ಬೆಂಗಳೂರು: ಡಿಕೆ ಸುರೇಶ್ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆಯನ್ನು ಪ್ರಸ್ತಾಪಿಸಿದ ಸಿಎಂ, ಪ್ರತ್ಯೇಕ ದೇಶ ಕೇಳೋಕೆ ಆಗಲ್ಲ. ದೇಶ ಸಾರ್ವಭೌಮತೆ ಇರಬೇಕು. ನಮ್ಮದು ಫೆಡರಿಸಂ ದೇಶ ಎಂದು ಸಂಸದ ಡಿಕೆ ಸುರೇಶ್ ಅವರು ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಮಾತನಾಡಿದರು. ಕೇಂದ್ರ ಸರ್ಕಾರಕ್ಕೆ ತೆರಿಗೆ ಸಂಗ್ರಹಕ್ಕೆ ಬೇರೆ ಏರಿಯಾ ಇಲ್ಲ. ರಾಜ್ಯದಿಂದ ಕೊಡುವ ತೆರಿಗೆ ಹಂಚಿಕೆ ಮಾಡುತ್ತಾರೆ. ನಮಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. ನಮ್ಮ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುತ್ತೆ. ಆದರೂ ನಮಗೆ ಅನ್ಯಾಯ ಆಗುತ್ತಿದೆ ಎಂದು ಹೇಳಿದರು.
ಅಖಂಡ ಭಾರತವಾಗಿಯೇ ಇರಬೇಕು. ದಕ್ಷಿಣ ಭಾರತ, ಉತ್ತರ ಭಾರತ ಅಂತ ಇರಬಾರದು. ಅಖಂಡ ಭಾರತವಾಗಿಯೇ ಇರಬೇಕು. ಅಖಂಡ ಕರ್ನಾಟಕವಾಗಿಯೇ ಕರ್ನಾಟಕ ಇರಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಡಿಕೆ ಸುರೇಶ್ ಹೇಳಿದ್ದೇನು?: ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದರು. ಈ ವೇಳೆ ಇಂದಿನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಕೆ ಸುರೇಶ್, ಇಂದಿನ ಬಜೆಟ್‍ನಲ್ಲಿ ಹೊಸತೇನು ಇಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇಂದು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ಬಿಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ಆದ್ರೆ ಪ್ರತ್ಯೇಕ ದೇಶ ಕೇಳಬೇಕಾಗುತ್ತದೆ ಎಂದು ದೆಹಲಿಯಲ್ಲಿ ಸಂಸದರು ಪ್ರತಿಕ್ರಿಯೆ ನೀಡಿದ್ದರು. ಸದ್ಯ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.