Mysore
21
scattered clouds

Social Media

ಬುಧವಾರ, 15 ಜನವರಿ 2025
Light
Dark

ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದ ಪ. ಮಲ್ಲೇಶ್: ಮುಖ್ಯಮಂತ್ರಿ ಸಿದ್ದರಾಮಯ್ಯ

  • ಸಂವಿಧಾನದ ಬಗ್ಗೆ ನಂಬಿಕೆ, ಗೌರವ ಇಲ್ಲದಿದ್ದವರ ಕೈಯಲ್ಲಿ ಅದು ಉಳಿಯುವುದಿಲ್ಲ.
  • ಸಂವಿಧಾನ ಜಾಗೃತಿ 6000 ಗ್ರಾಮ ಪಂಚಾಯಿತಿ ಗಳನ್ನು ತಲುಪಿದೆ.

ಮೈಸೂರು : ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದ ಮಲ್ಲೇಶ್, ಸದಾ ಜನರ ನಡುವೆಯೇ ಇದ್ದರುಮಲ್ಲೇಶ್ ಅವರು ಬಿಟ್ಟಿರುವ ಹೋರಾಟವನ್ನು ಮತ್ತೆ ಮುಂದುವರೆಸಿದರೆ ಅದೇ ಅವರಿಗೆ ಸಲ್ಲಿಸುವ ನಿಜ ಗೌರವ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ವತಿಯಿಂದ ಮೈಸೂರಿನ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಪ. ಮಲ್ಲೇಶ್ – 90 ಭಾರತ ಜನತಂತ್ರದ ಸಮಕಾಲಿನ ತಲ್ಲಣಗಳು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿಗೆ ದಿನಗಳಲ್ಲಿ ನಾಯಕತ್ವದ ಚಳುವಳಿಯ ಕೊಡುವವರಿಲ್ಲ. ಮಲ್ಲೇಶ್ ಅವರು ಇಲ್ಲದಿದ್ದರೆ ಮೈಸೂರಿನಲ್ಲಿ ಚಳುವಳಿನೇ ನಡೆಯುವುದಿಲ್ಲ ಎನ್ನುವ ಹಾಗಾಗಿದೆ ಎಂದರು.

ಸಂವಿಧಾನ ಜಾಗೃತಿ 6000 ಗ್ರಾಮ ಪಂಚಾಯಿತಿ ಗಳನ್ನು ತಲುಪಿದೆ :  ಭಾರತದ ಸಂವಿಧಾನ ಜಾರಿಯಾಗಿ 75 ನೇ ವರ್ಷದಲ್ಲಿದ್ದೇವೆ. ಇದು ಅಮೃತ ವರ್ಷವಾಗಿರುವುದರಿಂದ ರಾಜ್ಯ ಸರ್ಕಾರ 2024 ಜನವರಿ 26 ರಿಂದ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಏರ್ಪಾಡು ಮಾಡಲಾಗಿದೆ. ಫೆಬ್ರವರಿ 23 ರವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ 6000 ಗ್ರಾಮ ಪಂಚಾಯಿತಿ ಗಳನ್ನು ತಲುಪಿದೆ.

24 ಮತ್ತು 25 ರಂದು ನಡೆದ ಬೃಹತ್ ಸಮಾವೇಶದಲ್ಲಿ 50 ಸಾವಿರ ಜನ ಪಾಲ್ಗೊಂಡಿದ್ದರು. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ಸಂವಿಧಾನಕ್ಕೆ ರಕ್ಷಣೆ ಇಲ್ಲದಿರುವ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ.

ಪ್ರಜಾಸತ್ತೆಯನ್ನು ಹಾಗೂ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿರುವುದು ಪ್ರತಿ ಭಾರತೀಯನ ಕರ್ತವ್ಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ನಾವು ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನೇ ಮಾಡಬೇಕಾಗುತ್ತದೆ ಎಂದು ಭಾಷಣಕಾರರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಲ್ಲಬೇಕು : ವೈರುಧ್ಯತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದೇವೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದ್ದು, ರಾಜಕೀಯ ಸ್ವಾತಂತ್ರ್ಯ ದೊರೆತಿದೆ.

ರಾಜಕೀಯ ಪ್ರಜಾಪ್ರಭುತ್ವದಲ್ಲಿ ಒಂದು ಮತ ಒಂದು ಮೌಲ್ಯವಿದ್ದಂತೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಇಲ್ಲ. ನಮ್ಮಲ್ಲಿ ಅಸಮಾನತೆ ಇದೆ. ಎಲ್ಲಿಯವರೆಗೆ ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯ ಪ್ರಜಾಪ್ರಭುತ್ವ ಸಾರ್ಥಕವಾಗುವುದಿಲ್ಲ ಎಂದರು.

ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣ : ಸಂವಿಧಾನದಲ್ಲಿ ಹೇಳಿರುವ ಸ್ವಾತಂತ್ರ್ಯ, ಸಮಾನತೆ , ಭ್ರಾತೃತ್ವ ವನ್ನು ಒಂದರಿಂದ ಮತ್ತೊಂದನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಸಾಮಾಜಿಕ, ಆರ್ಥಿಕ ಸಮಾನತೆ ಇರಬೇಕು. ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣವಾಗಿದೆ ಎಂದರು.

ನಡವಳಿಕೆ ಗಮನಿಸಿ :  ನರೇಂದ್ರ ಮೋದಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ನಮ್ಮ ಶಾಸಕ ಬಸನಗೌಡ ಯತ್ನಾಳ್, ಟೋಪಿ ಹಾಕಿದವರು, ಗಡ್ಡ ಬಿಟ್ಟವರು ಹಾಗೂ ಬುರ್ಖಾ ಹಾಕಿದವರು ಕಚೇರಿಗೆ ಬರಬೇಡಿ ಎನ್ನುತ್ತಾರೆ. ನಮ್ಮ ನಡವಳಿಕೆ ಹೇಗಿದೆ ಎಂದು ಗಮನಿಸಬೇಕು. ವಿಮರ್ಶೆ ಮಾಡುವ ಶಕ್ತಿ ಇಲ್ಲದಿದ್ದರೆ ಹೀಗಾಗುತ್ತದೆ ಎಂದರು.

ವಿದ್ಯಾವಂತರು ಅನೇಕರಿಗೆ ಸಂವಿಧಾನದ ಪೀಠಿಕೆ ಏನು ಹೇಳುತ್ತದೆ ಎಂದು ಗೊತ್ತಿಲ್ಲ. ಸಂವಿಧಾನದ ರೀತಿಯಲ್ಲಿ ನಡೆದುಕೊಳ್ಳುವವ ಕೈಯಲ್ಲಿ ಸಂವಿಧಾನವಿದ್ದರೆ ಅದು ಶ್ರೇಷ್ಠ ಸಂವಿಧಾನವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದರು.

ಸಂವಿಧಾನದ ಬಗ್ಗೆ ನಂಬಿಕೆ, ಗೌರವ ಇಲ್ಲದಿದ್ದವರ ಕೈಯಲ್ಲಿ ಅದು ಉಳಿಯುವುದಿಲ್ಲ :  ಸಂವಿಧಾನದ ಬಗ್ಗೆ ನಂಬಿಕೆ, ಗೌರವ ಇಲ್ಲದಿದ್ದವರ ಕೈಯಲ್ಲಿ ಅದು ಉಳಿಯುವುದಿಲ್ಲ. ಇದು ನಮ್ಮ ಮುಂದಿರುವ ಸವಾಲು ಎಂದರು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ವನ್ನೇ ದುರ್ಬಲಗೊಳಿಸಿದರೆ ಸಂವಿಧಾನ ಹೇಗೆ ಶಕ್ತಿ ಯುತವಾಗಿರಲು ಸಾಧ್ಯ?

ಜನರನ್ನು ದಾರಿತಪ್ಪಿಸಬಾರದು :  ಹಿಂದುತ್ವ ಮೃದು ಮತ್ತು ಕಟುವಾಗಿರಲು ಸಾಧ್ಯವಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟು ಜನರನ್ನು ದಾರಿತಪ್ಪಿಸಬಾರದು. ಸಂವಿಧಾನಕ್ಕೆ ಬೆದರಿಕೆ ಇದೆ ಎನ್ನುವುದು ನಿಜ. ಅನಂತ ಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾಗಲೇ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಾಗ ಆರ್.ಎಸ್.ಎಸ್, ಬಿಜೆಪಿ ಏನೂ ಕ್ರಮ ತೆಗೆದುಕೊಳ್ಳಲಿಲ್ಲ. ಅದು ಬಿಜೆಪಿಯ ಅಜೆಂಡಾ ಎಂದು ಸೂಚಿಸುತ್ತದೆ. ಸ್ವಾರ್ಥ ಅಧಿಕಾರಕ್ಕಾಗಿ ಶೂದ್ರರೂ ಅಲ್ಲಿಗೆ ಹೋಗುತ್ತಿದ್ದಾರೆ ಎಂದರು.

ಪ.ಮಲ್ಲೇಶ್ ಅವರ ಪುತ್ರಿ ಸವಿತಾ ಪ.ಮಲ್ಲೇಶ್ ಉಗ್ರನರಸಿಂಹೇಗೌಡ, ಡಾ. ಹರೀಶ್ ಕುಮಾರ್, ಅಭಿರುಚಿ ಗಣೇಶ್, ತೀಸ್ತಾ ಸೆತೆಲ್ವಾಡ್, ಕಾಳ ಚೆನ್ನೇಗೌಡ, ಉಮಾದೇವಿ, ಭಾರತದ ಬಾಬು ಜಗಜೀವನ್ ರಾಮ್ ಅವರ ಮೊಮ್ಮಗ ಅಂಶುಲ್ ಅಭಿಜಿತ್ ಮೊದಲಾದವರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ