Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಫೆ.1ರ ಬಜೆಟ್ ಮಧ್ಯಂತರದ್ದೊ ಪೂರ್ಣಾವಧಿಯದ್ದೋ?

ಪ್ರೊ.ಆರ್.ಎಂ.ಚಿಂತಾಮಣಿ

ನಿರ್ಮಲಾ ಸೀತಾರಾಮನ್‌ರವರು ಅರ್ಥಮಂತ್ರಿಯಾಗಿ ಆರನೇ ಬಜೆಟ್ ಮತ್ತು ಮೊದಲನೇ ಮಧ್ಯಂತರ ಬಜೆಟ್‌ನ್ನು ಬರುವ ಗುರುವಾರ ಫೆ.1ರಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದೇ ಏಪ್ರಿಲ್-ಮೇ ತಿಂಗಳುಗಳಲ್ಲಿ ಲೋಕಸಭೆಗೆ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ 2024-25ನೇ ಹಣಕಾಸು ವರ್ಷಕ್ಕಾಗಿ ಮಂಡಿಸಲ್ಪಡುತ್ತಿರುವ ತಾತ್ಕಾಲಿಕ ಮುಂಗಡಪತ್ರ ಇದಾಗಿದೆ. ಅನಿವಾರ್ಯ ಸಂಸದೀಯ ಪ್ರಕ್ರಿಯೆ.

ಸಂವಿಧಾನದಲ್ಲಿ ಮಧ್ಯಂತರ ಮುಂಗಡಪತ್ರದ ಪರಿಕಲ್ಪನೆಯನ್ನು ನೇರವಾಗಿ ಹೇಳಿಲ್ಲವಾದರೂ 77 ವರ್ಷಗಳ ಮಧ್ಯಂತರ ಬಜೆಟ್ ಅನುಭವದಂತೆ ಚುನಾವಣೆಗೆ ಮಂಡನೆಯ ಮೊದಲು ಮಂಡಿಸಲ್ಪಡುವ ಬಜೆಟ್‌ಗಳು ಪೂರ್ವನಿದರ್ಶನಗಳಂತೆ ಮಧ್ಯಂತರ ಬಜೆಟ್‌ಗಳಾಗಿರುತ್ತವೆ. ಹಾಲಿ ವರ್ಷಕ್ಕಾಗಿ ಅಂಗೀಕೃತ ಬಜೆಟ್ ಭಾಗವಾದ ಹಣಕಾಸು ಕಾಯ್ದೆ 2023 ಪ್ರಕಾರ ಇಂದಿನ ಸರ್ಕಾರಕ್ಕೆ ಏಪ್ರಿಲ್ ಒಂದರಿಂದ ಖಜಾನೆಯಿಂದ ನಿತ್ಯದ ಖರ್ಚಿಗೆ ಹಣ ತೆಗೆಯಲು ಅಧಿಕಾರ ಇರುವುದಿಲ್ಲ. ಅಲ್ಲದೆ ಚುನಾವಣೆ ಪ್ರಕ್ರಿಯೆಗಳು ಮುಗಿದು ಹೊಸ ಸರ್ಕಾರದ ರಚನೆಯಾಗುವವರೆಗೆ ಈ ಸರ್ಕಾರ ಜೋಪಾಸನಾ (Care Taker) ಸರ್ಕಾರವಾಗಿ ಮುಂದುವರಿಯಬೇಕಾಗುತ್ತದೆ. ಈ ಅವಧಿಗಾಗಿ (ಸಾಮಾನ್ಯವಾಗಿ ಮೂರು-ನಾಲ್ಕು ತಿಂಗಳು) ಖರ್ಚು ಮಾಡಲು ಸದನದ ಅನುಮತಿ ಪಡೆಯಬೇಕಾಗುತ್ತದೆ. ಇದನ್ನೇ ಲೇಖಾನುದಾನ (Vote on Account) ಅಂಗೀಕಾರ ಎನ್ನುವುದು. ಇದು ಪೂರ್ಣ ಪ್ರಮಾಣದ ಬಜೆಟ್ ಆಗಲಿಕ್ಕಿಲ್ಲ.

ಸದ್ಯದ ಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಆದಾಯ ಮತ್ತು ವೆಚ್ಚಗಳನ್ನು ಲಭ್ಯವಿರುವ ಎಂಟು ತಿಂಗಳ ಅಂಕಿ ಸಂಖ್ಯೆಗಳಿಂದ ಪಡೆದು ಅವುಗಳ ಆಧಾರದ ಮೇಲೆ ವಾರ್ಷಿಕ ಅಂದಾಜುಗಳನ್ನು ತಯಾರಿಸಿ ಸದನಗಳಲ್ಲಿ ಮಂಡಿಸಿ ನಾಲ್ಕು ತಿಂಗಳ ಲೇಖಾನುದಾನಕ್ಕೆ ಒಪ್ಪಿಗೆ ಕೇಳಲಾಗುತ್ತದೆ. ಮಾರ್ಚ್ 31ರೊಳಗಾಗಿ ಚರ್ಚೆಗಳಾಗಿಯೋ ಚರ್ಚೆಗಳಿಲ್ಲದೆಯೋ ಅಂಗೀಕಾರವಾಗಿ ರಾಷ್ಟ್ರಪತಿಗಳ ಸಹಿ ಪಡೆದಿರಲೇಬೇಕಾಗುತ್ತದೆ. ಅಷ್ಟರೊಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಪೂರ್ಣಾವಧಿ ಬಜೆಟ್ ಅಂಗೀಕರಿಸಲ್ಪಟ್ಟು ಹೊಸ ಹಣಕಾಸು ಕಾಯ್ದೆ ಜಾರಿಗೆ ಬರಬೇಕು. ಈಗಿರುವ ಪಕ್ಷದ ಸರ್ಕಾರವೇ ಅಧಿಕಾರದಲ್ಲಿ ಮುಂದುವರಿದರೂ ತಾತ್ವಿಕವಾಗಿ ಹೊಸ ಲೋಕಸಭೆಯ ಆಶಯದಂತೆ ತನ್ನ ಈಗಿನ ಚುನಾವಣಾ ಪ್ರಣಾಲಿಕೆಯಂತೆ ಪೂರ್ಣಾವಧಿ ಮುಂಗಡಪತ್ರ ಮಂಡಿಸಿ ಅಂಗೀಕಾರ ಪಡೆಯಲೇಬೇಕು. ಜನತೆಯ ಹೊಸ ಆದೇಶಕ್ಕೆ ಮನ್ನಣೆ ಎಂದರ್ಥ.

ಪೂರ್ಣಾವಧಿ ಬಜೆಟ್‌ ಗಿಂತ ಮೊದಲು ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರ ಸಂಪಾದಕತ್ವದಲ್ಲಿ ತಯಾರಾದ ಹಾಲಿ ವರ್ಷದ ವಿವರವಾದ ಆರ್ಥಿಕ ಸಮೀಕ್ಷೆಯನ್ನು ಪೂರ್ವಭಾವಿಯಾಗಿ ಮಂಡಿಸಲಾಗುತ್ತದೆ. ಮಧ್ಯಂತರ ಮುಂಗಡಪತ್ರಕ್ಕೆ ಅದಿರುವುದಿಲ್ಲ. ಇದು ಕೇವಲ ಖರ್ಚಿಗೆ ಅನುಮತಿ ಕೇಳುವುದಾಗಿರುವುದರಿಂದ ತೆರಿಗೆಗಳಲ್ಲಿ ಬದಲಾವಣೆ ಮಾಡಬಾರದು ಮತ್ತು ಹೊಸ ಯೋಜನೆಗಳನ್ನು ಪ್ರಕಟಿಸಬಾರದು ಎಂಬ ಅಲಿಖಿತ ನಿಯಮಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಕೆಲವು ಅಪವಾದಗಳೂ ಇವೆ. ಕೆಲವು ಸಲ ಸಮಯಾಭಾವದಿಂದ ಹೊಸ ಸರ್ಕಾರಗಳಿಂದಲೂ ತಾತ್ಕಾಲಿಕ ಬಜೆಟ್ ಮಂಡಿಸಲ್ಪಟ್ಟು ನಂತರ ಪೂರ್ಣಾವಧಿ ಬಜೆಟ್‌ಗಳನ್ನು ಮಂಡಿಸಿದ ಉದಾಹರಣೆಗಳೂ ಇರುತ್ತವೆ.

ಈಗ ನಿರೀಕ್ಷೆಗಳು, ಚರ್ಚೆಗಳು ಬೇಕಿದ್ದವೆ?: ಇದೇ ಪೂರ್ಣಾವಧಿ ಮುಂಗಡಪತ್ರವೆಂದು ಕಲ್ಪನೆ ಮಾಡಿಕೊಂಡೋ ಲೋಕಸಭೆ ಚುನಾವಣೆಗಳನ್ನೇ ಮರೆತಂತೆ ಕಲ್ಪಿಸಿಕೊಂಡೋ ದೇಶಾದ್ಯಂತ ಮಾಧ್ಯಮಗಳಲ್ಲಿ ನಾಳಿನ ಬಜೆಟ್ ಹೀಗಿರುತ್ತದೆ ಹಾಗಿರುತ್ತದೆ ಎಂದು ಚರ್ಚೆಗಳು ನಡೆಯುತ್ತಲೇ ಇವೆ. ದುರಂತವೆಂದರೆ ಇದುಮಧ್ಯಂತರ ಬಜೆಟ್ ಎಂದು ಯಾರೂ ಒಪ್ಪಿಕೊಳ್ಳುತ್ತಿಲ್ಲ. ತೆರಿಗೆದಾರರ ವಿವಿಧ ಗುಂಪುಗಳು ತಮಗೆ ಇಂತಿಂಥ ಅನುಕೂಲಗಳನ್ನು ಹಣಕಾಸು ಮಂತ್ರಿಗಳು ಕೊಡಲಿದ್ದಾರೆ ಎನ್ನುವ ನಿರೀಕ್ಷೆಗಳನ್ನು ಮುಂದಿಟ್ಟಿವೆ. ವಿವಿಧ ಆರ್ಥಿಕ ವಲಯಗಳ ತಜ್ಞರು ಮುಂದಿನ ಪೂರ್ಣಾವಧಿ ಬಜೆಟ್‌ಗೆ ಕಾಯದೆ ತಮ್ಮ ಅಭಿಪ್ರಾಯಗಳನ್ನು ಹರಿಬಿಡುತ್ತಿದ್ದಾರೆ.

ಸರ್ಕಾರಿ ನೌಕರರು ಮತ್ತು ನಿವೃತ್ತರು ತಮ್ಮ ಆದಾಯ ತೆರಿಗೆ ಲೆಕ್ಕ ಹಾಕುವ ಮೊದಲು ಸ್ಟಾಂಡರ್ಡ್ ಡಿಡಕ್ಟನ್ ಮೊತ್ತವನ್ನು ಹೆಚ್ಚಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ವಿವಿಧ ಉಳಿತಾಯಗಳಿಗಾಗಿ ಕಡಿತಗಳನ್ನೂ ಆದಾಯ
ತೆರಿಗೆದಾರರು ನಿರೀಕ್ಷಿಸುತ್ತಿದ್ದಾರೆ.

ಇತ್ತೀಚೆಗೆ ನಿರ್ಮಲಾ ಸೀತಾರಾಮನ್‌ರವರು ಒಂದು ಕಾಲೇಜು ಸಮಾರಂಭದಲ್ಲಿ ‘ಯುವಜನತೆ, ಮಹಿಳೆಯರು, ರೈತರು ಮತ್ತು ಬಡತನದಲ್ಲಿರುವವರು ಈ ನಾಲ್ಕು ವರ್ಗಗಳಿಗೂ ಉತ್ತೇಜನ ಕೊಟ್ಟರೆ ಇಡೀ ಸಮಾಜದ ಅಭಿವೃದ್ಧಿಯಾಗುತ್ತದೆ, ಆರ್ಥಿಕ ನೀತಿ ಇವರೆಲ್ಲರ ಮೇಲೆ ಕೇಂದ್ರೀಕೃತವಾಗಿರುತ್ತದೆ’ ಎಂದು ಹೇಳಿದ್ದಾರೆ. ಇದಾದ ನಂತರ ಚುನಾವಣೆ ಗೆಲ್ಲಲು ಇವರಿಗೆಲ್ಲ ಏನನ್ನಾದರೂ ಇದೇ ಬಜೆಟ್‌ನಲ್ಲಿ ಕೊಡಬಹುದೆಂಬ ನಿರೀಕ್ಷೆಗಳು ಹೆಚ್ಚಾಗಿ ಮನವಿಗಳೂ ಹೋಗುತ್ತಿವೆ.

ಇದಕ್ಕೆ ಪುರಾವೆಯಾಗಿ2019ರ ನಿದರ್ಶನ ಕೊಡಬಹುದು, ಆಗ ಹಂಗಾಮಿ ಹಣಕಾಸು ಸಚಿವರಾಗಿದ್ದ ಪಿಯುಷ್ ಗೋಯಲ್‌ರವರು ಮಧ್ಯಂತರ ಮುಂಗಡಪತ್ರ ಮಂಡಿಸುತ್ತ 75,000 ಕೋಟಿ ರೂ.ಗಳ ‘ಪಿಎಂ ಕಿಸಾನ್’ ಯೋಜನೆಯಲ್ಲದೆ ಕೆಲವು ತೆರಿಗೆ ಸೌಲಭ್ಯಗಳನ್ನೂ ಪ್ರಕಟಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿಯವರು ‘ಇದು ಟ್ರೇಲರ್ ಮಾತ್ರ, ಸಿನೆಮಾ ಅಭಿ ಬಾಕಿ ಹೈ’ ಎಂದಿದ್ದರು. ಅದರಂತೆ ಅವರೇ ಗೆದ್ದರು.

ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದ ನಂತರ ಮತ್ತು ರಾಮಮಂದಿರ ಉದ್ಘಾಟನೆಯಾದ ನಂತರ ಬಿಜೆಪಿ ಲೋಕಸಭೆ ಚುನಾವಣೆಯಲ್ಲೂ ತಾನೇ ಗೆಲ್ಲುವುದು ಎಂದು ಬೀಗುತ್ತಿದೆ. ಇದಕ್ಕೆ ಪೂರಕವೋ ಎಂಬಂತೆ ವಿರೋಧ ಪಕ್ಷಗಳಲ್ಲಿ ಬಿರುಕು ಹೆಚ್ಚುತ್ತಿದೆ.

ಇದರಿಂದಲೂ ಜನರ ನಿರೀಕ್ಷೆಗಳು ಮತ್ತು ಅಪೇಕ್ಷೆಗಳು ಹೆಚ್ಚುತ್ತಿವೆ. ಯಾರಿಗೂ ಕೋಶೀಯ ಶಿಸ್ತಿನ ಬಗ್ಗೆ ಗಮನವೇ ಇಲ್ಲ. ಅಂಥ ‘ಇಂದಿರಾ ಈಸ್ ಇಂಡಿಯಾ’ ಎಂದು ಹೇಳಲ್ಪಡುತ್ತಿದ್ದ ಇಂದಿರಾ ಗಾಂಧಿಯೇ 1977ರಲ್ಲಿ ಸೋತುಹೋದರು. ಯಾರು ಬಲ್ಲರು ನಾಳೆ ಏನಾಗಬಹುದೆಂದು? ಗೆದ್ದವರು ದೇಶದ ಜನರ ಹಿತಕಾಯಬೇಕಷ್ಟೆ.

ಅರ್ಥಶಾಸ್ತ್ರವನ್ನು ಓದಿದ ನಿರ್ಮಲಾ ಪಕ್ಷದ ಹಿತವನ್ನೂ ಕಾಪಾಡಬೇಕು ಮತ್ತು ಅರ್ಥ ವ್ಯವಸ್ಥೆಯ ಶಿಸ್ತನ್ನೂ ಪೋಷಿಸಬೇಕು, ಇವೆರಡರ ನಡುವೆ ಸಂದಿಗ್ಧದಲ್ಲಿರಬೇಕು. ಪಿಯುಷ್ ಗೊಯಲ್‌ರಂತೆ ಉದಾರಿಯೂ ಆಗದೆ ಮತ್ತು ಜಸ್ವಂತ ಸಿಂಗ್ ಮತ್ತಿತರರಂತೆ ಕೈ ಬಿಗಿ ಹಿಡಿಯದೇ ಮಧ್ಯಮ ಮಾರ್ಗ ಅನುಸರಿಸುವ ಸಾಧ್ಯತೆ ಇದೆ.

ಅರ್ಥ ಮಂತ್ರಿಗಳು ಧಾರಾಳವಾಗಿ ಬಜೆಟ್ ಭಾಷಣದಲ್ಲಿ ಮಾಡಬಹುದಾದ ಪಕ್ಷಕ್ಕೂ ದೇಶಕ್ಕೂ ಉಪಯುಕ್ತವಾದ ಕೆಲಸವೊಂದಿದೆ. ಹೇಗೂ ಬಜೆಟ್ ಅಂಕಿ ಸಂಖ್ಯೆಗಳು ಕಡಿಮೆ ಇರುತ್ತವೆ. ಮಧ್ಯಂತರ ಬಜೆಟ್ ಮಂಡಿಸುವಾಗ ತಮ್ಮ ಸರ್ಕಾರದ ಐದು ವರ್ಷಗಳ ಸಾಧನೆಗಳನ್ನು ಎಳೆ ಎಳೆಯಾಗಿ ವಿವರಿಸಬಹುದು. ಇದು ಒಂದು ಜವಾಬ್ದಾರಿಯೂ ಹೌದು. ಅವಕಾಶವೂ ಹೌದು. ತಮ್ಮ ಪ್ರಣಾಳಿಕೆಯಲ್ಲಿಯ ಒಂದೊಂದು ಆಶ್ವಾಸನೆಯನ್ನೂ ತೆಗೆದುಕೊಂಡು ಅದರಲ್ಲಿಯ ಸಾಧನೆಗಳನ್ನು ಅಂಕಿಸಂಖ್ಯೆಗಳ ಸಮೇತ ದಾಖಲಿಸಬಹುದು. ಸದನದ ನಡಾವಳಿ ಪುಸ್ತಕಗಳಲ್ಲಿ ಶಾಶ್ವತವಾಗಿ ಉಳಿಯುತ್ತವೆ.

ನಾವು ನಾಗರಿಕರು ಮಧ್ಯಂತರ ಮುಂಗಡಪತ್ರದ ಸಾಮಾನ್ಯವೆನ್ನಬಹುದಾದ ಇತಿಮಿತಿಗಳನ್ನು ಅರಿತುಕೊಂಡು ನಮ್ಮ ಸಾಮುದಾಯಿಕ ಬೇಡಿಕೆ ಮತ್ತು ನಿರೀಕ್ಷೆಗಳನ್ನು ಸರ್ಕಾರದ ಮುಂದಿಡಬೇಕು. ಸರ್ಕಾರ ನಮ್ಮದೇ ಅಲ್ಲವೆ? ಅದು ಮಾಡುವ ತಪ್ಪು ಒಪ್ಪುಗಳಿಗೆ ನಾವೇ ಹೊಣೆಗಾರರು, ಸಾಮಾನ್ಯ ಅಥವಾ ಪೂರ್ಣಾವಧಿ ಬಜೆಟ್ ಮಂಡನೆಯ ಸಮಯದಲ್ಲಿ ಸರ್ಕಾರ ನಡೆಸುವವರಿಗೆ ಮುಕ್ತ ಅವಕಾಶಗಳಿರುತ್ತವೆ. ನಮ್ಮ ಎಲ್ಲ ಸಮಸ್ಯೆಗಳನ್ನೂ ಅವಗಾಹನೆಗೆ ತರಲು ಅವಕಾಶವಿರುತ್ತದೆ. ರಾಜಕೀಯ ಪಕ್ಷಗಳನ್ನು ದುರುಪಯೋ ಗಪಡಿಸಿಕೊಳ್ಳುವ ಅಥವಾ ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ಯಾರೂ ಮಾಡಬಾರದು. ಮಧ್ಯಂತರ ಬಜೆಟ್‌ ಯಾರ ಕೈಗೂ ದಾಳವಾಗಬಾರದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ