Mysore
30
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯೂರೋಪ್‌ನಲ್ಲೂ ರೈತರ ಪ್ರತಿಭಟನೆ, ರಾಜಕೀಯ ತಲ್ಲಣ

ಡಿ.ವಿ.ರಾಜಶೇಖರ

ರೈತರು ಭಾರತದಲ್ಲಿ ಮಾತ್ರವಲ್ಲ ಯೂರೋಪಿನ ಹಲವು ದೇಶಗಳಲ್ಲಿಯೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ತಿಂಗಳುಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಶತಾವು ಬೆಳೆದ ಬೆಳೆಗೆ ನ್ಯಾಯಯುತಬೆಲೆ ಸಿಗುವಂತೆ ಮಾಡ ಬೇಕು ಮತ್ತು ಆ ಮೂಲಕ ರೈತರ ಜೀವನಮಟ್ಟ ಸುಧಾರಿಸಬೇಕೆಂಬುದು ರೈತರ ಸಾಮಾನ್ಯ ಬೇಡಿಕೆಯಾಗಿದೆ. ಇದೇ ಜೂನ್ ತಿಂಗಳಲ್ಲಿ ಯೂರೋಪ್ ಒಕ್ಕೂಟದ ಚುನಾವಣೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ರೈತರನ್ನು ಸಮಾಧಾನಪಡಿಸಲು ಕೆಲವು ದೇಶಗಳು ರಿಯಾಯಿತಿಗಳನ್ನು ಪ್ರಕಟಿಸಿವೆ. ಕಟ್ಟಾ ಬಲಪಂಥೀಯ ರಾಜಕೀಯ ಪಕ್ಷಗಳು, ಸಂಘಟನೆಗಳು ಈ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿರುವ ಕಾರಣ ರಾಜಕೀಯದಲ್ಲಿ ಕೋಲಾಹಲ ಎದ್ದಿದೆ. ಅಧಿಕಾರ ಕಳೆದುಕೊಳ್ಳುವ ಭೀತಿ ಆಳುವವರಲ್ಲಿ ತಲ್ಲಣ ಉಂಟುಮಾಡಿದೆ.

ಕುಸಿಯುತ್ತಿರುವ ಆದಾಯ, ಯೂರೋಪ್ ಒಕ್ಕೂಟಕ್ಕೆ ಸೇರದೆ ಇರುವ ದೇಶಗಳಿಂದ ಆಮದಾಗುತ್ತಿರುವ ಅಗ್ಗದ ಕೃಷಿ ಪದಾರ್ಥಗಳು ಸ್ಥಳೀಯ ಕೃಷಿ ಪದಾರ್ಥಗಳ ಬೆಲೆಗಳ ಮೇಲೆ ಆಗುತ್ತಿರುವ ಪರಿಣಾಮ, ವಾತಾವರಣದಲ್ಲಿ ಆಗುತ್ತಿರುವ ಅಪಾಯಕಾರಿ ಪರಿಣಾಮಗಳನ್ನು ಎದುರಿಸಲು ಯೂರೋಪ್ ಒಕ್ಕೂಟ ರೂಪಿಸಿರುವ ‘ಹಸಿರು ನೀತಿಗಳು ಕೃಷಿಕರ ಮೇಲೆ ಮಾಡುತ್ತಿರುವ ಕೆಟ್ಟ ಪರಿಣಾಮಗಳು ಇಡೀ ಯೂರೋಪಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಫ್ರಾನ್ಸ್, ಇಟಲಿ, ರೊಮೇನಿಯಾ, ಪೋಲೆಂಡ್, ಗ್ರೀಸ್, ಜರ್ಮನಿ, ಪೋರ್ಚುಗಲ್‌, ನೆದರ್‌ ಲ್ಯಾಂಡ್‌ ಗಳಲ್ಲಿ ರೈತರು ಹಂತ ಹಂತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದೆ.

ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾವಿರಾರು ರೈತರು ಟ್ರಾಕ್ಟರ್ ಗಳಲ್ಲಿ ಬಂದು ಕಳೆದ ವಾರ ಬೆಲ್ಲಿಯಂ ದೇಶದ ರಾಜಧಾನಿ ಬ್ರಸಲ್ಸ್‌ನಲ್ಲಿರುವ ಯೂರೋಪ್ ಒಕ್ಕೂಟದ ಕೇಂದ್ರ ಕಚೇರಿ ಮತ್ತು ಪಾರ್ಲಿಮೆಂಟ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪಾರ್ಲಿಮೆಂಟ್ ಭವನದ ಮೇಲೆ ರಸಗೊಬ್ಬರ ದ್ರವವನ್ನು ಎರೆಚಿದರು, ಮೊಟ್ಟೆಗಳನ್ನು ಎಸೆದರು ಸುತ್ತಲ ಜಾಗದಲ್ಲಿ ಹುಲ್ಲಿನ ಮೆದೆಹಾಕಿ ಬೆಂಕಿ ಇಟ್ಟರು, ಟೈರುಗಳನ್ನು ಸುಟ್ಟು ಇಡೀ ನಗರ ಹೊಗೆಯಿಂದ ತುಂಬಿದಂತೆ ಮಾಡಿದರು. ಪೊಲೀಸರು ಅವರ ಮೇಲೆ ಅಶ್ರುವಾಯು ಸಿಡಿಸಿ ಕೆಲವರನ್ನು ಬಂಧಿಸಿ ನಗರದ ಹೊರಗೆ ಕಳುಹಿಸಿದರು. ಪ್ರತಿಭಟನೆ ಹೆಚ್ಚಿನ ಹಿಂಸೆಗೆ ಕಾರಣವಾಗದಿರಲೆಂದು ಯೂರೋಪ್ ಒಕ್ಕೂಟದಲ್ಲಿ ಸಭೆ ಸೇರಿದ್ದ ಕೃಷಿ ಸಚಿವರು ಕೆಲವು ರಿಯಾಯಿತಿಗಳನ್ನೂ ಪ್ರಕಟಿಸಿದರು. ಆದರೆ ಈ ಭರವಸೆಗಳು ರೈತರ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.

ಫ್ರಾನ್ಸ್‌ನ ಪ್ಯಾರಿಸ್ ನಗರದಲ್ಲಿ ಕಳೆದ ವಾರ ಕೃಷಿ ಮೇಳವನ್ನು ಉದ್ಘಾಟಿಸಲು ಹೋಗಿದ್ದ ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ರೈತರ ಪ್ರತಿಭಟನೆ ಎದುರಿಸಬೇಕಾಯಿತು. ಪ್ಯಾರಿಸ್‌ಗೆ ಬರುವ ಮುಖ್ಯ ರಸ್ತೆಗಳನ್ನು ಅಡ್ಡಕಟ್ಟಿ ರೈತರು ಪ್ರತಿಭಟಿಸಿದರು. ಮೆಕ್ರಾನ್ ರಾಜೀನಾಮೆಗೂ ಒತ್ತಾಯಿಸಿದರು. ತಮ್ಮ ಪರಿಸ್ಥಿತಿ ಸುಧಾರಿಸಬೇಕು, ರೈತರು ಬೆಳೆದ ಬೆಳೆಗಳಿಗೆ ಬೆಲೆ ರಕ್ಷಣೆ ಒದಗಿಸಬೇಕು, ‘ಹಸಿರು ಕಾನೂನು’ಗಳನ್ನು ಸಡಿಲಗೊಳಿಸಬೇಕು, ಡೀಸೆಲ್ ಮೇಲಿನ ತೆರಿಗೆ ರದ್ದು ಮಾಡಬೇಕು ಇವೇ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫ್ರಾನ್ಸ್‌ನ ರೈತರು ಕಳೆದ ಹಲವು ತಿಂಗಳುಗಳಿಂದ ದೇಶದ ನಾನಾ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರೈತರ ಬೇಡಿಕೆಗಳನ್ನು ತಿರಸ್ಕರಿಸಲಾಗದೆ ಮೆಕ್ರಾನ್ ಸರ್ಕಾರ ಸುಮಾರು ನಾಲ್ಕುನೂರು ಯೂರೋ ಮೌಲ್ಯದ ನೆರವು ಮತ್ತು ತೆರಿಗೆ ರಿಯಾಯಿತಿಗಳನ್ನು ಈಗ ಘೋಷಿಸಿದೆ. ರೈತರಿಗೆ ಆದಾಯದ ಗ್ಯಾರಂಟಿ ಇರುವಂತೆ ಮಾಡಲು ಅವರು ಬೆಳೆದ ಬೆಳೆಗೆ ಮಾರಾಟದ ಬೆಲೆ ನಿಗದಿ ಮಾಡುವುದಾಗಿಯೂ ಮೆಕ್ರಾನ್ ಪ್ರಕಟಿಸಿದ್ದಾರೆ. ಯೂರೋಪ್ ಒಕ್ಕೂಟ ರೂಪಿಸಿರುವ ಪರಿಸರ ನೀತಿಗಳು, ರಾಸಾಯನಿಕ ಗೊಬ್ಬರಗಳ ಮೇಲೆ ವಿಧಿಸಿರುವ ನಿರ್ಬಂಧಗಳು, ಹಸಿರುಮನೆ ಪರಿಣಾಮ ತಗ್ಗಿಸಲು ಜಾರಿಗೆ ತಂದಿರುವ ನಿಯಮಗಳು ರೈತರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಅವರು ಬೆಳೆದ ಬೆಳೆಗಳು ದುಬಾರಿಯಾಗುತ್ತಿದ್ದು, ಆಮದಾದ ಅಗ್ಗದ ಕೃಷಿ ಪದಾರ್ಥಗಳ ಬೆಲೆಗಳ ವಿರುದ್ಧ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರ ಆದಾಯ ಕುಸಿಯುತ್ತಿದ್ದು ಅವರ ಜೀವನ ದುರ್ಬರವಾಗುತ್ತಿದೆ ಎಂದೂ ರೈತ ಸಂಘಟನೆಗಳು ಮೆಕ್ರಾನ್‌ಗೆ ಮನವಿ ಸಲ್ಲಿಸಿವೆ.

ಜರ್ಮನಿಯಲ್ಲೂ ರೈತರ ಚಳವಳಿ ಪ್ರಬಲವಾಗಿಯೇ ನಡೆಯುತ್ತಿದೆ. ಈ ಚಳವಳಿಗೆ ಕಟ್ಟಾ ಬಲಪಂಥೀಯ ಪಕ್ಷಗಳು ಬೆಂಬಲ ನೀಡಿರುವುದರಿಂದ ಸರ್ಕಾರ ಅನಿವಾರ್ಯವಾಗಿ ಅತ್ತ ಗಮನ ನೀಡಬೇಕಾಗಿ ಬಂದಿದೆ. ಹಸಿರು ನೀತಿಗಳನ್ನು ಜರ್ಮನಿ ಕಟ್ಟುನಿಟ್ಟಾಗಿ ಜಾರಿಗೆ ತಂದದ್ದರಿಂದ ಅವು ರೈತರ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಹೆಚ್ಚು ಹೊಗೆಉಗುಳುವ ಡೀಸೆಲ್ ವಾಹನ ಗಳ ಮೇಲೆ ಹೆಚ್ಚು ತೆರಿಗೆ ವಿಧಿಸಿದ್ದು, ಅದನ್ನು ರದ್ದು ಮಾಡಬೇಕೆಂಬುದು ರೈತರ ಬೇಡಿಕೆಗಳಲ್ಲಿ ಒಂದಾಗಿದೆ. ಡೀಸೆಲ್ ಮೇಲೆ ವಿಧಿಸಿರುವ ತೆರಿಗೆಯನ್ನು ಸರಿಹೊಂದಿಸಲು ಸರ್ಕಾರ ರೈತರಿಗೆ ಸಬ್ಸಿಡಿ ನೀಡುತ್ತಿತ್ತು. ಅದನ್ನು ಹಂತಹಂತವಾಗಿ ಕಡಿಮೆ ಮಾಡಲು ಸರ್ಕಾರ ಯೋಚಿಸುತ್ತಿರುವ ಬೆನ್ನಲ್ಲೇ ರೈತರು ಸಿಡಿದೆದ್ದಿದ್ದಾರೆ. ಸಬ್ಸಿಡಿ ರದ್ದಾಗುವ ಸಾಧ್ಯತೆ ಇಲ್ಲ. ಆದರೆ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಪೋಲೆಂಡ್‌ನಲ್ಲಿ ರೈತ ಚಳವಳಿ ಮುಖ್ಯವಾಗಿ ಅಗ್ಗದ ಕೃಷಿ ಪದಾರ್ಥಗಳ ಆಮದು ವಿರುದ್ಧ ನಡೆಯುತ್ತಿದೆ. ಉಕ್ರೇನ್ ದೇಶದ ಮೇಲೆ ರಷ್ಯಾ ಮಿಲಿಟರಿ ನಡೆಸಿದ ದಾಳಿ ನಂತರ ಉಕ್ರೇನ್ ರೈತರಿಗೆ ನೆರವಾಗಲು ಯೂರೋಪ್ ಒಕ್ಕೂಟ ಕೆಲವು ರಿಯಾಯಿತಿಗಳನ್ನು ಘೋಷಿಸಿತ್ತು. ಅಲ್ಲಿನ ರೈತರು ಬೆಳೆದ ಬೆಳೆಗಳನ್ನು ಯೂರೋಪಿನ ಯಾವುದೇ ದೇಶಕ್ಕೆ ಮುಕ್ತವಾಗಿ ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಉಕ್ರೇನ್ ಕೃಷಿ ವಸ್ತುಗಳಿಗೆ ರಫ್ತು ತೆರಿಗೆ ಇಲ್ಲ. ಹೀಗಾಗಿ ಅಪಾರ ಪ್ರಮಾಣದಲ್ಲಿ ಕೃಷಿ ಪದಾರ್ಥಗಳು ಉಕ್ರೇನ್‌ನಿಂದ ಯೂರೋಪ್ ಮಾರುಕಟ್ಟೆಗೆ ರಫ್ತಾಗುತ್ತಿವೆ. ಅಗ್ಗದ ಬೆಲೆಯಲ್ಲಿ ಅವು ಸಿಗುತ್ತಿರುವುದರಿಂದ ದೇಶೀಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈ ಬೆಳೆವಣಿಗೆಯಿಂದಾಗಿ ಯೂರೋಪ್ ರೈತರು ಕಷ್ಟಕ್ಕೆ ಈಡಾಗಿದ್ದಾರೆ. ಉಕ್ರೇನ್ ಮತ್ತು ಯೂರೋಪ್ ಒಕ್ಕೂಟಕ್ಕೆ ಸೇರದೆ ಇರುವ ದೇಶಗಳಿಂದ ಬರುವ ಆಹಾರ ಧಾನ್ಯ ಮತ್ತಿತರ ಕೃಷಿ ಪದಾರ್ಥಗಳ ಆಮದನ್ನು ನಿರ್ಬಂಧಿಸಬೇಕೆಂಬುದು ಪೋಲೆಂಡ್ ರೈತರ ಆಗ್ರಹ. ಬಹುಪಾಲು ಯೂರೋಪ್‌ನ ಎಲ್ಲ ದೇಶಗಳ ರೈತರೂ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಸ್ಪೇನ್ ಮತ್ತು ಗ್ರೀಸ್‌ನಲ್ಲೂ ರೈತ ನಾಯಕರು ಇಂಥದ್ದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಚಳವಳಿ ನಡೆಸುತ್ತಿದ್ದಾರೆ. ಗ್ರೀಕ್ ಸರ್ಕಾರ ಡೀಸೆಲ್ ಮತ್ತು ವಿದ್ಯುತ್ ಮೇಲಿನ ತೆರಿಗೆ ರಿಯಾಯಿತಿಯನ್ನು ಪ್ರಕಟಿಸಿ ರೈತರ ಮನವೊಲಿಸಲು ಪ್ರಯತ್ನಿಸುತ್ತಿದೆ.

ರಷ್ಯಾ – ಉಕ್ರೇನ್ ಯುದ್ಧ ಮತ್ತು ಹವಾಮಾನ ವೈಪರೀತ್ಯ ತಡೆಯಲು ರೂಪಿಸಿರುವ ಹಸಿರು ನೀತಿಗಳು ಯೂರೋಪ್‌ನಲ್ಲಿ ನಡೆಯುತ್ತಿರುವ ರೈತ ಚಳವಳಿಗಳಿಗೆ ಮುಖ್ಯ ಕಾರಣ. ಇವು ರೈತರ ಮೇಲಷ್ಟೇ ಅಲ್ಲ ಎಲ್ಲರ ಮೇಲೂ ಪರಿಣಾಮ ಬೀರಿವೆ. ಇಂಧನ ಬೆಲೆಗಳು ಹೆಚ್ಚಿವೆ. ಆಹಾರ ಧಾನ್ಯದ ಬೆಲೆಗಳು ಏರಿವೆ. ಹಣದುಬ್ಬರ, ನಿರುದ್ಯೋಗ ಹೆಚ್ಚಿದೆ. ಈ ಸಮಸ್ಯೆಗಳ ಜೊತೆಗೆ ಹವಾಮಾನ ವೈಪರೀತ್ಯದಿಂದಾಗಿ ಇಡೀ ಮನುಕುಲವೇ ಅಪಾಯದತ್ತ ಹೊರಳುತ್ತಿದೆ. ಇದರಿಂದಾಗಿ ಹಸಿರು ಮನೆ ಪರಿಣಾಮವನ್ನು ತಗ್ಗಿಸಲು ನಿಯಮಗಳನ್ನು ರೂಪಿಸಲಾಗಿದೆ. ಸಹಜವಾಗಿ ಈ ನಿಯಮಗಳು ಕೃಷಿ ಕ್ಷೇತ್ರಕ್ಕೂ ಅನ್ವಯಿಸುತ್ತವೆ. ರಸಗೊಬ್ಬರಗಳ ಬಳಕೆ, ಪಳಯುಳಿಕೆ ಉರಿಸುವುದು ಮುಂತಾದ ಕಾರಣಗಳಿಂದ ಹಸಿರು ಮನೆ ಪರಿಣಾಮದಲ್ಲಿ ಶೇ.30 ಭಾಗ ಕೃಷಿ ಕ್ಷೇತ್ರದ್ದಾಗಿದೆ. 2050ರ ವೇಳೆಗೆ ಹವಾಮಾನವನ್ನು 1990ರ ಮಟ್ಟಕ್ಕೆ ತರಲು ಕಠಿಣ ನಿಯಮಗಳನ್ನು ಪಾಲಿಸಬೇಕಾದುದು ಅಗತ್ಯ ಎಂದು ಯೂರೋಪ್ ಒಕ್ಕೂಟ ಭಾವಿಸಿ ಹಸಿರು ನಿಯಮಗಳನ್ನು ರೂಪಿಸಿದೆ.

ರೈತರು ತಮ್ಮ ಕೃಷಿ ಭೂಮಿಯ ಶೇ.4 ಭಾಗದಷ್ಟನ್ನು ಖಾಲಿ ಬಿಡಬೇಕು. ಆ ಜಾಗದಲ್ಲಿ ಈ ವರ್ಷ ಯಾವುದೇ ಬೆಳೆ ತೆಗೆಯದೆ ಉಳಿಸಿ ನಂತರದ ವರ್ಷ ಬೆಳೆ ಬೆಳೆಯಬಹುದಾಗಿದೆ. ಆ ವರ್ಷ ಬೇರೆ ಶೇ.4ರಷ್ಟು ಭಾಗ ಕೃಷಿಗೆ ಬಳಸದೆ ಖಾಲಿ ಬಿಡಬೇಕು ಹಾಗೆಯೇ ಉಳಿದ ಜಾಗದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ರಸಗೊಬ್ಬರ ಬಳಸುವುದನ್ನು ಪ್ರತಿವರ್ಷ ಶೇ.20ರಷ್ಟು ತಗ್ಗಿಸಿ ನೈಸರ್ಗಿಕ ಗೊಬ್ಬರ ಬಳಸಬೇಕು ಎಂದು ನಿಯಮ ವಿಧಿಸಲಾಗಿದೆ. ಈ ನಿಯಮಗಳಿಂದ ರೈತರಿಗೆ ಅನ್ಯಾಯವಾಗುತ್ತದೆ. ಅವರ ಆದಾಯ ಕುಸಿಯುತ್ತದೆ ಎಂದು ರೈತ ಸಂಘಟನೆಗಳು ಹೇಳುತ್ತಿವೆ. ರೈತರನ್ನು ಎದುರು ಹಾಕಿಕೊಂಡು ಸರ್ಕಾರಗಳನ್ನು ನಡೆಸಲು ಸಾಧ್ಯವಿಲ್ಲವಾದ್ದರಿಂದ ಎಲ್ಲ ರಿಯಾಯಿತಿಗಳನ್ನು
ದೇಶಗಳ ಸರ್ಕಾರಗಳೂ ಅನಿವಾರ್ಯವಾಗಿ ಘೋಷಿಸಬೇಕಾಗಿ ಬಂದಿದೆ. ಅಂದರೆ ಹಸಿರು ನಿಯಮಗಳನ್ನು ಸಡಿಲ ಮಾಡುವುದು ಅನಿವಾರ್ಯವಾಗಿದೆ. ಹವಾಮಾನ ವೈಪರೀತ್ಯವನ್ನು ತಡೆಯಲು ಯೂರೋಪ್ ಒಕ್ಕೂಟದ 27 ದೇಶಗಳು 2019ರಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು. ಈಗ ಅದೇ ದೇಶಗಳು ಆ ಒಪ್ಪಂದವನ್ನು ಮುರಿಯಬೇಕಾದ ಸ್ಥಿತಿಗೆ ತಲುಪಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ