ಶಿವಮೊಗ್ಗ: ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಖಾಸಗಿ ಕಂಪನಿಗಳು ಹೊರರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುವಂತಿಲ್ಲ ಎಂಬ ಕಾನೂನನ್ನು ರೂಪಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ʼರಾಜ್ಯದಲ್ಲಿ ಇವತ್ತಿಗೆ ವಿದ್ಯುತ್ ಅಭಾವ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಅಭಾವ ಬರಬಹುದು. ಹೀಗಾಗಿ ಈ ಕ್ರಮ ಅನಿವಾರ್ಯʼ ಎಂದು ಇಂಧನ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಿಳಿಸಿದರು. ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳು ವಾರ್ಷಿಕ ನಿರ್ವಹಣೆಗೆಂದು ಇತ್ತೀಚೆಗೆ ಉತ್ಪಾದನೆ ನಿಲ್ಲಿಸಿದ್ದವು. ರಾಜ್ಯದಲ್ಲಿ ದಿನವೊಂದಕ್ಕೆ 8ರಿಂದ 9 ಸಾವಿರ ಮೆಗಾವ್ಯಾಟ್ ಇರುತ್ತಿದ್ದ ವಿದ್ಯುತ್ ಬೇಡಿಕೆ ಈ ವೇಳೆ ಏಕಾಏಕಿ 16 ಸಾವಿರ ಮೆಗಾವ್ಯಾಟ್‌ಗೆ ಏರಿಕೆಗೊಂಡಿತ್ತು. ಇದನ್ನು ನಿಭಾಯಿಸಲು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವುದರ ಜತೆಗೆ ರೈತರಿಗೆ 7 ಗಂಟೆಗಳ ಕಾಲ ಕೊಡಲಾಗುತ್ತಿದ್ದ ವಿದ್ಯುತ್ ಪ್ರಮಾಣವನ್ನು 5 ಗಂಟೆಗೆ ಇಳಿಸಲಾಗಿತ್ತು. ಸದ್ಯ ರೈತರಿಗೆ ಮೊದಲಿನ ಹಾಗೆಯೇ ವಿದ್ಯುತ್ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ಅಭಾವ ತಲೆದೋರದ ಹಾಗೆ ಈಗಲೇ ಎಚ್ಚರಿಕೆ ವಹಿಸಬೇಕಾಗಿರುವುದು ಅನಿವಾರ್ಯ ಎಂದರು.