Mysore
21
scattered clouds

Social Media

ಬುಧವಾರ, 15 ಜನವರಿ 2025
Light
Dark

ಅಂಬೇಡ್ಕರ್‌ನ್ನು ಓದುವುದು ಮಾನವೀಯತೆ ಅಧ್ಯಯನ ಮಾಡಿದಂತೆ: ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಓದುವುದು ಹೊಸ ದೇಶಕ್ಕೆ ಪ್ರವೇಶದಂತೆ ಹಾಗೂ ಮಾನವೀಯತೆಯನ್ನು ಅಧ್ಯಯನ ಮಾಡುತ್ತಿದ್ದಂತೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರ ವತಿಯಿಂದ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ “ಡಾ.ಬಿ.ಆರ್.ಅಂಬೇಡ್ಕರ್ ಅವರ ಅಭಿವೃದ್ಧಿ ದೃಷ್ಟಿಕೋನ ಮತ್ತು ಸಮಕಾಲಿನ ಜಗತ್ತು” ವಿಷಯ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಾಬಸಾಹೇಬರು ದೇಶಕಟ್ಟಲು, ಜನರನ್ನು ಬೆಸೆಯಲು, ಸಾಂಸ್ಕೃತಿಕವಾದ ಬದುಕಿನ ನಿರೂಪಣೆಗೆ ನೀಡಿರುವ ಸತ್ವಭರಿತ ಅನೇಕ ಕೊಡುಗೆಯ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕಿದೆ. ಅಸಮಾನತೆಯನ್ನು ತೊರೆದು ಸಮಸಮಾಜದ ಸಾಧನೆಯ ಗುರಿಯ ಕಡೆಗೆ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.

ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನ ಕುರಿತು ಸಮಗ್ರವಾದ ಅಧ್ಯಯನ ನಡೆಸಬೇಕಿದೆ. ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಬಿತ್ತಬೇಕಿದೆ. ಈ ಮೂಲಕ ಅಂಬೇಡ್ಕರ ಅವರ ಕನಸಾದ ಸಮೃದ್ಧ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.

ಮಾಧ್ಯಮಗಳ ನಿಲುವು ವೈಚಾರತೆ, ವೈಜ್ಞಾನಿಕ ನಿಲುವುಗಳನ್ನು ಬಲಪಡಿಸುವಂತೆ ಕಾರ್ಯನಿರ್ವಹಿಸಬೇಕಿದೆ. ಸತಿಸಹಾಗಮನ ಪದ್ಧತಿ ಪಾಲಿಸಿದವರು ಇಂದು ಸಂವಿಧಾನದ ಮೇಲೆ ಸವಾರಿ ಮಾಡುತ್ತಿದ್ದಾರೆ. ಸಾಮಾಜಿಕ ಹಾಗೂ ಅರ್ಥಿಕ ಸಮಾನತೆವಿಲ್ಲದೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ.

ಭಾರತದ ಎಲ್ಲಾ ಜನರನ್ನು ಸಂರಕ್ಷಣೆ ಮಾಡುವ ಸಂವಿಧಾನವನ್ನು ಬಾಬಸಾಹೇಬರು ನೀಡಿದ್ದಾರೆ. ನಮಗೆ, ನಮ್ಮ ಮಕ್ಕಳಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ನೆಮ್ಮದಿ ಬದುಕು ಸಂವಿಧಾನದ ಸಮರ್ಪಕ ಜಾರಿಯಲ್ಲಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ಮಾತನಾಡಿ, ಶಿಕ್ಷಣವು ಸುಲಭವಾಗಿ ಕೈಗೆಟುಕದ ಸಂದರ್ಭದಲ್ಲಿ ಶೋಷಿತ ಸಮುದಾಯದ ವ್ಯಕ್ತಿ ವರ್ಣಬೇದ, ಜಾತಿಭೇದದ ನಡುವೆ ಸ್ವಾತಂತ್ರ್ಯಪೂರ್ವದಲ್ಲಿ ವಿದೇಶದಲ್ಲಿ ಉನ್ನತ ಪದವಿ ಪಡೆದವರು ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ. ಈ ದೇಶದ ಜಾತಿ ಪದ್ಧತಿ, ಅಸ್ಪೃಶ್ಯತೆ ತೊಲಿಗಿಸಲು ಅವರು ನೀಡಿರುವ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.

ಅಂಬೇಡ್ಕರ್ ಅವರು ಸಂವಿಧಾನ ಕತೃ ಮಾತ್ರವಲ್ಲ, ಆರ್ಥಿಕ ತಜ್ಞ, ಶಿಕ್ಷಣ ತಜ್ಞ, ಸಾಮಾಜಿಕ ಚಿಂತಕ, ಕ್ರಾಂತಿಕಾರಿ ನಾಯಕ, ತತ್ವಜ್ಞಾನಿ ಹಾಗೂ ಮಾನವತಾವಾದಿ. ಈ ನಿಟ್ಟಿನಲ್ಲಿ 21ನೇ ಶತಮಾನದಲ್ಲಿ ಬಾಬಾಸಾಹೇಬರ ದೂರದೃಷ್ಟಿತ್ವದ ಅಭಿವೃದ್ಧಿ ವಿಚಾರಗಳು ಹೇಗೆ ಪ್ರತಿಧ್ವನಿಸುತ್ತಿದೆ ಎಂಬುದನ್ನು ಚಿಂತಿಸಿಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಪರಿಕ್ಷಾಂಗ ಕುಲಸಚಿವ ಪ್ರೊ.ಪ್ರವೀಣ್, ಪ್ರೊ.ಎನ್.ಲಕ್ಷ್ಮಿ, ಡಾ.ಶಿವಕುಮಾರಸ್ವಾಮಿ, ವ್ಯವಸ್ಥಾಪನ ಮಂಡಳಿ ಸದಸ್ಯ ಬಿ.ಜಿ.ಪಾಟೀಲ್, ಬಾಲಕ ತೇಜಸ್ವಿ ಚಕ್ರವರ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ