ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ʼಸೋ ಕಾಲ್ಡ್ ಗ್ಯಾರಂಟಿಗಳುʼ ಎಂದು ಕಟುವಾಗಿ ಟೀಕಿಸಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಇಂಥ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಗತ್ಯ ವೆಚ್ಚದ ಅನುತ್ಪಾದಕ, ಅಲ್ಪಾವಧಿ ಲಾಭದ ಗ್ಯಾರಂಟಿಗಳು ಇವಾಗಿವೆ ಎಂದು ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳ ಬಗ್ಗೆ ದೇಶದ ಜನರ ಗಮನ ಸೆಳೆದರು.
ಕಾಂಗ್ರೆಸ್ ಪಕ್ಷದ ಸದಸ್ಯರ ಆಕ್ಷೇಪಣೆ, ಗದ್ದಲದ ನಡುವೆಯೂ ತಮ್ಮ ಮಾತುಗಳನ್ನು ಮುಂದುವರಿಸಿದ ಅವರು; ಜಂತರ್‌ಮಂತರ್‌ನಲ್ಲಿ ಕಾಂಗ್ರೆಸ್‌ನವರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಅವರು ನನ್ನನ್ನೂ ಸೇರಿ ಎಲ್ಲರನ್ನೂ ಬರುವಂತೆ ಕರೆದಿದ್ದಾರೆ. ಈ ದೇಶದ ರಾಜಕೀಯ ಪರಿಸ್ಥಿತಿ ಹೇಗಾಗಿದೆ ಎಂದರೆ, ರಾಜಕೀಯ ಲಾಭಕ್ಕಾಗಿ ಅನಗತ್ಯ ವೆಚ್ಚದ ಅನುತ್ಪಾದಕ ವೆಚ್ಚಗಳನ್ನು ಯಥೇಚ್ಛವಾಗಿ ಮಾಡಲಾಗುತ್ತಿದೆ. ನಾನೆಂದೂ ಇಂಥದ್ದನ್ನು ಮಾಡಿಲ್ಲ ಎಂದರು.





