Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಬೇಡಿ: ಎಚ್‌ಡಿಕೆಗೆ ತಿವಿದ ಚೆಲುವರಾಯಸ್ವಾಮಿ

ಮಂಡ್ಯ: ಜವಾಬ್ದಾರಿಯುತ ಪ್ರತಿಪಕ್ಷ ನಾಯಕರಾಗಿರುವ ನೀವು, ಸರ್ಕಾರವನ್ನು ಸರಿ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕೆ ವಿನಃ ಶಾಂತಿ ಕದಡಬಾರದು. ಜಿಲ್ಲೆಯ ಜನರೇ ನಿಮ್ಮನ್ನು ಗೆಲ್ಲಿಸಿ ಆಶಿರ್ವಾದಿಸಿದ್ದಾರೆ. ಆದರೆ ಅದೇ ಜಿಲ್ಲೆಯ ಜನರ ನೆಮ್ಮದಿಯನ್ನು ಎಚ್‌.ಡಿ ಕುಮಾರಸ್ವಾಮಿ ಹಾಳು ಮಾಡಲು ಮುಂದಾಗಿರುವುದು ನೋವು ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀವು (ಕುಮಾರಸ್ವಾಮಿ) ಸಿಎಂ ಆಗುವುದಕ್ಕೆ ಮಂಡ್ಯ ಜನರ ಆಶೀರ್ವಾದ ಕಾರಣ. ಮುಂದೆ ನಾವು ಸರಿಯಾದ ದಾರಿಯಲ್ಲಿ ಸಾಗದಿದ್ದರೆ ನಮಗೂ ಜನ ಪಾಠ ಕಲಿಸಬಹುದು. ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಅದು ಬಿಟ್ಟು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಬೇಡಿ. ಜಿಲ್ಲೆಯ ಜನರ ಜೀವನ ಹಾಳುಮಾಡಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕುಮಾರಸ್ವಾಮಿ ಕೇಸರಿ ಶಾಲು ಹಾಕುವ ಬದಲು ನೇರವಾಗಿ ಬಿಜೆಪಿಗೆ ಸೇರ್ಪಡೆಯಾಗಿ. ರೈತರ ಹಸಿರು ಶಾಲು ಬಿಟ್ಟಾಯ್ತು. ಜೆಡಿಎಸ್​ನ ಜಾತ್ಯತೀತತೆಯನ್ನೂ ಬಿಟ್ಟಾಯ್ತು. ಇನ್ನು ಬಿಜೆಪಿಗೆ ಸೇರಿಕೊಳ್ಳಿ. ಎಲ್ಲವನ್ನೂ ಜನ ತೀರ್ಮಾನಿಸಲಿದ್ದಾರೆ ಇಂತಹ ಗಿಮಿಕ್‌ಗೆ ಜನರು ಮರುಳಾಗಲ್ಲ ಎಂದು ಎಚ್‌ಡಿಕೆ ವಿರುದ್ಧ ಚೆಲುವರಾಯಸ್ವಾಮಿ ಕಿಡಿ ಕಾರಿದರು.

ಚುನಾವಣೆ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಂಗಾಪುರದಲ್ಲಿ ಕುಳಿತುಕೊಂಡು ಬಿಜೆಪಿಯನ್ನು ಟೀಕಿಸಿದಷ್ಟು ಬೇರೆ ಯಾರೂ ಟೀಕಿಸಿಲ್ಲ. ಜೆಡಿಎಸ್​ನವರು ಟೀಕೆ‌ಮಾಡಿದಷ್ಟು ಕಾಂಗ್ರೆಸ್ ಕೂಡ ಮಾಡಿಲ್ಲ. ಇದೀಗ ಅವರಿಬ್ಬರೂ (ಜೆಡಿಎಸ್, ಬಿಜೆಪಿ) ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದೇವೇಗೌಡರೇ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು ಎಂದು ಚಲುವರಾಯಸ್ವಾಮಿ ಹೇಳಿದರು.

ಕೆರಗೋಡು ಗ್ರಾಮದಲ್ಲಿ ಧರ್ಮದ ಧ್ವಜ ಆರೋಹಣ ಮಾಡಲು ಯಾರು ಪ್ರೇರೇಪಣೆ ಕೊಟ್ಟಿದ್ದಾರೋ ಗೊತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ಇದರ ಲಾಭ ಪಡೆಯಲು ಈ ರೀತಿ ಮಾಡಿದ್ದಾರೋ ತಿಳಿಯದು ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ.

ಇನ್ನೂ ಹನುಮಧ್ವಜ ವಿಚಾರವಾಗಿ ಮಂಡ್ಯಕ್ಕೆ ಬಿಜೆಪಿ ನಾಯಕ ಸಿ.ಟಿ ರವಿ ಮತ್ತು ಆರ್‌ ಅಶೋಕ್‌ ಅವರು ಸೋಮವಾರ ಭೇಟಿ ನೀಡಿದ್ದರ ಕುರಿತಾಗಿ ತೀವ್ರ ವಾಗ್ದಾಳಿ ನಡೆಸಿರುವ ಚೆಲುವರಾಯಸ್ವಾಮಿ, ಸಿಟಿ ರವಿ ಅವರು ಪ್ರಜಾಪ್ರಭುತ್ವದ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆರ್‌. ಅಶೋಕ್‌ ಅವರು ಪ್ರತಿ ಪಕ್ಷದ ನಾಯಕನ ಸ್ಥಾನದಲ್ಲಿದ್ದು, ಕ್ಷುಲಕ್ಕ ರಾಜಕಾರಣ ಮಾಡಲು ಮಂಡ್ಯಕ್ಕೆ ಬಂದಿದ್ದರು ಎಂದು ಕಿಡಿಕಾರಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ