ಹರಿಹರ : ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ಜಿಲ್ಲೆಗಳಲ್ಲಿರುವ ಪರಿವಾರ/ ತಳವಾರ ಜನಾಂಗದವರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ತೀರ್ಮಾನ ಮಾಡಲಾಗಿದೆ. ಕೂಡಲೇ ಈ ಬಗ್ಗೆ ಸಭೆ ಕರೆದು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಇಲ್ಲಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರಪೀಠದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆ- 2024 ಹಾಗೂ ಜನಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಈಗಾಗಲೇ ಈ ಸಮುದಾಯವನ್ನು ಎಸ್.ಟಿ ಗೆ ಸೇರ್ಪಡೆ ಮಾಡಿದೆ. ಇಲ್ಲಿ ಇನ್ನೂ ಪ್ರವರ್ಗದಲ್ಲಿರುವ ನಿಮ್ಮ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ವಾಪಸ್ಸು ಪಡೆಯಲೂ ಸೂಚನೆ ನೀಡಲಾಗಿದೆ ಎಂದರು.
ಅಕ್ಷರ ಸಂಸ್ಕೃತಿಯಿಂದ ವಂಚಿತರಾದಾಗ ಸಾಮಾಜಿಕ ಆರ್ಥಿಕ ಅಸಮಾನತೆ ನಿರ್ಮಾಣವಾಗಿರುವುದು. ವಿದ್ಯೆ, ಬುದ್ಧಿವಂತಿಕೆ ಯಾರ ಸ್ವತ್ತಲ್ಲ. ಬುದ್ಧಿ, ಜ್ಞಾನ ಪಡೆದಾಗ ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ. ಎಲ್ಲರಿಗೂ ಸಮಾನ ಎಂಬ ಭಾವ ಬರಲು ಸ್ವಾಭಿಮಾನ ಅಗತ್ಯ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.