ಮೈಸೂರು: ಡಾ. ಸಿ.ಎನ್ ಮಂಜುನಾಥ್ ನಮ್ಮ ಪಕ್ಷದ ಅಭ್ಯರ್ಥಿಯಲ್ಲ, ಅವರು ಬಿಜೆಪಿ ಪಕ್ಷ ಅಭ್ಯರ್ಥಿ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ. ಸಿ.ಎನ್ ಮಂಜುನಾಥ್ ಅವರು ಜೆಡಿಎಸ್ ಅಭ್ಯರ್ಥಿ ಅಲ್ಲ. ಅವರು ಬಿಜೆಪಿಗೆ ಹೋಗಾಯಿತು ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್.ಡಿ ದೇವೇಗೌಡ ಅವರ ಅಳಿಯ ಡಾ ಸಿ.ಎನ್ ಮಂಜುನಾಥ ಅವರನ್ನು ಬಿಜೆಪಿ ಮೈತ್ರಿಯೂ ಜಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ, ಯಾರು ನಮ್ಮ ಚೆಹ್ನೆ ಮೇಲೆ ಚುನಾವಣೆಗೆ ನಿಲ್ಲುತ್ತಾರೋ ಅವರು ಮಾತ್ರ ನಮ್ಮ ಅಭ್ಯರ್ಥಿಗಳು. ಮಂಜುನಾಥ್ ಬಿಜೆಪಿಗೆ ಸೇರಾಯಿತು. ಡಾ.ಮಂಜುನಾಥ್ ತಮ್ಮ ಪಕ್ಷದ ಅಭ್ಯರ್ಥಿಯೇ ಅಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಂಜುನಾಥ್ ಅವರನ್ನು ಇಷ್ಟಪಟ್ಟಿದ್ದಾರೆ. ಇದುವರೆಗೆ ಡಾ.ಮಂಜುನಾಥ್ ಯಾವತ್ತೂ ರಾಜಕೀಯದ ಬಗ್ಗೆ ಮಾತಾಡಿಲ್ಲ, ಅವರಿಗೆ ರಾಜಕೀಯ ಅನ್ನೋದು ಗೊತ್ತಿಲ್ಲ. ಆದರೆ, ಅವರ ಜನಪ್ರಿಯತೆಯನ್ನು ನೋಡಿ ಬಿಜೆಪಿ ನಾಯಕರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಜಿಟಿಡಿ ಸ್ಪಷ್ಟನೆ ನೀಡಿದರು.