Mysore
14
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಮನೀಶ್ ಪಾಂಡೆ ಏಕಾಂಗಿ ಹೋರಾಟ: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ

ಸೂರತ್ : ಗುಜರಾತಿನ ಸೂರತ್‌ನಲ್ಲಿ ಭಾನುವಾರ ನಡೆದ 2024ರ ರಣಜಿ ಟ್ರೋಫಿ ಪಂದ್ಯಾವಳಿಯ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ ತಂಡವು ಒಂದು ವಿಕೆಟ್‌ ಅಂತರದ ರೋಚಕ ಗೆಲುವು ಸಾಧಿಸಿದೆ.

ಒತ್ತಡದಲ್ಲಿಯೂ ಕರ್ನಾಟಕ ತಂಡದ ಗೆಲುವಿಗೆ ಸ್ಟಾರ್ ಬ್ಯಾಟರ್ ಮನೀಶ್ ಪಾಂಡೆ ಏಕಾಂಗಿ ಹೋರಾಟ ನಡೆಸಿ ಪಂದ್ಯವನ್ನು ಗೆಲ್ಲಿಸಿದರು.

ಗೆಲುವಿಗೆ ರೈಲ್ವೇಸ್ ನೀಡಿದ 226 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಮನೀಶ್ ಪಾಂಡೆ 121 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 67 ರನ್ ಗಳಿಸಿ ಆಸರೆಯಾದರು.

ಎದುರಾಳಿ ತಂಡದ ಬೌಲರ್ಗಳು 6 ವಿಕೆಟ್‌ಗೆ 99 ರನ್‌ಗಳಿಸಿ ತಗ್ಗಿಸಿದ ನಂತರ, ಮನೀಶ್ ಪಾಂಡೆ ಅವರು ಶ್ರೀನಿವಾಸ್ ಶರತ್ ಮತ್ತು ವಿಜಯ್ಕುಮಾರ್ ವೈಶಾಕ್ ಅವರೊಂದಿಗೆ ನಿರ್ಣಾಯಕ ಜೊತೆಯಾಟದ ಮೂಲಕ ಕರ್ನಾಟಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ಅಲ್ಲದೆ ಕೊನೆಯಲ್ಲಿ ವಿದ್ವತ್ ಕಾವೇರಪ್ಪ ಮತ್ತು ವಾಸವಿ ಕೌಶಿಕ್ ಜೊತೆಗೂಡಿ ಮನೀಶ್ ಪಾಂಡೆ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕರ್ನಾಟಕ ತಂಡದ ಇನ್ನಿಂಗ್ಸ್ ಆರಂಭಿಸಿದ ಡಿ. ನಿಶ್ಚಲ್ ಮತ್ತು ರವಿಕುಮಾರ್ ಸಮರ್ಥ್ ಉತ್ತಮ ಆರಂಭ ನೀಡಲಿಲ್ಲ. ಕೇವಲ 1 ರನ್ ಗಳಿಸಿದ್ದ ಡಿ. ನಿಶ್ಚಲ್ ಔಟಾದರು. ನಂತರ ಬಂದ ಕೆವಿ ಅನೀಶ್ ಮತ್ತೊಂದು ಕಡೆಯಿಂದ ಸಮರ್ಥ್ ಉತ್ತಮ ಸಾಥ್ ನೀಡಿದರು.

ಕೆವಿ ಅನೀಶ್ ನಿರ್ಗಮಿಸಿದ ಬಳಿಕ ಒಂದರ ಹಿಂದೆ ಒಂದು ವಿಕೆಟ್ಗಳು ಬೀಳಲು ಪ್ರಾರಂಭಿಸಿದವು. ಟರ್ನ್ ಮತ್ತು ಬೌನ್ಸ್ ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಹೆಣಗಾಡಿದರು. ನಿಕಿನ್ ಜೋಸ್ ಸೊನ್ನೆ ಸುತ್ತಿದರೆ, ಹಾರ್ದಿಕ್ ರಾಜ್ 14 ರನ್ ಗಳಿಸಿದರು. ಕಿಶನ್ ಬೆದರೆ ಸೊನ್ನೆಗೆ ಔಟಾದರು. ಆಗ ಕರ್ನಾಟಕವು ಸೋಲಿನತ್ತ ಮುಖ ಮಾಡಿತ್ತು. ಆಗ ಬಂದ ಶ್ರೀನಿವಾಸ್ ಶರತ್ 23 ರನ್ ಗಳಿಸಿ ಮನೀಶ್ ಪಾಂಡೆಗೆ ಬೆಂಬಲ ನೀಡಿದರೆ, ವಿಜಯ್ ಕುಮಾರ್‌ ವೈಶಾಕ್ 38 ರನ್ ಗಳಿಸಿದರು. ಕೊನೆಯಲ್ಲಿ ವಿಧ್ವತ್ ಕಾವೇರಪ್ಪ 8 ರನ್ ಮತ್ತು ವಾಸುಕಿ ಕೌಶಿಕ್ 1 ರನ್ ಗಳಿಸಿ ಕರ್ನಾಟಕ ಗೆಲ್ಲಲು ನೆರವಾದರು.

ರೈಲ್ವೇಸ್ ತಂಡದ ಪರ ಆಕಾಶ್ ಪಾಂಡೆ 34.4 ಓವರ್ಗಳಲ್ಲಿ 94 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಹಿಮಾಂಶು ಸಂಗ್ವಾನ್ 2 ವಿಕೆಟ್, ಮೊಹಮ್ಮದ್ ಸೈಫ್ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ನಲ್ಲಿ ರೈಲ್ವೇಸ್ ತಂಡ 155 ರನ್ಗಳಿಗೆ ಆಲೌಟ್ ಆಗಿತ್ತು. ಪ್ರತ್ಯುತ್ತರವಾಗಿ, ಕರ್ನಾಟಕ ತಂಡ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿ 174 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು 19 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತು. ನಂತರ ತನ್ನ ಎರಡನೇ ಇನ್ನಿಂಗ್ಸ್ ಆಡಿದ ರೈಲ್ವೇಸ್ ತಂಡ 244 ರನ್‌ಗಳಿಗೆ ಮತ್ತೆ ಆಲೌಟ್ ಆಯಿತು. ಕೊನೆಯ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 226 ರನ್‌ ಗುರಿ ಪಡೆ ಕರ್ನಾಟಕ ತಂಡ 9 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಈ ಮೂಲಕ 2024ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಆಡಿದ 5 ಪಂದ್ಯಗಳಲ್ಲಿ 3 ಗೆಲುವು, 1 ಸೋಲು ಮತ್ತು 1 ಡ್ರಾದೊಂದಿಗೆ ಅಂಕಪಟ್ಟಿಯಲ್ಲಿ 21 ಅಂಕಗಳನ್ನು ಕಲೆಹಾಕಿದ್ದು, ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!