ಬೆಂಗಳೂರು : ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ (ಸೋಮವಾರ) ಆರಂಭವಾಗುತ್ತಿದೆ. ಫೆಬ್ರವರಿ 23ರವರೆಗೂ ಈ ಅಧಿವೇಶನ ನಡೆಯಲಿದೆ. ಆರೋಪ ಪ್ರತ್ಯಾರೋಪಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳು ಸಜ್ಜಾಗಿವೆ.
ಬಜೆಟ್ ಅಧಿವೇಶನ ಆಗಿರುವುದರಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಜನರ ನಿರೀಕ್ಷೆಯೂ ಹೆಚ್ಚಿದೆ. ಇತ್ತೀಚಿಗಷ್ಟೆ ಕೇಂದ್ರದ ಬಜೆಟ್ ಮಂಡನೆಯಾಗಿದೆ. ಅನುದಾನ ತಾರತಮ್ಯ ವಿಚಾರಕ್ಕೆ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲು ನೀಡಿಲ್ಲ ಎಂದು ಕೈ ನಾಯಕರು ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ತೆರಿಗೆ ವಿಚಾರಕ್ಕೆ ವಾಗ್ಯುದ್ಧ ಮುಂದುವರಿದಿರುವ ಬೆನ್ನಲ್ಲೇ ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಇದರೊಂದಿಗೆ ಮತ್ತೊಂದು ಸುತ್ತಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಹೊಸ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೆ ಆಗಿರುವ ಪ್ರಗತಿ, ಗ್ಯಾರಂಟಿ ಅನುಷ್ಠಾನ ಹಾಗೂ ಮುನ್ನೋಟವನ್ನು ನೀಡಲಿದ್ದಾರೆ.
ಮಂಗಳವಾರದಿಂದ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಆರಂಭವಾಗಲಿದೆ. ಭಾಷಣದ ಚೌಕಟ್ಟು ಹೊರತಾಗಿ ಹಲವು ವಿಷಯಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ. ಆಡಳಿತ, ವಿಪಕ್ಷಗಳ ಆರೋಪ, ಪ್ರತ್ಯಾರೋಪಕ್ಕೆ ಸದನ ಸಾಕ್ಷಿಯಾಗಲಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹತ್ತಾರು ವಿಷಯ ಇಟ್ಟುಕೊಂಡ ಪ್ರತಿಪಕ್ಷಗಳು ಮುಗಿಬೀಳಲು ಸಜ್ಜಾಗಿವೆ.