ಬೆಂಗಳೂರು: ಸ್ಮೃತಿ ಮಂದಾನ ಹಾಗೂ ಎಲಿಸ್ ಪೆರಿ ಗಳಿಸಿದ ಆಕರ್ಷಕ ಅರ್ಧಶತಗಳ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧ ಜಯ ದಾಖಲಿಸಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 198 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಯುಪಿ 175 ರನ್ ಕಲೆಹಾಕಿ 23 ರನ್ ಗಳಿಂದ ಸೋಲೊಪ್ಪಿಕೊಂಡಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 198 ರನ್ ಕಲೆಹಾಕಿದೆ. ಆರ್‌ಸಿಬಿಗೆ ನಾಯಕಿ ಸ್ಮೃತಿ ಹಾಗೂ ಸಬ್ಬಿನೇನಿ ಮೇಘನಾ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ ಕೇವಲ 5.3 ಓವರ್‌ಗಳಲ್ಲಿ 51 ರನ್ ಗಳಿಸಿತು. ಮೇಘನಾ (28) ಔಟಾದ ನಂತರ ಸ್ಮೃತಿ ಹಾಗೂ ಪೆರಿ ಆಟ ಕಳೆಗಟ್ಟಿತು. ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದ ಪೆರಿ ಏಕಾಏಕಿ ಬೀಸಾಟವಾಡಿದರು. ಈ ಇಬ್ಬರು 2ನೇ ವಿಕೆಟ್‌ಗೆ 95 ರನ್ ಸೇರಿಸಿದರು.
ಸ್ಮೃತಿ ಕೇವಲ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 80 ರನ್ ಸಿಡಿಸಿದರು. ಪೆರಿ 37 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸೇರಿ 58 ರನ್ ಬಾರಿಸಿದರು. ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ರಿಚಾ ಘೋಷ್ 10 ಎಸೆತಗಳಲ್ಲಿ 21 ರನ್ ಗಳಿಸಿ, ತಂಡದ ಮೊತ್ತವನ್ನು ಇನ್ನೂರರ ಸನಿಹಕ್ಕೆ ಕೊಂಡೊಯ್ದರು.
ಯುಪಿ ಪರ ಅಂಜಲಿ, ದೀಪ್ತಿ ಶರ್ಮಾ ಮತ್ತು ಸೋಫಿ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನತ್ತಿದ ಯುಪಿ ತಂಡಕ್ಕೆ ಬರ್ಜರಿ ಆರಂಭ ದೊರೆಯಿತು. ನಾಯಕಿ ಹೀಲಿ ಮತ್ತು ಕಿರಣ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಕಿರಣ್ 18 ರನ್ ಬಾರಿಸಿ ನಿರ್ಗಮಿಸಿದರೇ, ನಾಯಕಿ ಹೀಲಿ 38 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 55 ಕಲೆಹಾಕಿ ಆರ್‌ಸಿಬಿ ಬೌಲರ್ ಗಳನ್ನು ಕಾಡಿದರು.
ಈ ಇಬ್ಬರು ಕಟ್ಟಿದ ಇನ್ನಿಂಗ್ಸ್‌ನ್ನು ಮುಂದಕ್ಕೆ ಕರೆದೊಯ್ಯುವಲ್ಲಿ ಯುಪಿ ಮಧ್ಯಮ ಕ್ರಮಾಂಕ ಎಡವಿತು. ಚಾಮರಿ ಅಟಾಪಟ್ಟು 8, ಹ್ಯಾರಿಸ್ 5 ಮತ್ತು ಶರಾವತ್ ಕೇವಲ 1 ರನ್ ಬಾರಿಸಿ ಬಂದ ದಾರಿಯಲ್ಲೇ ಹಿಂತಿರುಗಿದರು.
ಕೆಳ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಮತ್ತು ಪೂನಂ ಸ್ವಲ್ಪ ಕಾಡಿದರು. ಈ ಇಬ್ಬರು ಕ್ರಮವಾಗಿ 33 ಮತ್ತು 28 ರನ್ ಬಾರಿಸಿದರು. ಕೊನೆಯಲ್ಲಿ ಬಂದವರು ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು.
ಆರ್‌ಸಿಬಿ ಪರ ಶೋಭನಾ, ಡಿವೈನ್ ಮತ್ತು ಜಾರ್ಜಿಯಾ ತಲಾ 2 ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಸ್ಮೃತಿ ಮಂದನಾ