲ್ಲಿ ಜಾ.ದಳ ಕಾರ್ಯಕರ್ತರು ತಬ್ಬಿಬ್ಬು

ಮೈಸೂರು: ಬಿಜೆಪಿ ಹಾಗೂ ಜಾ.ದಳ ಮೈತ್ರಿ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆಯಾಗಿದ್ದಾರೆ. ಈ ಬೆಳವಣಿಗೆಯಿಂದ ನಗರ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ, ದೋಸ್ತಿ ಪಕ್ಷ ಜಾ.ದಳದ ಕೆಲ ಮುಖಂಡರ ಹೊರತಾಗಿ ಉಳಿದವರು ಚುನಾವಣೆಯಲ್ಲಿ ನಮ್ಮ ಪಾತ್ರವೇನು ಎಂದು ತಿಳಿಯದೆ ಮೌನಕ್ಕೆ ಜಾರಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಜಾ.ದಳಕ್ಕೆ ತನ್ನದೇ ಆದ ಇತಿಹಾಸವಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯ ವೇಳೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಜಾ.ದಳ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿತ್ತು. ಚುನಾವಣೆ ನಡೆಯುವ ಒಂದು ತಿಂಗಳ ಮುನ್ನವೇ ಕಾರ್ಯಕರ್ತರು ಮೈ ಚಳಿ ಬಿಟ್ಟು ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ಸಜ್ಜಾಗುತ್ತಿದ್ದರು. ಆದರೆ, ಇದೇ ಪ್ರಥಮ ಬಾರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜಾ.ದಳ ಬಿಜೆಪಿ ಅಭ್ಯರ್ಥಿಗೆ ಬಹಿರಂಗವಾಗಿ ತನ್ನ ಬೆಂಬಲ ಘೋಷಿಸಿದೆ. ಆದರೆ ಬಿಜೆಪಿ ಅಭ್ಯರ್ಥಿ ಘೋಷಣೆ ಯಾದ ಬಳಿಕವೂ ತಮ್ಮ ಪಾತ್ರವೇನೆಂದು ತಿಳಿಯದೆ ಜಾ.ದಳ ಕಾರ್ಯಕರ್ತರು ಗೊಂದಲಕ್ಕೊಳಗಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಹೆಸರು ಘೋಷಣೆ ಆಗುತ್ತಿದ್ದಂತೆ ಯದುವೀರ್ ಅವರು ಬಿಎಸ್‌ವೈ, ಹೆಚ್‌.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಮುಂತಾದ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಆದರೆ, ಜಾ.ದಳ ಕಚೇರಿಗಾಗಲಿ, ಜಾ.ದಳದ ಸ್ಥಳೀಯ ಮುಖಂಡರನ್ನು ಭೇಟಿಯಾಗುವುದಾಗಲಿ ಮಾಡಿಲ್ಲ. ಸೀಟು ಹಂಚಿಕೆ ಮಾತುಕತೆ ಇನ್ನೂ ಅಂತಿಮಗೊಳ್ಳದ ಕಾರಣ ಜಾ.ದಳ ಮುಖಂಡರೂ ಇದುವರೆಗೆ ತಮ್ಮಕಾರ್ಯಕರ್ತರಿಗೆ ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಜಾ.ದಳ ಪಾಳಯದಲ್ಲಿ ಮೌನ ಕವಿದಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಜಾ.ದಳ ಕಾರ್ಯಕರ್ತರು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಅವರನ್ನು ಬೆಂಬಲಿಸಿದ್ದರು. ಈ ಬಗ್ಗೆ ಅವರ ಪಕ್ಷದ ಮುಖಂಡರೇ ಬಹಿರಂಗ ಹೇಳಿಕೆ ಕೂಡ ನೀಡಿದ್ದಾರೆ. ಆದರೆ, ಈ ಬಾರಿ ಕೇಸರಿ ಪಕ್ಷದ ಬೆಂಬಲಕ್ಕೆ ನಿಲ್ಲುವ ಬಗ್ಗೆ ಅಧಿಕೃತ ಘೋಷಣೆಯಾದ ಬಳಿಕವೂ ಜಾ.ದಳ ಕಾರ್ಯಕರ್ತರು ಚುನಾವಣೆ ಕಣಕ್ಕಿಳಿದಿಲ್ಲ. ಉಭಯ ಪಕ್ಷಗಳ ಮೈತ್ರಿಯಂತೆ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗುತ್ತದೆ ಎಂದು ತಿಳಿದಾಗ ಜಾ.ದಳ ಕಾರ್ಯಕರ್ತರ ಮನಸ್ಸಿನಲ್ಲಿ ಇದ್ದುದು ಪ್ರತಾಪ್ ಸಿಂಹ ಅವರ ಹೆಸರು, ಪ್ರತಾಪ್ ಕೂಡ ಜಾ.ದಳ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಅದಾಗಲೇ ಭೇಟಿ ಮಾಡಿ ಬೆಂಬಲ ಕೋರಿದ್ದರು. ಕಾರ್ಯಕರ್ತರೂ ಅವರಿಗೆ ಬೆಂಬಲದ ಭರವಸೆ ನೀಡಿದ್ದರು.

ಆದರೆ, ಪ್ರತಾಪ್ ಬದಲು ಯದುವೀರ್ ಹೆಸರು ಘೋಷಣೆಯಾದ ದಿಢೀ‌ ಬೆಳವಣಿಗೆಯಿಂದ ಜಾ.ದಳ ಕಾರ್ಯಕರ್ತರು ತಬ್ಬಿಬ್ಬಾಗಿದ್ದಾರೆ. ಜಾ.ದಳ ಕಾರಕರ್ತರಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿದ್ದು, ಪ್ರತಾಪ್ ಇದೇ ಸಮುದಾಯಕ್ಕೆ ಸೇರಿದ್ದ ಕಾರಣ ಬೆಂಬಲ ನೀಡಲು ಒಳಗಿಂದೊಳಗೆ ಸಮತಿ ಇತ್ತು. ಆದರೆ ಇದೀಗ ಪ್ರತಾಪ್ ಬದಲು ಯದುವೀರ್ ಅವರನ್ನು ಕಣಕ್ಕಿಳಿಸಿರುವುದರಿಂದ, ರಾಜಮನೆತನದ ಪ್ರತಿನಿಧಿ ಜತೆ ನೇರ ಸಂಪರ್ಕವಿಲ್ಲದ ಕಾರ್ಯಕರ್ತರು ಗೊಂದಲಕ್ಕೆ ಬಿದ್ದಿದ್ದಾರೆ. ಇತ್ತ ಬಿಜೆಪಿ ನಾಯಕರಾರೂ ನಮ್ಮ ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಿ ಬೆಂಬಲ ಕೋರುವ ಕೆಲಸ ಮಾಡಿಲ್ಲ, ಅವರೇ ಸುಮ್ಮನಿದ್ದ ಮೇಲೆ ನಾವು ಹೇಗೆ ಪ್ರಚಾರದಲ್ಲಿ ತೊಡಗಿಕೊಳ್ಳುವುದು? ಮುಂದೇನಾಗುತ್ತದೆಯೋ ನೋಡೋಣ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ.

Tags: